ಜಮಖಂಡಿ ತಾಲೂಕಿನ ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತ ದೇವರಾಜ ರಾಠಿ ದುರ್ಗಾದೇವಿ ರಸ್ತೆಯ ಹತ್ತಿರವಿರುವ ತಮ್ಮ ಕಲ್ಲು ಗುಡ್ಡದಂತಿದ್ದ 10 ಗುಂಟೆ ಜಮೀನಿನಲ್ಲಿ ಗ್ಯಾಲನ್ ತಳಿಯ ಬದನೆಕಾಯಿ ಬೆಳೆದು ಮಾದರಿಯಾಗಿದ್ದಾರೆ. ತಮ್ಮ 10 ಗುಂಟೆಯಲ್ಲಿ 4 ಟ್ರಕ್ ತಿಪ್ಪೆಗೊಬ್ಬರ, ಎನ್‌ಪಿಕೆ ಮತ್ತು ಮೈಕ್ರೋನೂಟ್ರಿಯಂಟ್ ಸೇರಿ 150 ಕೆ.ಜಿ. ಸರಕಾರಿ ಗೊಬ್ಬರ, 10 ಚೀಲ ಬೇವಿನ ಹಿಂಡಿ ಹಾಕಿ ಬೆಡ್ಡ್ ನಿರ್ಮಾಣ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ ಮೂರೂವರೆ ಫುಟ್‌ನಂತೆ, ಸಾಲಿನಿಂದ ಸಾಲಿಗೆ 6 ಫುಟ್‌ನಂತೆ 600 ಗಿಡಗಳನ್ನು ಪ್ಲಾಸ್ಟಿಕ್ ಮಲಿcಂಗ್ ಮಾಡಿ ನಾಟಿ ಮಾಡಿದ್ದಾರೆ . ನಾಟಿ ಮಾಡಿದ 60 ರಿಂದ 70 ದಿನಕ್ಕೆ ಬೆಳೆ ಕಟಾವಿಗೆ ಬರುತ್ತದೆ. ಗಿಡಗಳು ಬಾಗದಿರಲಿ ಎಂದು ಬಳ್ಳಿಗಳನ್ನು ಮೇಲಕ್ಕೆ ಕಟ್ಟಲಾಗಿದೆ.
ನಾಟಿ ಮಾಡಿದ ನಂತರ 5 -6 ದಿನಕ್ಕೆ ಒಮ್ಮೆ ಡ್ರಿಪ್ ಮೂಲಕ ಜೀವಾಮೃತ ಮತ್ತು ನೀರಿನಲ್ಲಿ ಕರಗುವ ಸರಕಾರಿ ಗೊಬ್ಬರಗಳನ್ನು ಹಾಕಬೇಕು. ಇದರಿಂದ ಬೆಳೆಗಳು ಉತ್ತಮ ವಾಗಿ ಬರುತ್ತವೆ. ಅಲ್ಲದೆ ವಾತಾವರಣಕ್ಕೆ ತಕ್ಕಂತೆ ಔಷಧಿ ಯನ್ನು ಸಿಂಪಡಿಸಿ ಕಾಳಜಿ ಪೂರ್ವಕವಾಗಿ ಬೆಳೆಸಿದರೆ ಬೆಳೆ ಉತ್ತಮವಾಗಿ ಬರುತ್ತದೆ. ಕಾಯಿಗಳಿಗೆ ಉಷ್ಣತೆ ಹೆಚ್ಚಿಗೆ ತಗುಲ ಬಾರದು ಎಂದು ನೆರಳು ಮಾಡಲು ಸೀರೆಗಳನ್ನು ಕಟ್ಟಿ ನೆರಳಿನ ವ್ಯವಸ್ಥೆ ಮಾಡಿದ್ದೇನೆ ಎನ್ನುತ್ತಾರೆ ದೇವರಾಜ ರಾಠಿ.
ಒಂದು ಬದನೆಕಾಯಿಯ ತೂಕ 900 ಗ್ರಾಂನಿಂದ 1 ಕೆ.ಜಿ.ವರೆಗೆ ಇದ್ದು, ಅಂದಾಜು 1 ಗಿಡಕ್ಕೆ 100 ಕೆ.ಜಿ. ಇಳುವರಿ ಬರುತ್ತಿದ್ದು, 8 ರಿಂದ 10 ತಿಂಗಳ ಬೆಳೆಯಾಗಿರುವ ಬದನೆಯನ್ನು 10 ಗುಂಟೆಯಲ್ಲಿ 600 ಸಸಿಗಳಿಂದ 60 ಟನ್ ಬದನೆಕಾಯಿಯ ಇಳುವರಿಯನ್ನು ಪಡೆಯಬಹುದು. ಈ ತಳಿಯ ಬದನೆಕಾಯಿಗೆ ಗೋವಾ, ಅಹಮದಾಬಾದ್, ಮುಂಬಯಿ, ಹೈದರಾಬಾದ್‌ಗಳಲ್ಲಿ ಉತ್ತಮ ಮಾರುಕಟ್ಟೆ ಇದೆ. ಸದ್ಯ ಕೆ.ಜಿ. ಗೆ 25 ರೂ. ಮಾರಾಟವಾಗುತ್ತಿದೆ. ಅದು ಮುಂದಿನ ತಿಂಗಳಲ್ಲಿ ರೂ. 40ರ ಆಸುಪಾಸಿಗೆ ಹೋಗಬಹುದು ಎನ್ನುತ್ತಾರೆ ದೇವರಾಜ.
ಮಹಾರಾಷ್ಟ್ರದಿಂದ ಬೀಜವನ್ನು ತರಿಸಿ ಇಲ್ಲಿಯೇ ಸಸಿಗಳನ್ನು ತಯಾರಿಸಿರುವುದರಿಂದ ಸಸಿಯ ವೆಚ್ಚ ಕಡಿಮೆಯಾಗಿದೆ. ಒಟ್ಟು ಖರ್ಚು 1.5 ಲಕ್ಷ ಆಗಿದ್ದು. ಲಕ್ಷಾಂತರ ಲಾಭ ಬಂದಿದೆ.
ಕಿರಣ ಶ್ರೀಶೈಲ ಆಳಗಿ