ಹುಮನಾಬಾದ್ : ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಲು ಮಾಣಿಕನಗರದ ಮಾಣಿಕಪ್ರಭುಗಳ ಕೃಪೆ ಹೆಚ್ಚಿದೆ ಎಂದು ಮಾಣಿಕ ನಗರ ಸಂಸ್ಥಾನದ ಪೀಠಾಧಿಪತಿಗಳಾದ ಡಾ| ಜ್ಞಾನರಾಜ ಮಾಣಿಕ ಪ್ರಭುಗಳು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಮಾಣಿಕನಗರದ ಮಾಣಿಕಪ್ರಭುಗಳ ದರ್ಶನ ಪಡೆದ ನಂತರ ಪೀಠಾಧಿಪತಿಗಳನ್ನು ಭೇಟಿಮಾಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಬಸವಕಲ್ಯಾಣ ಉಪ ಚುನಾವಣೆ ಸಂದರ್ಭದಲ್ಲಿ ಅವರು 15 ದಿನಗಳ ಕಾಲ ಮಾಣಿಕಪ್ರಭುಗಳ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಿಗ್ಗೆ ದೇವಸ್ಥಾನದ ಎದುರಿಂದ ವಾಯುವಿಹಾರಕ್ಕೆ ತೆರಳುತ್ತಿದ್ದರು. ಮಾಣಿಕಪ್ರ ಭುಗಳ ಸಂಜೀವಿನಿ ಸಮಾಧಿ ದರ್ಶನ ಪಡೆದವರು ಅನೇಕರು ಉನ್ನತ ಸ್ಥಾನಗಳಿಗೆ ಹೋಗಿರುವುದು ಉದಾಹರಣೆಗಳು ಇವೆ. ಅದೇ ರೀತಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ದಿಢೀರನೆ ಮುಖ್ಯಮಂತ್ರಿಗಳಾಗಿದ್ದು, ಇಲ್ಲಿನ ಶ್ರೀಗಳ ಚಮತ್ಕಾರವೆ ಕಾರಣ ಎಂದರು.
ಮುಖ್ಯಮಂತ್ರಿಗಳು ಭೇಟಿ ನೀಡಲಿ
ಮಾಣಿಕಪ್ರಭು ಸಂಸ್ಥಾನದ ಅಡಿಯಲ್ಲಿ ನಡೆಯುತಿರುವ ದಿ| ಮಾಣಿಕ ಪಬ್ಲಿಕ್ ಸ್ಕೂಲ್ ಫೆಬ್ರವರಿ 1ರಂದು 50ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದ್ದು, ಅದ್ದೂರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಕರೆ ತರುವ ಕಾರ್ಯ ಇಲ್ಲಿನ ರಾಜಕೀಯ ಮುಖಂಡರು ಮಾಡಬೇಕು. ವಿಶೇಷವಾಗಿ ಸಚಿವ ಪ್ರಭು ಚೌಹಾಣ್ ಅವರು ಮುಖ್ಯಮಂತ್ರಿಗಳನ್ನು ಕರೆ ತರುವ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದರು. ಇದಕ್ಕೆ ಸಚಿವ ಪ್ರಭು ಚೌಹಾಣ್ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಮಾಣಿಕನಗರಕ್ಕೆ ಕರೆತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ್ ಕಲ್ಲೂರ್, ಯುವ ಮುಖಂಡ ಡಾ| ಸಿದಲ್ಲಿಂಗಪ್ಪಾ ಪಾಟೀಲ್ , ಹಿರಿಯ ಮುಖಂಡ ಪದ್ಮಾಕರ್ ಪಾಟೀಲ್ , ಬಸವರಾಜ ಆರ್ಯ, ಸೋಮನಾಥ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಇದ್ದರು.