ಮುಂಬಯಿ : ನಿರಂತರ ಮೂರನೇ ದಿನವೂ ಕುಸಿತದ ಹಾದಿಯಲ್ಲಿ ಸಾಗುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 66 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ದೇಶೀಯ ಮತ್ತು ವಿದೇಶೀ ಹೂಡಿಕೆದಾರರು ಶೇರು ಮಾರಾಟಕ್ಕೆ ಮುಂದಾದದ್ದೇ ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಯಿತು. ಪರಿಣಾಮವಾಗಿ ಆಯಿಲ್ ಆ್ಯಂಡ್ ಗ್ಯಾಸ್, ಎಫ್ಎಂಸಿಜಿ, ಮೆಟಲ್, ಪಿಎಸ್‌ಯು bank ಮತ್ತು ಪವರ್ ಸೆಕ್ಟರ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 48.63 ಅಂಕಗಳ ನಷ್ಟದೊಂದಿಗೆ 33,787.11 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 17.90 ಅಂಕಗಳ ನಷ್ಟದೊಂದಿಗೆ 10,393.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಆರಂಭಿಕ ವಹಿವಾಟಿನಲ್ಲಿದ್ದು ಟೆಕ್ ಮಹೀಂದ್ರ, ಟಾಟಾ ಸ್ಟೀಲ್, ಎಸ್‌ಬಿಐ, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 9 ಪೈಸೆಯಷ್ಟು ಕುಸಿದು 64.92 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.