ವಿಜಯಪುರ: ಮಹಾರಾಷ್ಟ್ರದಲ್ಲಿ ನಡೆದ ಯುವತಿಯನ್ನು ಚುಡಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಹಾಡಹಗಲೇ ತಲೆ ಬೋಳಿಸಿ, ಚಪ್ಪಲಿ ಹಾರಹಾಕಿ ಮೆರವಣಿಗೆ ಮಾಡಿ ಶಿಕ್ಷೆ ನೀಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಅಮಾನವೀಯ ಕೃತ್ಯ ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಗಡಿಹಾಳ ತಾಂಡಾದ ಬಸವನಗರದಲ್ಲಿ ನಡೆದಿದ್ದು, ತೇಜು ಚವ್ಹಾಣ ಹಾಗೂ ರಾಜು ಚವ್ಹಾಣ ಎಂಬ ಸಹೋದರರನ್ನು ತಾಂಡಾದ ಜನರ ಸಮ್ಮುಖದಲ್ಲಿ ಗ್ರಾ.ಪಂ. ಅಧ್ಯಕ್ಷ ಹಾಗೂ ಗ್ರಾಮದ ಪ್ರಮುಖರು ಯುವತಿಯನ್ನು ಚುಡಾಯಿಸಿದ ವಿಷಯವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜು ಹಾಗೂ ರಾಜು ಇಬ್ಬರನ್ನೂ ಅಪರಾಧಿಗಳು ಎಂದು ತೀರ್ಮಾನಿಸಿ ತಾಂಡಾದ ಪ್ರಮುಖರು ಈ ಅಮಾನವೀಯ ಶಿಕ್ಷೆ ನೀಡಿದ್ದಾರೆ.
ಗ್ರಾಮಸ್ಥರ ಸಮ್ಮುಖದಲ್ಲೇ ತೇಜು, ರಾಜು ಇಬ್ಬರ ತಲೆ ಬೋಳಿಸಿ, ಅವರಿಂದಲೆ ಬೋಳು ತಲೆಗೆ ಸುಣ್ಣ ಸವರಿಕೊಳ್ಳುವಂತೆ ಮಾಡಿದ್ದಾರೆ. ಬಳಿಕ ಇಬ್ಬರ ಕೊರಳಿಗೆ ಹಳೆಯ ಚಪ್ಪಲಿಗಳ ಹಾರ ಹಾಕಿ ತಾಂಡಾದಲ್ಲಿ ಮೆರವಣಿಗೆ ಮಾಡಿದ್ದಾರೆ.ಅಮಾನವೀಯ ಕೃತ್ಯದ ವಿಡಿಯೋ ಇದೀಗ ವೈರಲ್ ಆಗಿದ್ದು, ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಪ್ರತಿನಿಧಿಸುವ ನಾಗಠಾಣ ಮೀಸಲು ಕ್ಷೇತ್ರ ವ್ಯಾಪ್ತಿಯ ತಾಂಡಾದಲ್ಲಿ ಅವರದೇ ಸಮುದಾಯಕ್ಕೆ ಸೇರಿದ ಜನರಿಂದ, ಅವರದೇ ಸಮುದಾಯದ ಇಬ್ಬರು ಯುವಕರ ಮೇಲೆ ಈ ಅಮಾನವೀಯ ದೌರ್ಜನ್ಯದ ಕೃತ್ಯದ ವರದಿಯಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.
ಈ ಕುರಿತು ಪ್ರಕರಣ ದಾಖಲಾದ ಬಗ್ಗೆ ಪೊಲೀಸರು ಇನ್ನೂ ಖಚಿತ ಪಡಿಸಿಲ್ಲ.