ಲೇಹ್: ಗಡಿಯಲ್ಲಿ ಕಾಮಗಾರಿ ಹೆಚ್ಚಳದ ಮೂಲಕ ಕ್ಯಾತೆ ತೆಗೆಯುತ್ತಿರುವ ಚೀನಾಗೆ, ಭಾರತ ತಿರುಗೇಟು ನೀಡಿದ್ದು, ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ 135 ಕಿ.ಮೀ. ಹೆದ್ದಾರಿ ಕಾಮಗಾರಿ ಆರಂಭಿಸಿದೆ.
ಲಡಾಖ್ ವಲಯದ ಎಲ್‌ಒಸಿ ಬಳಿ ಇರುವ ಡೆಮ್ಚೋಕ್ ಹಾಗೂ ಚುಶುಲ್ ನಡುವೆ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ) ಹೆದ್ದಾರಿ ಕಾಮಗಾರಿ ಆರಂಭಿಸಿದ್ದು, ನಿರ್ಮಾಣಕ್ಕಾಗಿ ಬಿಡ್ ಕೂಡ ಕರೆದಿದೆ. ಹೆದ್ದಾರಿಯು ಚುಶುಲ್, ದುಂಗ್ರಿ ,ಡೆಮ್ಚೋಕ್ ಗಳನ್ನು ಸಂಪರ್ಕಿಸಲಿದ್ದು, ಈ ಹೆದ್ದಾರಿಯನ್ನು ಸಿಡಿಎಫ್ಡಿ ರಸ್ತೆ ಎಂದೂ ಕರೆಯಲಾಗುತ್ತಿದೆ.
ಡೆಮೊಕ್ ಭಾರತ ಕಡೆಯ ಜನವಸತಿ ಗ್ರಾಮವಾಗಿದ್ದು, ಚುಶುಲ್ ಪ್ಯಾಂಗ್ಯೋಂಗ್ ಸರೋವರದ ಸಮೀಪದಲ್ಲಿದೆ. ನಿರ್ಮಾಣಗೊಳ್ಳಲ್ಲಿರುವ ರಸ್ತೆ ಎಲ್‌ಒಸಿಗೆ ಹತ್ತಿರವಿದ್ದು, ಮುಂದಿನ 2 ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
2016ರಲ್ಲಿ ಜಮ್ಮು-ಕಾಶ್ಮೀರದ ಸರ್ಕಾರದ ಅವಧಿಯಲ್ಲಿ ಹೆದ್ದಾರಿ ಕಾಮಗಾರಿ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು.2018ರಲ್ಲಿ ಬಿಆರ್‌ಒ ಕಾಮಗಾರಿಯ ಸಂಪೂರ್ಣ ಯೋಜನೆ ಪೂರ್ಣಗೊಳಿಸಿದ್ದು, ಈ ಕಾಮಗಾರಿ ಆರಂಭಿಸಿದೆ.
ಹೆದ್ದಾರಿ ನಿರ್ಮಾಣದ ಮೂಲಕ ಭಾರತೀಯ ಭದ್ರತಾಪಡೆಗಳಿಗೆ ಮಿಲಿಟರಿ ಸರಕು-ಸಾಗಣೆ ಸುಲಭವಾಗಲಿದ್ದು, ಶತ್ರುಗಳನ್ನು ಹಿಮ್ಮೆಟ್ಟಿಸಲು ನೆರವಾಗಲಿದೆ ಎನ್ನಲಾಗಿದೆ.
ಮತ್ತೊಂದೆಡೆ ಗಡಿಯಲ್ಲಿ ಮೂಲಸೌಕರ್ಯ ನಿರ್ಮಾಣಗಳನ್ನೂ ಚೀನ ಹೆಚ್ಚಿಸುತ್ತಿದ್ದು, ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವಂತೆ ತೋರುತ್ತಿದೆ. ಭಾರತ-ಚೀನ ನಡುವೆ ಸಂಘರ್ಷ ನಡೆಯಬಹುದಾದ ಗುಮಾನಿ ಇದ್ದು, ಈ ಬಗ್ಗೆ ಭಾರತ ಕೂಡ ಎಚ್ಚರಿಕೆ ವಹಿಸುತ್ತಿದೆ ಎನ್ನಲಾಗಿದೆ.