Advertisement

ಸರಕಾರದ ನಿರ್ಲಕ್ಷ್ಯಕ್ಕೆ ನಲುಗಿದ ಬಿಆರ್‌ಟಿಎಸ್‌!

02:05 PM Oct 15, 2020 | sudhir |

ಹುಬ್ಬಳ್ಳಿ: ರಾಜ್ಯದ ಏಕೈಕ ತ್ವರಿತ ಸಾರಿಗೆ ಸೇವೆ ಹುಬ್ಬಳ್ಳಿ – ಧಾರವಾಡ ಬಿಆರ್‌ಟಿಎಸ್‌ ಯೋಜನೆಯನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಆರಂಭದ ಆರ್ಥಿಕ ನಷ್ಟ ಭರಿಸಲು 35 ಕೋಟಿ ರೂ. ನೀಡಬೇಕೆನ್ನುವ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ವಾಯವ್ಯ ಸಾರಿಗೆ ಸಂಸ್ಥೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಸಚಿವ ಸಂಪುಟ ತೀರ್ಮಾನಕ್ಕೆ ಕವಡೆ ಕಾಸಿನ ಕಿಮ್ಮತ್ತು
ಇಲ್ಲದಂತಾಗಿದೆ.

Advertisement

ಆರ್ಥಿಕವಾಗಿ ಸಂಪೂರ್ಣ ಕುಸಿದು ಹೋಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಾಲಿಗೆ ಚಿಗರಿ ಸೇವೆ ಬಿಳಿಯಾನೆಯಾಗಿದೆ. ಬರುವ ಸಾರಿಗೆ ಆದಾಯದಷ್ಟೇ ಸಾರಿಗೆ ವೆಚ್ಚವಾಗುತ್ತಿದ್ದು, ಪ್ರತಿ ತಿಂಗಳು ಕನಿಷ್ಠ 5-5.5 ಕೋಟಿ ರೂ. ನಷ್ಟ
ಅನುಭವಿಸುತ್ತಿದೆ. ಇಂತಹ ಪರಿಸ್ಥಿತಿ ಉದ್ಭವವಾಗಲಿದೆ ಎನ್ನುವ ಕಾರಣಕ್ಕೆ ಚಿಗರಿ ಸೇವೆ ಆರಂಭದಲ್ಲಿ ಸಿಬ್ಬಂದಿ ವೇತನ, ಮೂಲ ಸೌಕರ್ಯ, ಡಿಸೆಲ್‌ ಸೇರಿದಂತೆ ಇನ್ನಿತರೆ ವೆಚ್ಚ ಸರಿದೂಗಿಸಲು ಆರು ತಿಂಗಳ ಅವಧಿಗೆ 35 ಕೋಟಿ ರೂ. ಪರಿಹಾರ ರೂಪದಲ್ಲಿ ನೀಡಲು 2018 ಅಕ್ಟೋಬರ್‌ ತಿಂಗಳಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದೀಗ ಪ್ರತಿ ತಿಂಗಳು
ವಾಯವ್ಯ ಸಾರಿಗೆ ಸಂಸ್ಥೆಗೆ ನೀಡಬೇಕಾದ ಹಣವನ್ನು ಹಂತ ಹಂತವಾಗಿ ನೀಡಲು ಎರಡು ಸರಕಾರಿ ಆದೇಶಗಳು ಹೊರ ಬಿದ್ದರೂ ಎರಡು ವರ್ಷದಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ನಯಾಪೈಸೆ ಬಂದಿಲ್ಲ.

ಇದನ್ನೂ ಓದಿ:ಅವಧಿ ಮುಗಿದ ಲೈಸೆನ್ಸ್ ನೀಡಿದ ಶಿವಮೊಗ್ಗ ಪಾಲಿಕೆಗೆ ಗ್ರಾಹಕರ ವೇದಿಕೆ ಚಾಟಿ

ಸರಕಾರ ನಿರ್ಲಕ್ಷ್ಯ : ರಾಜ್ಯದ ಮೊದಲ ಹಾಗೂ ಮಾದರಿ ಯೋಜನೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಪ್ರೋತ್ಸಾಹ ನೀಡಬೇಕಾಗಿತ್ತು. ಈ ಕುರಿತು ಧ್ವನಿ ಎತ್ತಬೇಕಾದ ಈ ಭಾಗದ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಸಚಿವ ಸಂಪುಟ ಸಭೆಯ
ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಹಾಗೂ ಹಣಕಾಸು ಇಲಾಖೆ ಕಸದ ತೊಟ್ಟಿಗೆ ಎಸೆದಂತಿದೆ.

ಆದೇಶಕ್ಕೆ ಮಾತ್ರ ಸೀಮಿತ: 35 ಕೋಟಿ ರೂ. ಏಕಕಾಲಕ್ಕೆ ನೀಡಲು ಸಾಧ್ಯವಿಲ್ಲವೆನ್ನುವ ಕಾರಣಕ್ಕೆ 2019-20 ಸಾಲಿನಲ್ಲಿ 20 ಕೋಟಿ ನೀಡಲು 2020 ಸೆಪ್ಟಂಬರ್‌ 5ಕ್ಕೆ ಸರಕಾರದ ಆದೇಶ ಹೊರಡಿಸಿದೆ. ಇಡೀ ವರ್ಷ 20 ಕೋಟಿ ರೂ.ಗಾಗಿ ಅಲೆದಾಡಿದ್ದು
ಬಿಟ್ಟರೆ ಒಂದು ರೂಪಾಯಿ ಕೂಡ ಬರಲಿಲ್ಲ. ಇನ್ನು 2020-21ನೇ ಸಾಲಿನಲ್ಲಿ 10 ಕೋಟಿ ರೂ. ನೀಡಲು ಸರಕಾರ 2020 ಸೆಪ್ಟಂಬರ್‌ 19ರಂದು ಮತ್ತೂಂದು ಆದೇಶ ಹೊರಡಿಸಿದೆ. ಈ ಕಂತಿನ ಹಣ ಕೂಡ ಇನ್ನೂ ಬಿಡುಗಡೆಯಾಗಿಲ್ಲ.

Advertisement

ಇದನ್ನೂ ಓದಿ: ಭದ್ರಾ ಹುಲಿ ಯೋಜನೆಯ ಬಫರ್ ಜೋನ್ ಘೋಷಣೆಗೆ ವಿರೋಧ: ಎನ್.ಆರ್.ಪುರ ತಾಲೂಕು ಬಂದ್

ಪ್ರತ್ಯೇಕ ಕಂಪನಿ ಪ್ರಹಸನ: ಸಚಿವ ಸಂಪುಟ ಸಭೆ ನಿರ್ಧಾರದಂತೆ ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ನಗರ ವಿಭಾಗ ರಚನೆಯಾಗಿ ಆರು ತಿಂಗಳಿಗೆ 35 ಕೋಟಿ ರೂ. ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಮಧ್ಯೆ ಕೆಲ ಬಿಆರ್‌ಟಿಎಸ್‌ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಅಡಿಯಲ್ಲಿ ಪ್ರತ್ಯೇಕ ಕಂಪನಿ ರಚಿಸಿ ಆ ಮೂಲಕ ಚಿಗರಿ ಸೇವೆ ನಿರ್ವಹಿಸಬೇಕು
ಎನ್ನುವ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರದ ಮಟ್ಟದಲ್ಲಿ ದೊಡ್ಡ ಲಾಭಿ ನಡೆಸಿದರು. ಇದು ಕೈಗೂಡದಿದ್ದಾಗ ಅನಿವಾರ್ಯವಾಗಿ ಪ್ರತ್ಯೇಕ ವಿಭಾಗ ರಚಿಸಲಾಯಿತು.

ಇಷ್ಟರಲ್ಲಿ ತಿಂಗಳುಗಳೇ ಕಳೆದಿದ್ದರಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಬರಬೇಕಾದ ಹಣಕ್ಕೆ ಕೊಕ್ಕೆ ಬಿದ್ದಂತಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ಕನಸಿನ ಕೂಸು ಬಿಆರ್‌ಟಿಎಸ್‌ ಯೋಜನೆಗೆ ಸರಕಾರ ನೀರೆರೆಯುವ ಕೆಲಸ ಮಾಡುತ್ತಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ 35 ಕೋಟಿ ರೂ. ಹಣ ಪಡೆಯಲು ಎರಡು ವರ್ಷಗಳಿಂದ ಕಸರತ್ತುಗಳು ನಡೆದರೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ : ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತ! ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಸರಕಾರದಿಂದ ಹಣ ಬರಲಿದೆ ಎನ್ನುವ ಭರವಸೆಯಿಂದ ವಾಯವ್ಯ ಸಾರಿಗೆ ಸಂಸ್ಥೆ ಖರ್ಚು ವೆಚ್ಚಗಳನ್ನು ನಿರ್ವಹಿಸುತ್ತಿದ್ದು, ಸರಕಾರದ ಅಸಹಕಾರದಿಂದ 100 ಬಸ್‌ಗಳನ್ನು ನಿರ್ವಹಿಸುವುದು ಸಂಸ್ಥೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಎರಡು ವರ್ಷ ಕಳೆದಿದ್ದರೂ ವಾಯವ್ಯ ಸಾರಿಗೆ ಸಂಸ್ಥೆಗೆ ಒಂದು ರೂಪಾಯಿ ಬಂದಿಲ್ಲ. 10 ಕೋಟಿ ರೂ. ಸಂಸ್ಥೆಗೆ ನೀಡಲು
ಇತ್ತೀಚೆಗೆ ಒಂದು ಆದೇಶ ಹೊರಡಿಸಿದೆ. ಈ ಕುರಿತು ಸಾರಿಗೆ ಸಚಿವರೊಂದಿಗೆ ಮಾತನಾಡಿದ್ದೇನೆ. ಗುರುವಾರ ಸಚಿವ ಸಂಪುಟ
ಸಭೆ ನಡೆಯಲಿದ್ದು, ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಸಂಪೂರ್ಣ ಹಣ ತರಲು ಪ್ರಯತ್ನಿಸುತ್ತೇನೆ. ಸಾರಿಗೆ ಸಂಸ್ಥೆಗೆ ಸೇರಬೇಕಾದ ಹಣ ಬೇರಾರೂ ಪಡೆಯಲು ಸಾಧ್ಯವಿಲ್ಲ.
– ವಿ.ಎಸ್‌.ಪಾಟೀಲ, ಅಧ್ಯಕ್ಷ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next