ಅಜೆಕಾರು: ಕುಕ್ಕುಜೆ ಪಟ್ಟಿಬಾವುನ ಸೇತುವೆ ಕಾಮಗಾರಿ ಕೆಲ ತಾಂತ್ರಿಕ ಸಮಸ್ಯೆಗಳಿಂದ ಕೆಲವು ತಿಂಗಳುಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಸ್ಥಳೀಯಾಡಳಿತದ ಸತತ ಪ್ರಯತ್ನದ ಫಲವಾಗಿ ಮತ್ತೇ ಕಾಮಗಾರಿ ಪ್ರಾರಂಭಗೊಂಡಿದ್ದು 2019ರ ಫೆಬ್ರವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಅಧಿಕಾರಿಗಳಿಂದ ದೊರಕಿದೆ. ಕುಕ್ಕುಜೆ, ಎರ್ಲಪಾಡಿ, ಶಿರೂರು ಗ್ರಾಮಸ್ಥರ ಬಹುಬೇಡಿಕೆಯ ಪಟ್ಟಿಬಾವು ಸೇತುವೆ ಕಾಮಗಾರಿ ಪ್ರಾರಂಭಗೊಂಡು 2 ವರ್ಷ ಪೂರ್ಣಗೊಂಡಿದ್ದು ಕಾಮಗಾರಿ ಕುಂಟುತ್ತಾ ಸಾಗಿ ಮಾತ್ರ ಸ್ಥಳೀಯರಲ್ಲಿ ನಿರಾಶೆ ಮೂಡಿಸಿತ್ತು.
ಕುಕ್ಕುಜೆ, ಎರ್ಲಪಾಡಿ ಹಾಗೂ ಶಿರೂರು ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯರ ಬೇಡಿಕೆಯಂತೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪಟ್ಟಿಬಾವು ಸೇತುವೆ ನಿರ್ಮಾಣಕ್ಕೆ ಪ್ರಯತ್ನಪಟ್ಟು ರಾಜ್ಯ ಸರಕಾರದಿಂದ ಅನುದಾನ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಕಡ್ತಲ ಗ್ರಾಮ ಪಂಚಾಯತು ವ್ಯಾಪ್ತಿಯ ಕುಕ್ಕುಜೆ ಹಾಗೂ ಎರ್ಲಪಾಡಿಯ ನಡುವೆ ಹರಿಯುತ್ತಿರುವ ಸುವರ್ಣ ನದಿಗೆ ಅಡ್ಡಲಾಗಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆುಂದ ರೂ. 3 ಕೋಟಿ ಅನುದಾನ ಮಂಜೂರುಗೊಂಡು ಈ ಕಾಮಗಾರಿಗೆ 2015-16ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಪಟ್ಟಿಬಾವು ಸೇತುವೆಯು ಸ್ಥಳೀಯ ಜನರ ಹಲವು ದಶಕಗಳ ಬೇಡಿಕೆಯಾಗಿದ್ದು ಈ ಸೇತುವೆ ನಿರ್ಮಾಣದಿಂದ ಕುಕ್ಕುಜೆ, ಶಿರೂರು ಪ್ರದೇಶದ ಜನತೆಗೆ ಬೈಲೂರು, ಕಾರ್ಕಳ ಸಂಪರ್ಕಿಸಲು ಹಾಗೂ ಬೈಲೂರು, ಎರ್ಲಪಾಡಿ ಭಾಗದ ಜನರಿಗೆ ಕುಕ್ಕುಜೆ, ಪೆರ್ಡೂರು, ಹೆಬ್ರಿ ಸಂಪರ್ಕಿಸಲು ಕೇವಲ 10ರಿಂದ 15ಕಿ.ಮೀ.ನಷ್ಟು ಹತ್ತಿರವಾಗಲಿದೆ. ಈಗ ಈ ಭಾಗದ ಸ್ಥಳೀಯರು ಕಾರ್ಕಳ, ಅಜೆಕಾರು ಸುತ್ತುಬಳಸಿ ಸುಮಾರು 30ರಿಂದ 35 ಕಿ.ಮೀ. ದೂರ ಪ್ರಯಾಣಿಸುತ್ತಿದ್ದಾರೆ. ಈ ಸಂಕಷ್ಟಕ್ಕೆ ಸೇತುವೆ ನಿರ್ಮಾಣದಿಂದ ಮುಕ್ತಿ ದೊರೆಯಲಿದೆ.
ವಿಳಂಬಗೊಂಡ ಕಾಮಗಾರಿ: ಕಾಮಗಾರಿ ಮುಕ್ತಾಯದ ಅವಧಿಯು 2018ರ ಮಾರ್ಚ್‌ಗೆ ಅಂತಿಮಗೊಂಡಿದ್ದು ಅವಧಿ ಮುಗಿದು ಈಗಾಗಲೇ 8 ತಿಂಗಳು ಕಳೆದಿದೆ. ಕಡ್ತಲ, ಎರ್ಲಪಾಡಿ, ಭೈರಂಪಳ್ಳಿ ಸೇರಿದಂತೆ ಮೂರು ಗ್ರಾಮ ಪಂಚಾಯತ್ ಪ್ರದೇಶಗಳನ್ನು ಬೆಸೆಯುವ ನಿಟ್ಟಿನಲ್ಲಿ ಪಟ್ಟಿಬಾವು ಪ್ರದೇಶಕ್ಕೆ ಮಂಜೂರಾದ ಈ ಕಾಮಗಾರಿುಂದಾಗಿ ಸ್ಥಳೀಯ ಪರಿಸರದ ಜನರು ಸಂತಸಪಟ್ಟಿದ್ದರು. ಆದರೆ ಕಾಮಗಾರಿ ಪ್ರಾರಂಭಗೊಂಡು 2 ವರ್ಷ ಕಳೆದರೂ ಕಾಮಗಾರಿ ಅರ್ಧದಲ್ಲಿಯೇ ಸ್ಥಗಿತಗೊಂಡಿರುವ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸ್ಥಳೀಯರು ಪ್ರತಿಭಟನೆಯ ಹಾದಿ ಹಿಡಿದಿದ್ದರು. ಸ್ಥಳೀಯ ಗ್ರಾಮ ಪಂಚಾಯತು ಹಾಗೂ ಸ್ಥಳೀಯ ನಾಗರಿಕರ ನಿರಂತರ ಒತ್ತಡದ ಪರಿಣಾಮ ಇದೀಗ ಮತ್ತೇ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಮತ್ತೆ ಪ್ರಾರಂಭಗೊಂಡ ಪಟ್ಟಿಬಾವು ಸೇತುವೆ ಹಾಗೂ ಕಿಂಡಿ ಅಣೆಕಟ್ಟಿನ ಕಾಮಗಾರಿ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಕೊಡಲಿ
ಪಟ್ಟಿಬಾವು ಸೇತುವೆ 2018ರ ಮಾರ್ಚ್ ವೇಳೆಗೆ ಮುಗಿಯಬೇಕಿತ್ತು. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಮಗಾರಿ ವಿಳಂಬಗೊಂಡಿತ್ತು. ಇದೀಗ ಕಾಮಗಾರಿ ಮತ್ತೆ ಪ್ರಾರಂಭಗೊಂಡಿದ್ದು 2019ರ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಂಡು ಮಾರ್ಚ್ ಅಂತ್ಯಕ್ಕೆ ಸಾರ್ವಜನಿಕರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.
– ಎಸ್.ಪಾಲಣ್ಣ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ
ಸರ್ಕಲ್ ಅಗತ್ಯ
ಪಟ್ಟಿಬಾವು ಸೇತುವೆಯ ಕಾಮಗಾರಿ ಳಂಬವಾದ ಬಗ್ಗೆ ಸ್ಥಳೀಯ ಜನತೆ ಹಾಗೂ ಪಂಚಾಯತ್ ಆಡಳಿತ ನಿರಂತರ ಒತ್ತಡ ತಂದ ಪರಿಣಾಮ ಇದೀಗ ಮತ್ತೇ ಕಾಮಗಾರಿ ಪ್ರಾರಂಭಗೊಂಡಿದೆ. ಸೇತುವೆ ನಿರ್ಮಾಣದಿಂದಾಗಿ ಸ್ಥಳೀಯರ 7 ದಶಕಗಳ ಕನಸು 2019ರ ಪ್ರಾರಂಭದಲ್ಲಿಯೇ ನನಸಾಗಲಿದೆ.
– ಅರುಣ್ ಕುಮಾರ್ ಹೆಗ್ಡೆ, ಅಧ್ಯಕ್ಷರು, ಗ್ರಾಮ ಪಂಚಾಯತ್ ಕಡ್ತಲ