ನವದೆಹಲಿ: 1,600ರಲ್ಲಿ ವ್ಯಾಪಾರಿ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿದ್ದ ಈಸ್ಟ್ ಇಂಡಿಯಾ ಕಂಪನಿ ನಂತರ 1690ರಲ್ಲಿ ಕೋಲ್ಕತಾದಲ್ಲಿ(ಇಂದಿನ ಪಶ್ಚಿಮಬಂಗಾಳ) ಕಂಪನಿ ತನ್ನ ಮೊದಲ ಫ್ಯಾಕ್ಟರಿಯನ್ನು ಆರಂಭಿಸಿತ್ತು. ರೇಷ್ಮೆ, ಹತ್ತಿ, ಸಕ್ಕರೆ, ಚಹಾ, ಅಫೀಮು ಸೇರಿದಂತೆ ಹಲವಾರು ಉತ್ಪನ್ನಗಳನ್ನು ಭಾರತದಿಂದ ರಫ್ತು ಮಾಡುತ್ತಿತ್ತು. ಹೀಗೆ ವ್ಯಾಪಾರ ನಡೆಸುತ್ತಿದ್ದ ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದ್ದು ಈಗ ಇತಿಹಾಸವಾಗಿದೆ.
ಇದನ್ನೂ ಓದಿ:Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?
1857ರ ದಂಗೆಯ ನಂತರ ಬ್ರಿಟಿಷರ ವಿರುದ್ಧ ಸೈನಿಕರು ಬಂಡಾಯ ಸಾರಿದ್ದ ಪರಿಣಾಮ 1874ರ ನಂತರ ಈಸ್ಟ್ ಇಂಡಿಯಾ ಕಂಪನಿಯನ್ನು ವಿಸರ್ಜಿಸಲಾಗಿತ್ತು. ಹಲವು ವರ್ಷಗಳ ಕಾಲ ಈಸ್ಟ್ ಇಂಡಿಯಾ ಕಂಪನಿ ನಿಷ್ಕ್ರಿಯವಾಗಿತ್ತು. ಆದರೆ ಈಗ ವಿಪರ್ಯಾಸವೆಂದರೆ ಈಸ್ಟ್ ಇಂಡಿಯಾ ಕಂಪನಿ ಭಾರತದ ಉದ್ಯಮಿ ಸಂಜೀವ್ ಮೆಹ್ತಾ ಅವರ ಒಡೆತನದಲ್ಲಿದೆ…
ಭಾರತೀಯರು ಈಸ್ಟ್ ಇಂಡಿಯಾ ಕಂಪನಿಯನ್ನು ದಬ್ಬಾಳಿಕೆಯ ಮತ್ತು ಅವಮಾನದ ಸಂಕೇತ ಎಂದೇ ಪರಿಗಣಿಸುತ್ತಾರೆ. ಸುಮಾರು 135 ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಷೇರನ್ನು ಹೊಂದಿದ್ದ ಗುಂಪೊಂದು ಕಾಫಿ ಮತ್ತು ಚಹಾ ಮಾರಾಟದ ಉದ್ಯಮ ಆರಂಭಿಸುವ ಮೂಲಕ ಕಂಪನಿಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿತ್ತು. ಆದರೆ ಅದು ಸಫಲವಾಗಿಲ್ಲ. ಕೊನೆಗೆ 2005ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸಂಜೀವ್ ಮೆಹ್ತಾ ಅವರ ತೆಕ್ಕೆಗೆ ಸೇರಿದ್ದು, ಐಶಾರಾಮಿ ಫುಡ್, ಟೀ, ಕಾಫಿ ಮಾರಾಟದ ಕಂಪನಿಯನ್ನಾಗಿ ಬ್ರ್ಯಾಂಡ್ ಮಾಡಿದ್ದಾರೆ.
ಒಂದು ಕಾಲದಲ್ಲಿ ಭಾರತೀಯರನ್ನು ಆಳಿದ್ದ ಕಂಪನಿ, ಈಗ ಭಾರತೀಯನ ಒಡೆತನದಲ್ಲಿದೆ. ಇದೊಂದು ರೀತಿಯಲ್ಲಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದ ಭಾವನೆ ಹುಟ್ಟಿಸುತ್ತಿದೆ. 2010ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೊದಲ ಶಾಖೆಯನ್ನು ಲಂಡನ್ ನಲ್ಲಿ ಪ್ರಾರಂಭಿಸಲಾಗಿತ್ತು.
ಯಾರಿವರು ಸಂಜೀವ್ ಮೆಹ್ತಾ?
ಕಾನ್ಪುರ್ ನಲ್ಲಿ ಜನಿಸಿರುವ ಸಂಜೀವ್ ಮೆಹ್ತಾ ಅವರು ಮುಂಬೈ-ನಾಗ್ಪುರ್ ನಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಸಿಎ ಪದವೀಧರರಾದ ಮೆಹ್ತಾ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್ ಮೆಂಟ್ ಪ್ರೋಗ್ರಾಮ್ ಪದವಿ ಪಡೆದಿದ್ದರು. 1983ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ(ಬೋಪಾಲ್ ಗ್ಯಾಸ್ ದುರಂತದ ಸಂಸ್ಥೆ) ವೃತ್ತಿ ಜೀವನ ಆರಂಭಿಸಿದ್ದರು. 1998ರಲ್ಲಿ ಯೂನಿಲಿವರ್ ಬಾಂಗ್ಲಾದೇಶ್ ನ ವಾಣಿಜ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದು, ಇವರ ಆಡಳಿತದಲ್ಲಿ ಕಂಪನಿ ಭಾರೀ ಪ್ರಮಾಣದ ಯಶಸ್ಸು ಕಂಡ ಪರಿಣಾಮ 2013ರಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. 1993ರಲ್ಲಿ ಮೋನಾ ಮೆಹ್ತಾ ಅವರನ್ನು ವಿವಾಹವಾಗಿದ್ದ ಸಂಜೀವ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.