Advertisement

ಕಕ್ಕೇರಿ ಜನರಿಗೆ ಶಿಥಿಲಗೊಂಡ ಕಾಲುಸಂಕವೇ ಸಂಪರ್ಕ ಹಾದಿ

05:00 AM Jul 19, 2017 | Karthik A |

ಗ್ರಾಮಸ್ಥರ ಬೇಡಿಕೆಗೆ ಬೆಲೆಯೇ ಇಲ್ಲ

Advertisement

ಕುಂದಾಪುರ: ಕಾಳಾವರ ಗ್ರಾ.ಪಂ. ವ್ಯಾಪ್ತಿಯ ಕಕ್ಕೇರಿ ಗ್ರಾಮಸ್ಥರಿಗೆ ಮಳೆಗಾಲ ಬಂತು ಎಂದಾದರೆ ಸಮಸ್ಯೆಗಳು ಆರಂಭವಾಗುತ್ತವೆ. ಈ ದಿನಗಳಲ್ಲಿ ಅವರು ಕೋಟೇಶ್ವರ ಹಾಗೂ ಸಳ್ವಾಡಿಗೆ ತಲುಪಲು ಶಿಥಿಲಗೊಂಡ ಕಾಲುಸಂಕವೇ ಗತಿ. ಇಲ್ಲಿಯ ಜನರು ಈ ಕಾಲುಸಂಕಕ್ಕೆ ಹೊಂದಿಕೊಂಡೇ ಇರುವ ದಾರಿಯಲ್ಲಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸರಕಾರಕ್ಕೆ ಬೇಡಿಕೆ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಟೇಶ್ವರ – ಹಾಲಾಡಿ ಮುಖ್ಯರಸ್ತೆಯಿಂದ ಸಳ್ವಾಡಿ ಬಳಿಯ ಕಕ್ಕೇರಿ ಜನತಾ ಕಾಲನಿಗೆ ತೆರಳಲು ಅರ್ಧ ಕಿ.ಮೀ. ಕ್ರಮಿಸಿದರೆ ಸಾಕು. ಕಳೆದ 20ವರ್ಷದ ಹಿಂದೆ ಇಲ್ಲಿನ ಹಾಲುಡೈರಿ ಬಳಿ 200 ಮೀಟರ್‌ ಉದ್ದಕ್ಕೆ ಕಿರಿದಾದ ಕಾಲು ಸಂಕವನ್ನು ಸಂಸದರ ನಿಧಿಯಲ್ಲಿ ರಚಿಸಲಾಗಿತ್ತು. ಅದಕ್ಕೆ ಎರಡೂ ಕಡೆಗಳಲ್ಲಿ ಭದ್ರತೆಗಾಗಿ ಪೈಪ್‌ ಜೋಡಿಸಲಾಗಿತ್ತು. ಆದರೆ ಈ ಸಂಕ ಶಿಥಿಲಗೊಂಡಿದ್ದು, ಸಂಕದ ಬದಿಯಲ್ಲಿ ಭದ್ರತೆಗಾಗಿ ಹಾಕಲಾದ ಪೈಪುಗಳು ಬಿದ್ದುಹೋಗಿದೆ. 

ಬೇಸಗೆಯಲ್ಲಿ ನೀರಿನ ಓಣಿ – ಮಳೆಗಾಲದಲ್ಲಿ ಶಿಥಿಲಗೊಂಡ ಸಂಕ
ಇಲ್ಲಿನ ಗ್ರಾಮಸ್ಥರು ಬೇಸಗೆಯಲ್ಲಿ ನೀರು ಹರಿದು ಹೋಗುವ ಓಣಿಯಲ್ಲಿ ಸಂಚಾರಕ್ಕೆ ಆಯ್ದುಕೊಂಡರೆ, ಮಳೆಗಾಲದಲ್ಲಿ ಅವರಿಗೆ ಈ ಶಿಥಿಲಗೊಂಡ ಕಾಲುಸಂಕವೇ ಗತಿಯಾಗಿದೆ. ಶಿಥಿಲಗೊಂಡ ಈ ಕಾಲುಸಂಕದಲ್ಲಿ ಕೆಲವು ಬೈಕ್‌ ಸವಾರರು ಬಿದ್ದು ಅಪಾಯ ತಂದುಕೊಂಡ ಪ್ರಕರಣಗಳು  ನಡೆದಿವೆ. ಮಳೆಗಾಲದ ಮೂರು ತಿಂಗಳು ಈ ತೋಡಿನಲ್ಲಿ ನೀರು ಹರಿಯುವುದರಿಂದ ಕೆಸರುಮಯವಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿರುತ್ತದೆ. ಜನರು ಸಂಚರಿಸಲು ಅಸಾಧ್ಯವಾಗಿರುತ್ತದೆ. ಇಲ್ಲಿ  ಪರ್ಯಾಯ ರಸ್ತೆಯನ್ನು ನಿರ್ಮಿಸಿಕೊಡುವ ಬಗ್ಗೆ ಬೇಡಿಕೆ ಇಡುತ್ತಲೇ ಬರುತ್ತಿದ್ದು, ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ತೋರಿಸಿ ಸಂಪರ್ಕ ಹಾದಿಯನ್ನು ಸುಗಮಗೊಳಿಸಬೇಕು ಎನ್ನುವುದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದೆ.

ಕಕ್ಕೇರಿ ಜನತಾ ಕಾಲನಿಯಲ್ಲಿ 150 ಹಾಗೂ ಹಿಂದುಳಿದ ವರ್ಗದವರ 50 ಮನೆಗಳಿವೆ. ಈ ಭಾಗದ ಮಕ್ಕಳು ಶಾಲಾ ಕಾಲೇಜಿಗೆ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಹೆಚ್ಚಿನ ಜನರು ಕೂಲಿ ಕಾರ್ಮಿಕರಾಗಿದ್ದು ಕೃಷಿಯನ್ನೇ ನಂಬಿಕೊಂಡಿದ್ದು, ಇವರೆಲ್ಲರಿಗೂ ಇದೇ ಮಾರ್ಗವನ್ನು ನಂಬಿಕೊಂಡಿದ್ದಾರೆ. ಉಳಿದಂತೆ ಇಲ್ಲಿಂದ ದಬ್ಬೆಕಟ್ಟೆ ಮೂಲಕವಾಗಿ ಸಂಪರ್ಕಿಸಲು ಕಳೆದ ವರ್ಷದ ತನಕ ಇದ್ದ ಪರ್ಯಾಯ ರಸ್ತೆ ವಾರಾಹಿ ಕಾಮಗಾರಿಯ ವೇಳೆ ಸಂಪರ್ಕ ಕಡಿತಗೊಂಡಿದೆ.

ಸುಮಾರು 20 ವರ್ಷಗಳ ಹಿಂದೆ ಸಂಸದರ ನಿಧಿಯಿಂದ ಸುಮಾರು ರೂ. 1.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಕಾಲುಸಂಕ ಶಿಥಿಲವಾಗಿರುವುದನ್ನು ಕಂಡ ಸ್ಥಳೀಯರು ಜನಪ್ರತಿನಿಧಿಗಳಿಗೆ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ರಾಜ್ಯ ಸರಕಾರದ ಮೂಲಕ ವಾರಾಹಿ ನೀರಾವರಿ ಯೋಜನೆಯಡಿ ಎಸ್‌ಸಿ.ಎಸ್‌.ಟಿ. ಕಾಲನಿ ಸಂಪರ್ಕಕ್ಕೆ ರಸ್ತೆ ನಿರ್ಮಾಣಕ್ಕಾಗಿ ರೂ.65 ಲಕ್ಷ ಮಂಜೂರಾತಿಯನ್ನು ಪಡೆದಿದ್ದರೂ ಹಲವು ತಾಂತ್ರಿಕ ಕಾರಣಗಳಿಂದ ಈ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯಲಿಲ್ಲ. ಅದರೊಂದಿಗೆ ದಬ್ಬೆಕಟ್ಟು ಬದಲಿ ಮಾರ್ಗ ವಾರಾಹಿ ಕಾಮಗಾರಿಯಿಂದಾಗಿ ಕೈ ಕೊಟ್ಟಿದೆ. ಶಿಥಿಲಗೊಂಡ ಕಾಲು ಸಂಕದಲ್ಲಿಯೇ ಜನರು ಸಾಗಬೇಕಾಗಿದೆ. ಮಳೆಗಾಲ ಬಂದಾಗ ಸಂಪರ್ಕ ಸಮಸ್ಯೆಯಿಂದ ಬಳಲುವ ಇಲ್ಲಿನ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡುವಲ್ಲಿ ಸರಕಾರ, ಜನಪ್ರತಿನಿಧಿಗಳು ಮನಸ್ಸು ಮಾಡಬೇಕು.
– ರಾಮಚಂದ್ರ ನಾವಡ, ಕೃಷಿಕರು, ಕಾಳಾವರ

Advertisement

ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next