Advertisement

ಕಳ್ಳತನ ಕಡಿವಾಣಕ್ಕೆ ಹೀಗೊಂದು ಮಾದರಿ ಮನೆ!

03:45 AM Jan 30, 2017 | |

ರಾಯಚೂರು: ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ನೂತನ ಕ್ರಮ ಕಂಡುಕೊಂಡಿದ್ದಾರೆ. ಆಸ್ತಿ-ಪಾಸ್ತಿ ಸಂಗ್ರಹಿಸುವ ಮನೆ ಹೇಗಿರಬೇಕು ಎಂಬ ಬಗ್ಗೆ ಮಾದರಿ ನಿರ್ಮಿಸಿ ಆ ಮೂಲಕ ಜನಜಾಗೃತಿಗೆ ಮುಂದಾಗಿದ್ದಾರೆ.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಧಿಕಾರಿ ಡಾ| ಚೇತನ್‌ಸಿಂಗ್‌ ರಾಥೋಡ್‌ ಅವರು ಇಂಥ ಯೋಜನೆ ಜಾರಿಗೆ ಮುಂದಾಗಿದ್ದು, ಎಚ್‌ಕೆಡಿಬಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸದ್ಯ 4.5 ಲಕ್ಷ ರೂ. ಬಿಡುಗಡೆಯಾಗಿದ್ದು, ಎಸ್‌ಪಿ ಕಚೇರಿಯ ವಿಸಿಟರ್‌ ಹಾಲ್‌ನಲ್ಲಿ ಮಾದರಿ ಮನೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ಪರಿಕರ ಪ್ರದರ್ಶಿಸಲಾಗಿದೆ. ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಫಲಕಗಳನ್ನೂ ಅಳವಡಿಸಲಾಗಿದೆ. ಇನ್ನಷ್ಟು ಸಾಮಗ್ರಿಗಳು ಬರಬೇಕಿದ್ದು, ಅವುಗಳನ್ನು ಮ್ಯೂಸಿಯಂ ಮಾದರಿಯಲ್ಲಿ ಪ್ರದರ್ಶಿಸುವ ಉದ್ದೇಶವಿದೆ. ಠಾಣೆಗೆ ಬಂದವರಿಗೆ ಈ ಬಗ್ಗೆ ತಿಳಿ ಹೇಳುವ ಜತೆಗೆ, ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ ಎಂದು ಎಸ್ಪಿ ವಿವರಿಸಿದರು.

ಕಳ್ಳರ ಜಾಡು ಹಿಡಿದು:
ಪೊಲೀಸರಿಗೆ ಕಳ್ಳರ ಮನಸ್ಥಿತಿ ಗೊತ್ತಿರುತ್ತದೆ. ಹೀಗಾಗಿ ಮನೆಗೆ ಹೇಗೆ ಭದ್ರತೆ ಕಲ್ಪಿಸಬೇಕು ಎಂಬುದನ್ನು ಮಾದರಿ ಮನೆಯಲ್ಲಿ ವಿವರಿಸಲಾಗಿದೆ. ಇದರಲ್ಲಿ ಅತ್ಯಾಧುನಿಕ ಉಪಕರಣಗಳಿದ್ದು, ಮಾಲೀಕ ಎಲ್ಲಿಯೇ ಇದ್ದರೂ ಮನೆಯಲ್ಲಿ ನಡೆಯುವ ಚಟುವಟಿಕೆ ಮೇಲೆ ನಿಗಾ ವಹಿಸಬಹುದು. ಕಳ್ಳರು ಹೇಗೆಲ್ಲ ನುಗ್ಗಬಹುದು ಎಂಬ ಬಗ್ಗೆ ವಿವರಣೆ ಜತೆಗೆ, ರಕ್ಷಣಾ ತಂತ್ರಗಳನ್ನೂ ತಿಳಿಸಲಾಗಿದೆ. ಇದು ಶ್ರೀಮಂತರಿಗೆ ಮಾತ್ರವಲ್ಲ. ಮಧ್ಯಮ, ಬಡ ವರ್ಗದ ಜನರಿಗೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪಕರಣಗಳನ್ನು ಬಳಸಿ ಭದ್ರತೆ ಮಾಡಿಕೊಳ್ಳಬಹುದು. ಕೆಲ ಸಾಮಗ್ರಿಗಳು ಕಡಿಮೆ ದರದಲ್ಲಿ  ಲಭ್ಯ ಇವೆ. ಇದರಿಂದ ಪೊಲೀಸರ ತನಿಖೆಗೂ ಅನುಕೂಲವಾಗಲಿದೆ ಎಂದು ಡಾ| ಚೇತನ್‌ ಹೇಳುತ್ತಾರೆ.

ಭದ್ರತೆಯಲ್ಲಿ ಏನಿದೆ?
ವೀಡಿಯೋ ಡೋರ್‌ ಲಾಕ್‌, ಅಲಾರಂ ಕೀ ಲಾಕ್‌, ಸಿಸಿ ಟಿವಿ ಕೆಮರಾ, ಅತ್ಯಾಧುನಿಕ ಲಾಕರ್‌ ಸಿಸ್ಟಮ್‌, ಮೋಷನ್‌ ಸೆನ್ಸಾರ್‌ ಲೈಟ್‌ ವ್ಯವಸ್ಥೆ ಇದರಲ್ಲಿದೆ. ವೀಡಿಯೋ ಡೋರ್‌ ಲಾಕ್‌ ವ್ಯವಸ್ಥೆಯಿಂದ ಬಾಗಿಲ ಬಳಿ ಬಂದವರು ಯಾರೆಂದು ಒಳಗಿನ ಸ್ಕ್ರೀನ್‌ನಲ್ಲಿ ನೋಡಬಹುದು. ಬೇರೆ ಯಾವುದೇ ಕೀ ಬಳಸಿದರೂ ಅಲಾರಂ ಕೀ ಲಾಕರ್‌ ಶಬ್ದ ಮಾಡಿ ಎಚ್ಚರಿಸುತ್ತದೆ.  

ಇದರಿಂದ ಮೊಬೈಲ್‌ಗೆ ಸಂಪರ್ಕ ಕಲ್ಪಿಸಿ, ಸಂದೇಶ ಬರುವಂತೆ ಮಾಡಿಕೊಳ್ಳಬಹುದು. ಮನೆಗೆ ನುಗ್ಗುವ ಪ್ರಯತ್ನ ನಡೆದಿರುವ ಬಗ್ಗೆ ತಕ್ಷಣವೇ ಸಮೀಪದ ಠಾಣೆ ಅಥವಾ ನೆರೆಯವರಿಗೆ ಮಾಹಿತಿ ನೀಡಬಹುದು. ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಚಲನೆ ಕಂಡುಬಂದಲ್ಲಿ ಮೋಷನ್‌ ಸೆನ್ಸಾರ್‌ ಲೈಟ್‌ ತಾನಾಗಿ ಉರಿಯುತ್ತದೆ.

Advertisement

100 ಕಳ್ಳತನ ಪ್ರಕರಣಗಳಲ್ಲಿ 60ರಿಂದ 70ನ್ನು ಭೇದಿಸುವುದೂ ಕಷ್ಟ. ಕಳ್ಳರು ತಾವು ಕದ್ದ ಎಲ್ಲ ಸಾಮಗ್ರಿ ಹಿಂತಿರುಗಿಸುವುದಿಲ್ಲ. ಹೀಗಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ. ಆದರೆ, ನಮಗಿರುವ ಸಿಬ್ಬಂದಿ ಬಳಸಿ ಎಷ್ಟು ಸಾಧ್ಯವೋ ಅಷ್ಟು ಭದ್ರತೆ ನೀಡುತ್ತೇವೆ. ಸಾರ್ವಜನಿಕರೂ ಮುಂಜಾಗ್ರತೆ ವಹಿಸಿ ಇಂಥ ಭದ್ರತಾ ವ್ಯವಸ್ಥೆಗೆ ಮೊರೆ ಹೋಗುವ ಮೂಲಕ ನಷ್ಟ ತಪ್ಪಿಸಿಕೊಳ್ಳಬಹುದು.
– ಡಾ| ಚೇತನ್‌ಸಿಂಗ್‌ ರಾಥೋಡ್‌, ಎಸ್ಪಿ, ರಾಯಚೂರು

– ಸಿದ್ಧಯ್ಯಸ್ವಾಮಿ ಕುಕನೂರು
 

Advertisement

Udayavani is now on Telegram. Click here to join our channel and stay updated with the latest news.

Next