ಆಳಂದ: ಜಿಲ್ಲೆ ಒಳಗೊಂಡು ತಾಲೂಕಿನ ಐದು ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಇಲಾಖೆ ಯಿಂದ ದೊರೆಯುವ ಸರ್ಕಾರಿ ಸೌಲಭ್ಯಗಳ ವಿತರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ| ಸಿದ್ರಾಮಪ್ಪ ಪಾಟೀಲ ಧಂಗಾಪೂರ ಹೇಳಿದರು.
ಪಟ್ಟಣದ ಸಹಾಯಕ ನಿರ್ದೇಶಕರ ಕಚೇರಿ ಯಲ್ಲಿ ಕರೆದ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತ ಸಂಪರ್ಕಕ್ಕೆ ಬರುವ ಸೌಲಭ್ಯಗಳನ್ನು ಆಯಾ ಭಾಗದ ಕೃಷಿಕ ಸಮಾಜದ ಸದಸ್ಯರ ಗಮನಕ್ಕೆ ತರುವ ಮೂಲಕ ರೈತರಿಗೆ ಸಕಾಲಕ್ಕೆ ಸೌಲಭ್ಯಗಳನ್ನು ಒದಗಿಸಬೇಕು. ಕೃಷಿ ಪರಿಕರ ಪ್ರತಿ ವಿತರಕ ಅಂಗಡಿಗಳಲ್ಲಿ ಬೆಲೆ, ಗೊಬ್ಬರ, ಬೀಜದ ದಾಸ್ತಾನು ಖಾಲಿ ಇರುವ ಬಗ್ಗೆ ಫಲಕ ಅಳವಡಿಸಲು ಅಧಿಕಾರಿಗಳು ಸೂಚಿಸಬೇಕು. ಅಧಿಕಾರಿಗಳ ಶಿಫಾರಸಿನಂತೆ ರೈತರು ಬಿತ್ತನೆ ಬೀಜ, ಗೊಬ್ಬರ ಬಳಸಬೇಕು. ಕಡ್ಡಾಯವಾಗಿ ಫಸಲು ಬಿಮಾ ವಿಮೆಯನ್ನು ಕೈಗೊಳ್ಳುವಂತೆ ಜಾಗೃತಿ ಕೈಗೊಳ್ಳಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ ಮಾತನಾಡಿ, ಜೂನ್ ತಿಂಗಳಲ್ಲಿ ಮಳೆ ಅಭಾವಿತ್ತು. ಜುಲೈ ತಿಂಗಳಲ್ಲಿ ಮಳೆಯಾಗಿದೆ ಬಿತ್ತನೆ ನಡೆಯತೊಡಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಕಡ್ಡಾಯವಾಗಿ ಕೈಗೊಂಡು ಕಾಲಕಾಲಕ್ಕೆ ವಿಮಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೆ ಬೆಳೆ ಕೈಕೊಟ್ಟರೆ ವಿಮಾ ಮೊತ್ತ ದೊರೆಯುತ್ತದೆ ಎಂದರು.
ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಅವರು ಮಾತನಾಡಿ, ಜಾನುವಾರುಗಳ ಸಾಕಾಣಿಕೆ ಸಂಕೆ ಕಡಿಮೆಯಾಗತೊಡಗಿದೆ. ರೈತರು ತಮ್ಮ ಜಾನುವಾರುಗಳಿಗೆ ಕುರಿ, ಮೇಕೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ. ಈ ಕುರಿತು ಪ್ರಚಾರ ನಡೆಯುತ್ತಿದೆ ಎಂದರು.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರು, ಕೃಷಿಕ ಸಮಾಜದಿಂದ ನಡೆಯುವ ರೈತಪರ ಕಾರ್ಯಚಟುವಟಿಕೆಗಳಿಗೆ ಸಂಬಂತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಮಹಾದೇವಿ ಪಾಟೀಲ, ತೋಟಗಾರಿಕೆ ಸಹಾಯಕ ಅಧಿಕಾರಿ ಸಕಲೇಶ ಪಾಟೀಲ, ರೇಷ್ಮೆ ನಿರೀಕ್ಷ ಬಿ.ಎಸ್. ಶಿರೂರ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕುಪೇಂದ್ರ ಪಾಟೀಲ ಕೊರಳ್ಳಿ, ವೀರಣ್ಣ ಹೊನ್ನಶೆಟ್ಟಿ, ಮಡಿವಾಳಪ್ಪ ಕೊರಳ್ಳಿ, ಭೀಮಾಶಂಕರ ಮಡಿವಾಳ ಬಂಗರಗಾ, ಚಂದ್ರಶೇಖರ ಪಾಟೀಲ ಮತ್ತಿತರರು ಇದ್ದರು. ನಿರ್ದೇಶಕ ಸ್ಥಾನಕ್ಕೆ ಶರಣಬಸಪ್ಪ ಜಿ. ಕುಲಕರ್ಣಿ ಕೊಡಲಹಂಗರಗಾ, ಶರಣಗೌಡ ಬಿ. ಮಾಲಿಪಾಟೀಲ ಭೂಸನೂರ ಅವರನ್ನು ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ತಾಂತ್ರಿಕ ಅಧಿಕಾರಿ ಬನಸಿದ್ಧಪ್ಪ ಬಿರಾದಾರ ವಂದಿಸಿದರು.