Advertisement

ಕುಸಿಯುವ ಭೀತಿಯಲ್ಲಿ ಸಂಪರ್ಕ ಸೇತು

02:25 AM Jun 13, 2018 | Team Udayavani |

ಸುಳ್ಯಪದವು: ಕರ್ನಾಟಕ – ಕೇರಳ ಗಡಿಭಾಗ ಸುಳ್ಯಪದವು ಸಮೀಪದ ಕಾಯರ್‌ ಪದವಿನಲ್ಲಿರುವ ಸೇತುವೆ ಕುಸಿಯುವ ಸ್ಥಿತಿಯಲ್ಲಿದ್ದು, ಉಭಯ ರಾಜ್ಯಗಳ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವಿನಿಂದ ಸುಮಾರು 150 ಮೀ. ದೂರದಲ್ಲಿರುವ ಈ ಸೇತುವೆಯನ್ನು ಕರ್ನಾಟಕ ಸರಕಾರವು 1984ರಲ್ಲಿ ನಿರ್ಮಾಣ ಮಾಡುವ ಮೂಲಕ ಎರಡು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸಿತ್ತು. ಸೇತುವೆಯ ಮೇಲ್ಭಾಗದಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಇಂಗುವ ಮೂಲಕ ಹೊರಗೆ ಹೋಗುತ್ತಿದೆ. ಸುಳ್ಯಪದವಿನಿಂದ ಈ ಸೇತುವೆಯನ್ನು ಸಂಪರ್ಕಿಸುವ ರಸ್ತೆಯೂ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಸೇತುವೆಯ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ.

Advertisement

ಬಸ್‌ ಸಂಚಾರ ಸ್ಥಗಿತ
ಸುಳ್ಯಪದವಿನಿಂದ ಕಾಸರಗೋಡಿಗೆ ಕೇವಲ 34 ಕಿ.ಮೀ. ದೂರ ಇದೆ. ಕೇರಳ ಗಡಿಭಾಗದ ಜನರಿಗೆ ಕರ್ನಾಟಕದ ಪಡುಮಲೆ, ಈಶ್ವರಮಂಗಲ, ರೆಂಜ, ಸುಳ್ಯ, ಪುತ್ತೂರು ತಾಲೂಕಿಗೆ ಹತ್ತಿರದ ಸಂಪರ್ಕ ಸೇತು ಇದಾಗಿದೆ. ನೂರಾರು ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಕೇರಳದ ರಾಜ್ಯದ ಖಾಸಗಿ ಬಸ್‌ ಗಳು ಮತ್ತು ಕರ್ನಾಟಕ ರಾಜ್ಯದ ಸರಕಾರಿ ಬಸ್‌ ಸಂಚಾರ ಸ್ಥಗಿತಗೊಳ್ಳುವುದ ರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ ಬಸ್‌ಗಳು, ಜೀಪು, ಕಾರುಗಳು ಈ ಸೇತುವೆಯ ಮೇಲೆ ನಿರಂತರವಾಗಿ ಸಂಚರಿಸುತ್ತಿವೆ. ಸೇತುವೆ ಕುಸಿದರೆ ಎರಡು ರಾಜ್ಯಗಳ ನಡುವೆ ಸಂಪರ್ಕ ಕಡಿತಗೊಳ್ಳಲಿದೆ.

ಕುಸಿಯುವ ಭೀತಿ
ಮೂರು ದಶಕಗಳ ಹಿಂದೆ ನಿರ್ಮಾಣವಾದ ಈ ಸೇತುವೆ ಇಂದು ಕುಸಿಯುವ ಭೀತಿಯಲ್ಲಿದೆ. ಸೇತುವೆಗೆ ತಡೆಗೋಡೆಯೂ ಇಲ್ಲ. ಈಗ ಸೇತುವೆ ಮೇಲೆ ನೀರು ನಿಲ್ಲುತ್ತಿದೆ. ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಗಡಿಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕು. 
– ಸುಬ್ರಹ್ಮಣ್ಯ ಭಟ್‌ ದೇವಸ್ಯ, ಸ್ಥಳೀಯ ನಿವಾಸಿ

ಜನಪ್ರತಿನಿಧಿ ಸ್ಪಂದಿಸಿ
ಪುತ್ತೂರಿಂದ ಕಾಸರಗೋಡು, ಮಧೂರಿಗೆ ಸುಳ್ಯಪದವು ಮೂಲಕ ಹತ್ತಿರ ರಸ್ತೆಯಾಗಿದೆ. ಕಳೆದ ಹಲವು ತಿಂಗಳುಗಳಿಂದ ರಸ್ತೆ, ಸೇತುವೆ ನಾದುರಸ್ತಿಯಲ್ಲಿದೆ. ವಾಹನ ಸಂಚಾರ ದುಸ್ತರವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ. 
– ಸುಲತಾ ವರದರಾಜ್‌ ನಾಯಕ್‌, ಪರ್ಲಡ್ಕ ಪುತ್ತೂರು

— ಮಾಧವ ನಾಯಕ್‌ ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next