Advertisement

ಮುಹೂರ್ತ ನಡೆಸಿದ ಅಮೃತ ಶಿಲೆಯ ಮಾಹಿತಿ ಫಲಕಕ್ಕೆ ಬೆಳ್ಳಿ ಹಬ್ಬ! ಸೇತುವೆ ??

03:43 PM Mar 12, 2023 | Team Udayavani |

ಕಟಪಾಡಿ: ಮಣಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿನ ಪೊಸಮಠದ ಬಳಿ ಪಾಪನಾಶಿನಿ ಹೊಳೆಗೆ ಸೇತುವೆ ನಿರ್ಮಿಸಲು 1997ರ ನ.2ರಂದು ಮುಹೂರ್ತ ನಡೆಸಿದ ಅಮೃತ ಶಿಲೆಯ ಮಾಹಿತಿ ಫಲಕವು ಕಂಡು ಬಂದಿದ್ದು, ಕಂಡು ಬರುವ ಅಮೃತ ಫಲಕ ಮಾತ್ರ ಬೆಳ್ಳಿಹಬ್ಬ ಆಚರಿಸುವಂತಾಗಿದ್ದು, ಪಾಪನಾಶಿನಿ ತೀರ್ಥ ಕ್ಷೇತ್ರ ದೇವರಗಿರಿ ಪ್ರದೇಶದಲ್ಲಿ ಇಂದಿಗೂ ಸೇತುವೆ ನಿರ್ಮಾಣಗೊಂಡಿಲ್ಲ ಎಂದು ಸ್ಥಳೀಯರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಅಂದಿನ ಬಂದರು, ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಮುಹೂರ್ತ, ಅಧ್ಯಕ್ಷತೆ ಅಂದಿನ ಉಡುಪಿ ಕ್ಷೇತ್ರ ಶಾಸಕ ಯು.ಆರ್‌ ಸಭಾಪತಿ, ಅಂದಿನ ಕಾಪು ಕ್ಷೇತ್ರ ಶಾಸಕ ವಸಂತ ವಿ. ಸಾಲಿಯಾನ್‌, ಅದಮಾರು ಮಠದ ಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹದೊಂದಿಗೆ ಮುಹೂರ್ತ ಸಮಾರಂಭದ ಬಗ್ಗೆ ಉಲ್ಲೇಖ ಶಿಲಾಫಲಕದಲ್ಲಿ ಕಂಡು ಬರುತ್ತಿದೆ. ಅಮೃತ ಶಿಲೆಯ ಕೊಡುಗೆ ಕೆ. ವಾಮನ ಬಾಳಿಗ ಹೋಟೆಲ್‌ ದ್ವಾದಶಿ ಕಲ್ಸಂಕ ಎಂದಿದೆ.

ಮಣಿಪುರದ ಪೊಸಮಠ ಪ್ರದೇಶದಿಂದ ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಕುಂಜಾರುಗಿರಿಗೆ ಈ ಸಂಪರ್ಕ ಸೇತುವೆಯ ಮೂಲಕ ನೇರ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಲಿದೆ. ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ಕುಂಜಾರಮ್ಮನ ಜಳಕಕ್ಕೆ ಬರುವ ಸಂದರ್ಭ ಇಂದಿಗೂ ಒಂದು ಕಿ,ಮೀ. ನಷ್ಟು ದೂರವನ್ನು ದೋಣಿ ಬಳಸಿಯೇ ಪಾಪನಾಶಿನಿ ಹೊಳೆಯನ್ನು ದಾಟಿ ಪೊಸಮಠಕ್ಕೆ ದೇವರು ಬರುವ ಧಾರ್ಮಿಕ ಸಂಪ್ರದಾಯ ಚಾಲ್ತಿಯಲ್ಲಿದೆ. ದೇವರ ಸೇವೆಗೆ ದೆಂದೂರು, ಮಣಿಪುರ ಭಾಗದ ಸುಮಾರು 400ಕ್ಕೂ ಅಧಿಕ ಭಕ್ತರು ಇಂದಿಗೂ ಇಲ್ಲಿ ಜಮಾಯಿಸುತ್ತಾರೆ.

25 ವರ್ಷಗಳ ಹಿಂದೆಯೇ ಇಲ್ಲಿ ಸೇತುವೆಯು ನಿರ್ಮಾಣಗೊಂಡಿದ್ದಲ್ಲಿ ಮಣಿಪುರ ಮತ್ತು ಕುರ್ಕಾಲು ಉಭಯ ಗ್ರಾಮಗಳಲ್ಲಿ ಮತ್ತಷ್ಟು ಅಭಿವೃದ್ಧಿಯು ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಸೇತುವೆ ನಿರ್ಮಾಣಗೊಳ್ಳದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇನ್ನಾದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ಭಾಗದಲ್ಲಿ ಸುಸಜ್ಜಿತ ಸಂಪರ್ಕ ಸೇತುವೆಯನ್ನು ನಿರ್ಮಿಸಿ ಶಾಲೆಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ದೇವರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲತೆಯನ್ನು ಕಲ್ಪಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.

Advertisement

ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next