ಬೀದರ: ಸ್ಥಳೀಯ ಬ್ರಿಮ್ಸ್‌ನಲ್ಲಿ ನಡೆದ ಅಕ್ರಮ ನೇಮಕಾತಿ ಮತ್ತು ಉಪಕರಣ ಖರೀದಿ ಸಂಬಂಧ ತಪಿತಸ್ಥರ ವಿರುದ್ಧ ತಿಂಗಳೊಳಗೆ ಕ್ರಮ ಕೈಗೊಂಡು, ಬ್ರಿಮ್ಸ್ ಭ್ರಷ್ಟಾಚಾರಕ್ಕೆ ತಾರ್ಕೀಕ ಅಂತ್ಯ ಹಾಡಲಾಗುವುದು ಎಂದು ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಹೇಳಿದ್ದಾರೆ.
ನಗರದ ಬ್ರಿಮ್ಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಮ್ಸ್‌ನಲ್ಲಿ ಅವ್ಯವಹಾರ ನಡೆದಿದ್ದು ಮೇಲ್ನೋಟಕ್ಕೆ ಸಾಬೀತಾದರು ಸಹ ಕ್ರಮ ವಹಿಸದಿರುವುದು ಬೇಸರದ ಸಂಗತಿ. ಬ್ರಿಮ್ಸ್‌ಗೆ ಭೇಟಿ ನೀಡಿ ಅವ್ಯವಹಾರ ಕುರಿತು ಸುದೀರ್ಘವಾಗಿ ಚರ್ಚಿಸಿ, ಸಂಬಂಧಿಸಿದರಿಂದ ಹೇಳಿಕೆ ಪಡೆಯಲಾಗಿದೆ. ಈ ವಿಷಯ ಸಂಬಂಧ ಬೆಂಗಳೂರಿನಲ್ಲಿ ಮುಂದಿನ ವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.
ಬ್ರಿಮ್ಸ್ ಅವ್ಯವಹಾರ ಕುರಿತು 2008ರಲ್ಲಿ ಅಂದಿನ ಶಾಸಕರಾದ ದಿ. ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ಈಶ್ವರ ಖಂಡ್ರೆ ಅವರು ವಿಧಾನಸಭೆಯಲ್ಲಿ ಪ್ರಶ್ನೆಗೆ ಅಂದಿನ ವೈದ್ಯಕೀಯ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ವರದಿಗಳು ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿ ವರದಿ ನೀಡಿದ್ದವು. ಇಲ್ಲಿ ಬಹಳಷ್ಟು ನ್ಯೂನತೆಗಳು ಮೇಲ್ನೋಟಕ್ಕೆ ಕಂಡು ಬಂದಿದ್ದು, ಆರೋಪಿಗಳನ್ನು ರಕ್ಷಿಸುವ ಕೆಲಸಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಪ್ರಕರಣದ ತಪ್ಪಿತಸ್ಥರಾದ ಬ್ರಿಮ್ಸ್‌ನ ಹಿಂದಿನ ನಿರ್ದೇಶಕ ಡಾ.ಸಿ.ಚನ್ನಣ್ಣ, ವೈದ್ಯಕೀಯ ಅಧೀಕ್ಷಕ ಶಿವಕುಮಾರ ಶೆಟಕಾರ, ಹಿಂದಿನ ಸಿಇಒ ಡಾ. ಆನಂದಸಾಗರ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಎರಡು ಪ್ರತ್ಯೇಕ ಸಮಿತಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ವರದಿ ನೀಡಿದ್ದರು. ಇದರಲ್ಲಿ ಪ್ರಕಾಶ ಮಡಿವಾಳ, ಪ್ರಕಾಶ ಮಾಳಗೆ ಹಾಗೂ ವರ್ಷಾ ಅವರು ಇನ್ನೂ ಬ್ರಿಮ್ಸ್‌ನಲ್ಲಿಯೇ ಮುಂದುವರೆದಿದ್ದಾರೆ.
ಸಮಿತಿ ಸದಸ್ಯರಾದ ಡಾ. ಕೆ.ಶ್ರೀನಿವಾಸಮೂರ್ತಿ, ಹರೀಶ್ ಪುಂಜ, ಸೋಮನಗೌಡ ಪಾಟೀಲ, ಸಂಜು ಮಠಂದೂರ, ದತ್ತಾತ್ರೇಯ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.