Advertisement

22 ವರ್ಷಗಳ ವೃತ್ತಿಪರ ಆಟಕ್ಕೆ ತೆರೆ; ಟೆನಿಸ್‌ಗೆ ಗುಡ್‌ಬೈ ಹೇಳಿದ ಬ್ರಿಯಾನ್‌ ಸಹೋದರರು !

08:09 PM Aug 27, 2020 | mahesh |

ಕ್ಯಾಲಿಫೋರ್ನಿಯಾ (ಯುಎಸ್‌ಎ): ಜಾಗತಿಕ ಟೆನಿಸ್‌ ಇತಿಹಾಸದ ಸರ್ವಶ್ರೇಷ್ಠ ಜೋಡಿಯೆನಿಸಿದ ಅಮೆರಿಕದ ಬ್ರಿಯಾನ್‌  ಸಹೋದರರಾದ ಬಾಬ್‌ ಮತ್ತು ಮೈಕ್‌ ತಮ್ಮ 22 ವರ್ಷಗಳ ವೃತ್ತಿಪರ ಆಟಕ್ಕೆ ಗುಡ್‌ಬೈ ಹೇಳಿದ್ದಾರೆ. ಅವಳಿ ಸೋದರರ ಈ ವಿದಾಯದ ಸುದ್ದಿಯನ್ನು “ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ. “ಆಟ ಮುಂದುವರಿಸುವುದನ್ನು ನಾವಿನ್ನೂ ಬಯಸುತ್ತೇವೆ. ನಮ್ಮಲ್ಲಿ ಇನ್ನೂ ಉತ್ತಮ ಆಟ ಉಳಿದುಕೊಂಡಿದೆ. ಆದರೆ ನಮ್ಮ ದೇಹ ಸ್ಪಂದಿಸದು. ಹೀಗಾಗಿ ಟೆನಿಸ್‌ನಿಂದ ದೂರ ಉಳಿಯುವ ಕಠಿನ ತೀರ್ಮಾನಕ್ಕೆ ಬಂದಿದ್ದೇವೆ’ ಎಂಬುದಾಗಿ ಬ್ರಿಯಾನ್‌ ಸೋದರರು ಹೇಳಿದ್ದಾರೆ.

Advertisement

ಒಲಿಂಪಿಕ್ಸ್‌ ಸ್ವರ್ಣ ಸಾಧಕರು
42 ವರ್ಷದ ಅವಳಿ ಸೋದರರು ಪುರುಷರ ಡಬಲ್ಸ್‌ನಲ್ಲಿ ಒಟ್ಟು 119 ಪ್ರಶಸ್ತಿಗಳನ್ನು ಜಯಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಇದರಲ್ಲಿ 16 ಗ್ರಾನ್‌ಸ್ಲಾಮ್‌, 39 ಎಟಿಪಿ ಮಾಸ್ಟರ್ 1000 ಮತ್ತು 4 ಎಟಿಪಿ ಫೈನಲ್ಸ್‌ ಪ್ರಶಸ್ತಿಗಳು ಸೇರಿವೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದು ಇವರ ಮಹಾನ್‌ ಸಾಧನೆಯಾಗಿದೆ. ರಾಬರ್ಟ್‌ ಚಾರ್ಲ್ಸ್‌ ಬಾಬ್‌ ಬ್ರಿಯಾನ್‌ ಮತ್ತು ಮೈಕಲ್‌ ಕಾರ್ಲ್ ಮೈಕ್‌ ಬ್ರಿಯಾನ್‌ ಎಂಬುದು ಇವರ ಪೂರ್ತಿ ಹೆಸರು. 1978ರ ಎಪ್ರಿಲ್‌ 29ರಂದು ಇವರ ಜನನವಾಗಿತ್ತು. ಇವರಲ್ಲಿ ಮೈಕ್‌ ಬ್ರಿಯಾನ್‌ ಎರಡು ನಿಮಿಷ ದೊಡ್ಡವರು. ಇವರಿಬ್ಬರಲ್ಲಿ ಮೈಕ್‌ ಬ್ರಿಯಾನ್‌ 2018ರಲ್ಲಿ ಹೆಚ್ಚುವರಿಯಾಗಿ 2 ಗ್ರಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಆಗ ಜಾಕ್‌ ಸಾಕ್‌ ಇವರ ಜೋಡಿಯಾಗಿದ್ದರು. ಅಂದು ಬಾಬ್‌ ಬ್ರಿಯಾನ್‌ ಗಾಯಾಳಾಗಿ ವಿಶ್ರಾಂತಿಯಲ್ಲಿದ್ದರು.

ಗೆಲುವಿನೊಂದಿಗೆ ವಿದಾಯ
ಬ್ರಿಯಾನ್‌ ಸೋದರರು ಗೆಲುವಿನೊಂದಿಗೇ ಟೆನಿಸ್‌ ಬದುಕಿಗೆ ವಿದಾಯ ಹೇಳಿರುವುದು ವಿಶೇಷ. ಫೆಬ್ರವರಿಯಲ್ಲಿ ನಡೆದ “ಡೆಲ್ರೆ ಬೀಚ್‌ ಓಪನ್‌’ ಟೆನಿಸ್‌ ಕೂಟದಲ್ಲಿ ಇವರು ಚಾಂಪಿಯನ್‌ ಆಗಿದ್ದರು. ಬಳಿಕ ಕೊರೊನಾದಿಂದಾಗಿ ಕ್ರೀಡಾ ಜಗತ್ತು ಸ್ತಬ್ಧಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next