Advertisement

Dharwad University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

06:10 PM Aug 06, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಕ್ವಿಂಟಲ್‌ಗ‌ಟ್ಟಲೇ ರಾಸಾಯನಿಕ ಗೊಬ್ಬರ ಹಾಕಿ, ನೂರಾರು ಲೀಟರ್‌ ಕೀಟನಾಶಕ ಬಳಸಿ ಕೃಷಿ ಮಾಡುವುದು ಈಗ
ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಕೃಷಿ ಕೊನೆಗಾಣಿಸಲು ಧಾರವಾಡ ಕೃಷಿ ವಿವಿ ಜೈವಿಕ ರಸಗೊಬ್ಬರ, ಜೀವಾಣುಗಳು ಮತ್ತು ಕ್ರಿಮಿನಾಶಕಗಳನ್ನು ಸಂಶೋಧಿಸಿದೆ. ಅವುಗಳ ಬಳಕೆಗೂ ಹೊಸ ಪರಿಭಾಷಿಕೆ ಬರೆದಿದೆ.

Advertisement

20 ಕ್ವಿಂಟಲ್‌ ರಸಗೊಬ್ಬರ ಬಳಸುವ ಒಂದು ಬೆಳೆ ಅಥವಾ ಹೊಲಕ್ಕೆ ಕೇವಲ 20 ಕೆ.ಜಿ. ಜೈವಿಕ ಗೊಬ್ಬರ ಬಳಕೆ ಮಾಡಿ ಅಷ್ಟೇ ಇಳುವರಿ ಮತ್ತು ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬೆಳೆಯುವ ಸಂಶೋಧನೆ ವಿವಿಯ ಸಾವಯವ ಕೃಷಿ ವಿಭಾಗ ಸತತ 2017ರಿಂದ ನಡೆಸಿ ಇದೀಗ ಯಶಸ್ವಿಗೊಳಿಸಿದೆ.

ಪೇಟೆಂಟ್‌ಗೂ ಚಿಂತನೆ: ಜೈವಿಕ ದ್ರವ ಮತ್ತು ಜೈವಿಕ ಕಣಗಳನ್ನು ಕೂಡ ಶೋಧಿಸಿ ವಿವಿ ಸೈ ಎನಿಸಿಕೊಂಡಿದೆ. ಅಷ್ಟೇಯಲ್ಲ, ಈ ಎಲ್ಲ ಜೀವಾಣುಗಳನ್ನು ವರ್ಷಗಟ್ಟಲೇ ಕೆಡದಂತೆ ಮತ್ತು ಸುರಕ್ಷಿತವಾಗಿ ಕಾಯ್ದಿಡುವ ತಂತ್ರಜ್ಞಾನಗಳನ್ನು ಸ್ವತಃ
ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದು, ಅವುಗಳ ಪೇಟೆಂಟ್‌ಗೂ ಸಿದ್ಧತೆ ನಡೆಸಿದೆ.

ಕೃಷಿ ವಿವಿ ತನ್ನ ವ್ಯಾಪ್ತಿಯ ಜಿಲ್ಲೆಗಳ ಸುತ್ತಲಿನ ಎಲ್ಲ ಬೆಳೆಗಳಿಗೂ ಕಡಿಮೆ ಖರ್ಚಿನಲ್ಲಿ ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಮಾಡುವ ವಿಧಾನಗಳನ್ನು ಶೋಧಿಸಿಟ್ಟಿದೆ. ಮುಂಗಾರು ಬೆಳೆಗಳಾದ ಶೇಂಗಾ, ಸೋಯಾ, ಗೋವಿನಜೋಳ ಹಾಗೂ ಹಿಂಗಾರಿ ಬೆಳೆಗಳಾದ ಕಡಲೆ, ಗೋಧಿ, ಜೋಳ ಬೆಳೆಗಳ ಮೇಲೆ ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕ ಯಶಸ್ವಿಯಾಗಿ ಶೇ.100 ಫಲಿತ ಬಂದಿದೆ. ವರ್ಷದಿಂದ ವರ್ಷಕ್ಕೆ ಜೈವಿಕ ಗೊಬ್ಬರ ಉತ್ಪಾದನೆ ಮತ್ತು ರೈತರಿಗೆ ಹಂಚಿಕೆ ಶೇ.500 ಪಟ್ಟು ಹೆಚ್ಚಾಗುತ್ತಿದ್ದು, ಸಾವಯವ ಕೃಷಿಯತ್ತ ರೈತರು ದಾಪುಗಾಲಿಡುವಂತೆ ಮಾಡಿದೆ.

ಒಂದೇ ಪದಾರ್ಥದಲ್ಲಿ 8-11 ಜೀವಾಣು:
ಸಾವಯವ ಕೃಷಿ ವಿಭಾಗ, ಈಗ ಭೂಮಿಯ ಒಳಭಾಗದಲ್ಲಿ ಸಸ್ಯ ಮತ್ತು ಗಿಡಗಳ ಬೇರಿಗೆ ಎಂಟು ವಿಭಿನ್ನ ಜೀವಾಣುಗಳನ್ನು ಒಂದೇ ಪದಾರ್ಥದಲ್ಲಿ ಕೂಡಿಟ್ಟು ನೀಡುವ ವಿನೂತನ ತಂತ್ರಜ್ಞಾನ ಶೋಧಿಸಿ ಯಶಸ್ವಿಯಾಗಿದೆ. ಭೂ ಮೇಲ್ಪದರದಲ್ಲಿ ಸಸ್ಯಗಳಿಗೆ, ಬೆಳೆಗಳಿಗೆ ದಾಳಿ ಮಾಡುವ ರೋಗಾಣುಗಳನ್ನು ತಡೆಯುವ 11 ಜೈವಿಕ ಜೀವಾಣುಗಳುಳ್ಳ ಒಂದೇ ಪದಾರ್ಥ ಸಿದ್ಧಗೊಳಿಸಿದೆ.

Advertisement

ರಾಸಾಯನಿಕ ಕೃಷಿಯ ಭಾರ ತಗ್ಗಿಸುವ ಪ್ರಯತ್ನ ಇದಾಗಿದೆ. ಸದ್ಯಕ್ಕೆ ಶೇ.30 ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಹೊರೆಯಿಂದ ರೈತರು ಮುಕ್ತರಾಗುವ ಸೂತ್ರ ಸಿದ್ಧಗೊಂಡಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಜೈವಿಕ ಕೃಷಿ ಮಾಡುವ ತಂತ್ರಜ್ಞಾನ ಶೋಧಿಸುತ್ತೇವೆ.
●ಡಾ| ಶ್ರೀಪಾದ ಕುಲಕರ್ಣಿ,
ಕೃಷಿ ವಿಜ್ಞಾನಿ, ಕೃಷಿ ವಿವಿ ಧಾರವಾಡ

ರಾಸಾಯನಿಕ ಕೃಷಿಯಿಂದ ಸಾಕಷ್ಟು ಬೆಲೆ ತೆತ್ತಿದ್ದೇವೆ. ಇದೀಗ ದೇಶಿ ಮತ್ತು ಸಾವಯವ ಕೃಷಿ ಶೋಧನೆ ಮತ್ತು ಫಲಿತಗಳು ರೈತರ ಹೊಲ ಸೇರಬೇಕಿದೆ. ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ.
●ಸಿ.ಪಿ.ಪಾಟೀಲ, ಕುಲಪತಿ, ಕೃಷಿ ವಿವಿ ಧಾರವಾಡ

■ ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next