ಹೊಸದಿಲ್ಲಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಸಾಲ ಬಡ್ಡಿ ದರವನ್ನು ಶೇ.0.25ರಷ್ಟು ಏರಿಸಿದ ಪರಿಣಾಮವಾಗಿ ಕಂಡು ಬಂದು ಜಾಗತಿಕ ದೌರ್ಬಲ್ಯವನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 129.01 ಅಂಕಗಳ ನಷ್ಟದೊಂದಿಗೆ 33,006.27 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹೂಡಿಕೆದಾರರು ಲಾಭ ನಗದೀಕರಣದ ಉದ್ದೇಶದಿಂದ ರಿಯಲ್ಟಿ, ಕ್ಯಾಪಿಟಲ್ ಗೂಡ್ಸ್, ಟೆಕ್, ಆಟೋ ಮತ್ತು ಬ್ಯಾಂಕಿಂಗ್ ಶೇರುಗಳನ್ನು ಮಾರಲಾರಂಭಿಸಿದ ಕಾರಣ ಮುಂಬಯಿ ಶೇರು ಮಾರುಕಟ್ಟೆ ದಿನಾಂತ್ಯಕ್ಕೆ ಕುಸಿತಕ್ಕೆ ಗುರಿಯಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.50 ಅಂಕಗಳ ನಷ್ಟದೊ,ದಿಗೆ ದಿನದ ವಹಿವಾಟನ್ನು 10,114.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ಲಾಭಕರ ವಹಿವಾಟಿನಲ್ಲಿ ಒಟ್ಟು 213.60 ಅಂಕಗಳನ್ನು ಸಂಪಾದಿಸಿತ್ತು. ಇಂದು ಬ್ಯಾಂಕ್ ಶೇರುಗಳಲ್ಲಿ ಎಸ್‌ಬಿಐ, ಐಸಿಐಸಿಐ, ಪಿಎನ್‌ಬಿ, ಕೆನರಾ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಶೇರುಗಳು ಶೇ.2.62ರಷ್ಟು ಕುಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,858 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 706 ಶೇರುಗಳು ಮಾತ್ರವೇ ಮುನ್ನಡೆ ಕಂಡವು; 2,013 ಶೇರುಗಳು ಹಿನ್ನಡೆಗೆ ಗುರಿಯಾದವು; 139 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.