Advertisement

Mudbidri: ಮುರಿದ ಕಿರು ಸೇತುವೆಗಳು: ತಾವೇ ನಿರ್ಮಿಸಲು ಮುಂದಾದ ಗ್ರಾಮಸ್ಥರು

03:11 PM Aug 06, 2024 | Team Udayavani |

ಮೂಡುಬಿದಿರೆ: ಈ ವಾರ ಸುರಿದ ಭಾರೀ ಮಳೆಯಿಂದಾಗಿ ಎಲ್ಲ ಕಡೆ, ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿರುವ ಅದೆಷ್ಟೋ ಕಿರುಸೇತುವೆಗಳು ನಾಶವಾಗಿವೆ, ಇಲ್ಲವೇ ಭಾಗಶಃ ಹಾನಿಗೀಡಾಗಿವೆ. ತೋಡು, ಹೊಳೆಗಳನ್ನು ಕಿರು ಸೇತುವೆಗಳ ಮೂಲಕ ಹಾದು ಹೋಗುವ ಅನಿವಾರ್ಯ ಪರಿಸ್ಥಿತಿ ಇರುವ ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು, ರೈತರು, ಪೇಟೆಯತ್ತ ಬರುವವರಿಗೆಲ್ಲ ಸಮಸ್ಯೆ ಉಂಟಾಗಿದೆ. ಇದಕ್ಕೆಲ್ಲ ಸರಕಾರಿ/ ಸ್ಥಳೀಯ ಆಡಳಿತ ಮಟ್ಟದಲ್ಲಿ ಸುಯೋಗ್ಯ ಕ್ರಮ ಜರಗಿಸುವಾಗ ಸಹಜವಾಗಿ ಕೊಂಚ ತಡವಾಗು ವುದನ್ನು ಗ್ರಾಮಸ್ಥರು ಮನವರಿಕೆಮಾಡಿಕೊಂಡಿದ್ದಾರೆ ಮತ್ತು ತಾವೇ ತಮ್ಮಿಂದಾದ ಮಟ್ಟಿಗೆ ಪರಿಹಾರ ಕ್ರಮ ಕೈಗೆತ್ತಿಕೊಂಡಿರುವುದನ್ನು ಗಮನಿಸಬಹುದು.

Advertisement

ಪಡುಮಾರ್ನಾಡು ಗ್ರಾಮದ ಕೇಂಪುಲುನಲ್ಲಿ ನೂರಾರು ಜನರ, ಮಾಡಿಕೊಟ್ಟಿರುವ ಸ್ಥಳೀಯರೊಬ್ಬರ ಜಾಗದಲ್ಲಿದ್ದ ಪುಟ್ಟ ಮೋರಿಯೊಂದು ಮಳೆಗೆ ನಾಶವಾಗಿ ಹೋಗಿದೆ. ಅದಕ್ಕೆ ತಾತ್ಕಾಲಿಕವಾಗಿಯಾದರೂ “ಪರಿಹಾರ ಮಾರ್ಗ’ ಕಂಡುಕೊಳ್ಳಬೇಕಾದ ಅನಿವಾರ್ಯ ಗ್ರಾಮಸ್ಥರಿಗಿದೆ. ಈ ಹಿನ್ನೆಲೆಯಲ್ಲಿ ಜಯಂತ ಪೂಜಾರಿ, ಸತೀಶ್‌, ಮೋನಪ್ಪ ಪೂಜಾರಿ, ಸತೀಶ್‌ ಅಡ್ಕರೆ ಸಹಿತ ಗ್ರಾಮಸ್ಥರು ಅಡಿಕೆ ಮರಗಳನ್ನು ಬಳಸಿ ಪುಟ್ಟ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಪಿಡಿಒ/ ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕ ಸಾಯೀಶ್‌ ಚೌಟ, ಗ್ರಾಮ ಪಂಚಾಯತ್‌ ಸದಸ್ಯ ರಮೇಶ್‌ ಶೆಟ್ಟ ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪಂಚಾಯತ್‌ ವತಿಯಿಂದ ನೀರಿನ ಪೈಪ್‌ ಒದಗಿಸಿ ಮೋರಿಯನ್ನು ತಕ್ಕಮಟ್ಟಿಗೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ತಾತ್ಕಾಲಿಕ ಸಂಪರ್ಕ

ಹೊಸಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಪುಚ್ಚಮೊಗರು ಗ್ರಾಮದ ತಾಕೊಡೆಯ ಅಮ್ಮಿ ಕೋಟ್ಯಾನ್‌ ಅವರ ಮನೆಯ ಬಳಿಯ ತೋಟದಿಂದ ಹಾದು ಹೋಗುವ ಕಿಂಡಿ ಅಣೆಕಟ್ಟು ಅಪಾಯಸ್ಥಿತಿಯಲ್ಲಿದೆ.
ಅನಿವಾರ್ಯವಾಗಿ ಸಂಚಾರ ನಿರ್ಬಂಧಿಸಲಾಗಿದೆ. ಇದೀಗ ಅಡಿಕೆ ಮರಗಳನ್ನು ಬಳಸಿ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಅಧ್ಯಕ್ಷೆ ಸೌಮ್ಯ ಸದಾಶಿವ ಪೂಜಾರಿ ಇವರ ನೇತೃತ್ವ, ಸದಸ್ಯರಾದ ರೆಕ್ಸನ್‌, ರುಖೀಯಾ, ಗ್ರಾಮಸ್ಥರು, ಪಿಡಿಒ ಶೇಖರ ಇವರ ಸಹಕಾರ ಒದಗಿ ಬಂದಿದೆ.

Advertisement

ಹೀಗೆಯೇ ಕೊಚ್ಚಿ ಹೋಗಿದ್ದ, ಮೂಡುಬಿದಿರೆ ತಾಲೂಕಿನ ಪಣಪಿಲ ಗ್ರಾಮದ ಪಣಪಿಲ ಮತ್ತು ಬೋರುಗುಡೆಯನ್ನು ಜೋಡಿಸುವ ಬಿರ್ಮೆರಬೈಲು ಸೇತುವೆಯನ್ನು ತಾತ್ಕಾಲಿಕ ವಾಗಿ ರವಿವಾರ ಪಂಚಾಯತ್‌ ಸದಸ್ಯರು, ಗ್ರಾಮಸ್ಥರು ಸೇರಿಕೊಂಡು ನಿರ್ಮಿಸಿರುವುದನ್ನು ಗಮನಿಸಬಹುದಾಗಿದೆ. ಇನ್ನೂ ಹಲವೆಡೆ ಇಂಥ ಪ್ರಯತ್ನಗಳು ನಡೆಯುತ್ತಿರುವುದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next