Advertisement

ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ತಡೆಗೆ ಸಜ್ಜು!

09:03 PM Feb 17, 2020 | Lakshmi GovindaRaj |

ಯಳಂದೂರು: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳಬಹುದಾದ ಕಾಡ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಸನ್ನದ್ಧವಾಗಿದೆ. ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಕಾಡಿನ ಸಂರಕ್ಷಣೆಗೆ ಮುಂದಾಗಿದೆ. ಬೇಸಿಗೆ ಸಮೀಪಿಸುತ್ತಿರುವ ಸಮಯದಲ್ಲಿ ಕೆಲವೆಡೆ ಕಾಡ್ಗಿಚ್ಚು ಕಾಣಿಸಿಕೊಂಡು ಅಪಾರ ಪ್ರಮಾಣದ ವನ ಸಂಪತ್ತು ನಾಶವಾಗುತ್ತದೆ. ಜತೆಗೆ ವನ್ಯಜೀವಿಗಳೂ ಅಪಾರ ಸಂಕಷ್ಟ ಅನುಭವಿಸಬೇಕಾಗುತ್ತದೆ.

Advertisement

ಈ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ತಡೆಯಲು ಮುಂಜಾಗೃತಾ ಕ್ರಮಗಳ ಕುರಿತು ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ. ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ 625 ಚ.ಕಿ.ಮೀ ವ್ಯಾಪ್ತಿ ಒಳಗೊಂಡಿದೆ. ಆದರಲ್ಲಿ ಯಳಂದೂರು, ಕೆ.ಗುಡಿ, ಪುಣಜನೂರು, ಚಾಮರಾಜನಗರ, ಕೊಳ್ಳೇಗಾಲ, ಬೈಲೂರು ಸೇರಿ 6 ವಲಯಗಳನ್ನು ಹೊಂದಿದೆ.

ಕಾಡಿನಲ್ಲಿ ಬೆಂಕಿ ಏಕೆ ಕಾಣಿಸಿಕೊಳ್ಳುತ್ತದೆ?: ಕಾಡ್ಗಿಚ್ಚಿಗೆ ಪ್ರಮುಖ ಕಾರಣ ಮಾನವ. ಕಾಡಿನಲ್ಲಿ ಎಲೆ ಉದುರುವ ಸಮಯದಲ್ಲಿ ಬೆಂಕಿ ಹಾಕುವ ಕಲೆಯನ್ನು ಕೆಲವರು ಕರಗತ ಮಾಡಿಕೊಂಡಿದ್ದಾರೆ. ಇವರ ನಿಯಂತ್ರಣ ಅರಣ್ಯ ಇಲಾಖೆಗೆ ಸವಾಲಾಗಿದೆ. ಎಷ್ಟೇ ಮಟ್ಟದ ಪ್ರಮಾಣದಲ್ಲಿ ವಾಚರ್‌ಗಳನ್ನು ನೇಮಿಸಿದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ನೈಸರ್ಗಿಕವಾಗಿ ಬೆಂಕಿ ಕಾಣಿಸಿಕೊಳ್ಳುವುದು ತೀರಾ ವಿರಳ.

ಇದನ್ನು ನಂದಿಸುವುದು ಸವಾಲಿನ ಕೆಲಸವಾಗುತ್ತದೆ. ಸಾಮಾನ್ಯವಾಗಿ ಎರಡೂ ಮೂರು ಗುಡ್ಡಗಳು ಸೇರುವ ತಳ ಭಾಗದಲ್ಲಿ ಕೆಲವು ಕಿಡಿಗೇಡಿಗಳು ಬೆಂಕಿಯನ್ನು ಹಚ್ಚುತ್ತಾರೆ. ಇದು ಮೇಲ್ಮುಖವಾಗಿ ವಿಸ್ತರಿಸುವುದರಿಂದ ಇದನ್ನು ನಂದಿಸಲು ಹರ ಸಾಹಸ ಪಡುವ ಸ್ಥಿತಿ ಅರಣ್ಯ ಇಲಾಖೆಯದ್ದಾಗಿದೆ. 2017 ಹಾಗೂ 2019ರಲ್ಲೂ ಬಿಆರ್‌ಟಿ ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸಿ ನೂರಾರು ಎಕರೆ ಅರಣ್ಯ ಸಂಪತ್ತು ನಷ್ಟವಾಗಿತ್ತು.

ಬೆಂಕಿ ರೇಖೆ ನಿರ್ಮಾಣ: ಬೇಸಿಗೆ ಪರಿಣಾಮದಿಂದ ಮರಗಳ ಎಲೆಗಳು ಉದುರುವುದು ಸಾಮಾನ್ಯ. ಕಾಡಿನ ನೆಲ ತರಗೆಲೆಗಳ ಹಾಸಿನಿಂದ ಕಾಡಿನ ರಸ್ತೆಯ ಎರಡು ಬದಿಯಲ್ಲಿರುವ ಲಂಟಾನ ಸೇರಿದಂತೆ ಇತರೇ ಪೊದೆ ಸಸ್ಯಗಳನ್ನು ಕತ್ತರಿಸಿ ಅವುಗಳನ್ನು ಒಣಗಿದ ನಂತರ ರಸ್ತೆಯ 5 ಅಡ್ಡಿ ಉದ್ದಕ್ಕೆ ಬೆಂಕಿ ಹಾಕಿ ಸುಡುತ್ತಾರೆ ಇದಕ್ಕೆ ಬೆಂಕಿರೇಖೆ ಎನ್ನುತ್ತಾರೆ.

Advertisement

ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಸುಮಾರು 1550 ಕಿ.ಮೀ ಬೆಂಕಿ ರೇಖೆ ನಿರ್ಮಾಣ ಈಗಾಗಲೇ ಮಾಡಲಾಗಿದೆ. ಸ್ಥಳೀಯ ಸೋಲಿಗರನ್ನು ಹೆಚ್ಚುವರಿಯಾಗಿ ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. 450 ಜನ ಫೈರ್‌ ವಾಚರ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಇವರಿಗೆ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಕಿಟ್‌, ಗ್ಲೂಕೋಸ್‌, ಇದರ ಜತೆಗೆ ಬೆಂಕಿ ನಂದಿಸುವ ಅತ್ಯಾಧುನಿಕ ಬ್ಲೂವರ್‌ ನೀಡಲಾಗಿದೆ. ಡಿಸೆಂಬರ್‌ನಿಂದ ಮೇ ವರೆಗೆ ಇದಕ್ಕಾಗಿ ಹೆಚ್ಚಿನ ಜಾಗೃತಿ ವಹಿಸಲಾಗುತ್ತದೆ.

ಜನರಲ್ಲಿ ಜಾಗೃತಿ ಕಾರ್ಯಕ್ರಮ: ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಸೋಲಿಗರ ಹಾಡಿಗಳು ಸೇರಿದಂತೆ ಕಾಡಂಚಿನ ಪ್ರದೇಶದಲ್ಲಿ ಬೆಂಕಿಯಿಂದಾಗುವ ಅವಘಡದಿಂದ ಪರಿಸರದ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ. ಇದರಿಂದ ವನ್ಯಪ್ರಾಣಿ, ಪಕ್ಷಿಗಳಿಗೆ ಹಾಗೂ ಸಸ್ಯವರ್ಗದ ಮೇಲೂ ತೊಂದರೆ ಸೇರಿದಂತೆ ಇತರೆ ಮಾಹಿತಿ ಬಗ್ಗೆ ಸೋಲಿಗಾರು, ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಅರಿವುನ್ನು ಮೂಡಿಸುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಅಲ್ಲದೇ, ಜಾಗೃತಿ ಅಭಿಯಾನ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಕಾಡ್ಗಿಚ್ಚು ಬಗ್ಗೆ ಅರಿವನ್ನು ನಿರಂತರವಾಗಿ ಮೂಡಿಸುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮ: ಬಿಆರ್‌ಟಿ ಅರಣ್ಯದಲಿ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಅಪಾರ ಪ್ರಮಾಣದ ಸಂಪತ್ತು ನಾಶವಾಗುತ್ತಿತ್ತು. ಇದರಿಂದ ಮುಂಜಾಗೃತ ಕ್ರಮಗಳಾದ ಬೆಂಕಿರೇಖೆ, ವಾಚ್‌ ಟವರ್‌, ಜನರಲ್ಲಿ ಅರಿವು ಸೇರಿದಂತೆ ಇತರೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಬೆಂಕಿಯನ್ನು ಕಾಣಿಸಿಕೊಳ್ಳದ ರೀತಿಯಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ಯಳಂದೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಯ್ಯ ತಿಳಿಸಿದರು.

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next