Advertisement

ಎದೆಹಾಲೂಡುವ ತಾಯಂದಿರಿಗೆ ಪಥ್ಯಾಹಾರ

06:15 AM Mar 18, 2018 | |

ಹಿಂದಿನ ವಾರದಿಂದ-  ಎದೆಹಾಲೂಡುವಿಕೆ: ಆಹಾರ ಮತ್ತು ಪೌಷ್ಟಿಕಾಂಶಕ್ಕೆ ಸಂಬಂಧಿಸಿ ಸಾಮಾನ್ಯ ತಪ್ಪು ತಿಳಿವಳಿಕೆಗಳು

Advertisement

ತಪ್ಪು: ಪ್ರಥಮ ಸ್ತನ್ಯ (ಕೊಲೊಸ್ಟ್ರಮ್‌)ವನ್ನು ಶಿಶುವಿಗೆ ನೀಡಬಾರದು.
ನಿಜ:
ಪ್ರಥಮ ಸ್ತನ್ಯವು ನವಜಾತ ಶಿಶುವಿಗೆ ನಾವು ಉಣ್ಣಿಸಬಹುದಾದ ಅತ್ಯಂತ ಶ್ರೇಷ್ಠ ಆಹಾರ. ಪ್ರಥಮ ಸ್ತನ್ಯವು ಶಿಶುವಿನ ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಸಹಾಯಕವಾಗಿರುವುದರಿಂದ ಅದು ಶಿಶುವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಪ್ರಥಮ ಸ್ತನ್ಯವು ನವಜಾತ ಶಿಶುವಿನ ದೇಹದಿಂದ ಹೆಚ್ಚುವರಿ ಬಿಲಿರುಬಿನ್‌ಗಳನ್ನು ಹೊರದೂಡುವಂತೆ ಪ್ರೇರೇಪಿಸುವ ಮೂಲಕ ಜಾಂಡಿಸ್‌ ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. 

ತಪ್ಪು: ಶಿಶುವಿಗೆ ಎದೆಹಾಲಿನ ಜತೆಗೆ ನೀರು ಕೂಡ ಬೇಕಾಗಿರುತ್ತದೆ.
ನಿಜ:
ಎದೆಹಾಲು ನೀರಿನಿಂದ ಸಮೃದ್ಧವಾಗಿರುತ್ತದೆ. ಹೀಗಾಗಿ ಎದೆಹಾಲುಣ್ಣುವ ನವಜಾತ ಶಿಶುವಿಗೆ ಹೆಚ್ಚುವರಿ ನೀರು ಅಗತ್ಯವಿರುವುದಿಲ್ಲ. ನೀರು ಮತ್ತು ಇತರ ದ್ರವಾಹಾರಗಳನ್ನು ನೀಡಿದರೆ ಶಿಶುವಿಗೆ ಎದೆಹಾಲುಣ್ಣುವ ಆಸಕ್ತಿ, ಹಸಿವು ಮಾಯವಾಗುವ ಸಾಧ್ಯತೆಯಿದೆ. ಮಗು ಎದೆಹಾಲುಣ್ಣಲು ಆಸಕ್ತಿ ತೋರಿಸದಿದ್ದರೆ ತಾಯಿಯ ದೇಹದಲ್ಲಿ ಆಕ್ಸಿಟೋಸಿನ್‌ ಮತ್ತು ಪ್ರೊಲ್ಯಾಕ್ಟಿನ್‌ಗಳ ಸ್ರಾವ ಕಡಿಮೆಯಾಗುತ್ತದೆ, ಅಂತಿಮವಾಗಿ ಎದೆಹಾಲೂಡುವ ತಾಯಿಯ ದೇಹದಲ್ಲಿ ಎದೆಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. 

ತಪ್ಪು: ಎದೆಹಾಲೂಡುವ ತಾಯಂದಿರು ಕೆಲವು ಆಹಾರಗಳನ್ನು ಮಾತ್ರ ಸೇವಿಸಬೇಕು, ಕೆಲವನ್ನು ವರ್ಜಿಸಬೇಕು.
ನಿಜ:
ಇದು ಸತ್ಯವಲ್ಲ. ಎದೆಹಾಲೂಡುವ ತಾಯಿ ಸಾಂಪ್ರದಾಯಿಕ ಬಾಣಂತಿ ಆಹಾರಗಳಾದ ಕೊಬ್ಬುಸಮೃದ್ಧ ಆಹಾರಗಳನ್ನು ಮಾತ್ರವೇ ಸೇವಿಸಬೇಕಾಗಿಲ್ಲ. ಜತೆಗೆ, ತಾಯಿ ನಿರ್ದಿಷ್ಟವಾಗಿ ಅಲರ್ಜಿ ಹೊಂದದೆ ಇದ್ದರೆ ಯಾವುದೇ ಆಹಾರವಸ್ತುವನ್ನು ವರ್ಜಿಸಬೇಕಾಗಿಲ್ಲ. ಆಕೆ ಸಮತೋಲಿತವಾದ (ಬೇಳೆಕಾಳುಗಳು, ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮತ್ತು ಹಾಲು) ಆಹಾರಾಭ್ಯಾಸವನ್ನು ಅನುಸರಿಸಬೇಕು. ಆದರೆ ಆಕೆ ಸೋಂಕುಗಳನ್ನು ತಡೆಯಲು ಮನೆಯಿಂದ ಹೊರಗೆ ತಯಾರಾದ ಆಹಾರಗಳನ್ನು ವರ್ಜಿಸಬೇಕು. 

ತಪ್ಪು: ಎದೆಹಾಲಿನಲ್ಲಿ ಮಗುವಿಗೆ  ಅಗತ್ಯವಾದಷ್ಟು ಕಬ್ಬಿಣದಂಶ  ಇರುವುದಿಲ್ಲ.
ನಿಜ:
ಇದು ಶುದ್ಧ ತಪ್ಪು. ಎದೆಹಾಲು ಶಿಶುವಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದ್ದು, ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಹೊಂದಿರುತ್ತದೆ. ಶಿಶು ಬೆಳವಣಿಗೆ ಹೊಂದುತ್ತಿದ್ದಂತೆ ಎದೆಹಾಲು ಅದಕ್ಕೆ ತಕ್ಕಂತೆ ಮಾರ್ಪಾಡನ್ನೂ ಹೊಂದುತ್ತದೆ. ಅಲ್ಲದೆ, ಯಾವುದೇ ಸಿದ್ಧ ಆಹಾರವಸ್ತುಗಳು ಅಥವಾ ಔಷಧ ಅಂಗಡಿಗಳಲ್ಲಿ ಸಿಗುವ ಪೂರಕ ಆಹಾರಗಳಿಗಿಂತ ಉತ್ತಮ ಪ್ರಮಾಣದಲ್ಲಿ ಶಿಶು ಎದೆಹಾಲಿನಿಂದ ಕಬ್ಬಿಣದಂಶವನ್ನು ಪಡೆಯುತ್ತದೆ.

Advertisement

ತಪ್ಪು: ತಾಯಿಯ ಆಹಾರಾಭ್ಯಾಸವು ಎದೆಹಾಲಿನ ಸಂಯೋಜನೆಯನ್ನು ನಿರ್ಧರಿಸುತ್ತದೆ.
ನಿಜ:
ತಾಯಿಯ ಆಹಾರವು ಆಕೆ ಉತ್ಪಾದಿಸುವ ಎದೆಹಾಲಿನ ಗುಣಮಟ್ಟವನ್ನು ನೇರವಾಗಿ ಪ್ರಭಾವಿಸುವುದಿಲ್ಲ. ಆದರೆ ತಾಯಿ ತೀವ್ರ ಅಪೌಷ್ಟಿಕತೆಗೆ ಒಳಗಾಗಿದ್ದರೆ ಅಥವಾ ಸಮತೋಲಿತ ಆಹಾರವನ್ನು ಸೇವಿಸಲು ವಿಫ‌ಲಳಾದರೆ ಎದೆಹಾಲಿನ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಬಹುದು. 

ತಪ್ಪು: ಫಾರ್ಮುಲಾ ಹಾಲು (ಡಬ್ಬದ ಪುಡಿ ಹಾಲು) ಎದೆಹಾಲಿನಷ್ಟೇ ಉತ್ತಮ.
ಫಾರ್ಮುಲಾ ಹಾಲು ಅನೇಕ ರೀತಿಗಳಲ್ಲಿ ಎದೆಹಾಲಿಗೆ ಸಮಾನವಾಗಿದ್ದರೂ ಅದು ನೈಜ ಎದೆಹಾಲಿಗೆ ಸಾಟಿಯಾಗುವುದು ಅಸಾಧ್ಯ. ಫಾರ್ಮುಲಾ ಹಾಲು ಎದೆಹಾಲಿಗೆ ಸಮಾನವಾಗಿರಬಹುದು; ಆದರೆ ಎದೆಹಾಲಿನ ಶತಪ್ರತಿಶತ ತದ್ರೂಪಿಯಲ್ಲ. ಎದೆಹಾಲಿನಲ್ಲಿ ಇರುವ ಎಲ್ಲ ಆ್ಯಂಟಿಬಾಡಿಗಳು, ಹಾರ್ಮೋನ್‌ಗಳು ಮತ್ತು ಕಿಣ್ವಗಳು ಫಾರ್ಮುಲಾ ಹಾಲಿನಲ್ಲಿ ಇರುವುದಿಲ್ಲ. 

ತಪ್ಪು: ಎದೆಹಾಲೂಡುತ್ತಿರು ತಾಯಂದಿರು ಕಡಿಮೆ ನೀರು ಕುಡಿಬೇಕು/ಕುಡಿಯಲೇ ಬಾರದು.
ನಿಜ: ಜನಪ್ರಿಯವಾಗಿರುವ ಈ ನಂಬಿಕೆಗೆ ತದ್ವಿರುದ್ಧವಾದ ನಿಜಾಂಶವೆಂದರೆ, ಎದೆಹಾಲೂಡುವ ತಾಯಂದಿರು ಹೆಚ್ಚು ದ್ರವಾಂಶ ಸೇವಿಸಿದರೆ ಹೆಚ್ಚು ಹಾಲು ಉತ್ಪಾದಿಸುವು ದಿಲ್ಲ; ಆದರೆ ದ್ರವಾಹಾರವನ್ನು ಕಡಿಮೆ ಮಾಡಿದರೆ ಎದೆಹಾಲು ಉತ್ಪಾದನೆ ಕಡಿಮೆಯಾಗಬಹುದು, ಇನ್ನಷ್ಟು ಕಡಿಮೆ ಮಾಡಿದರೆ ತಾಯಿ ನಿರ್ಜಲೀಕರಣ ಸಮಸ್ಯೆಗೆ ಒಳಗಾಗಬಹುದು. ಎದೆಹಾಲು ಉತ್ಪಾದನೆ ಕಡಿಮೆಯಾದರೆ ಶಿಶುವಿಗೆ ಬೇಕಾದಾಗಲೆಲ್ಲ ಹಾಲು ಸಿಗದೆ ಅದು ಕೂಡ ನಿರ್ಜಲೀಕರಣಕ್ಕೆ ತುತ್ತಾಗಬಹುದು.

“”ನೀವು ನಿರ್ಜಲೀಕರಣಕ್ಕೆ ತುತ್ತಾದರೆ ಎದೆಹಾಲಿನ ಪೌಷ್ಟಿಕಾಂಶ ಮಟ್ಟ ಬದಲಾಗುವ ಸಾಧ್ಯತೆಯಿದೆ, ನಿರ್ಜಲೀಕರಣವು ಒಂದು ಅಥವಾ ಎರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅದು ನೀವು ಮತ್ತು ನಿಮ್ಮ ಮಗು – ಇಬ್ಬರ ಮೇಲೂ ದುಷ್ಪರಿಣಾಮಗಳನ್ನು ಬೀರಬಹುದು.”

ಎದೆಹಾಲು ಉಣ್ಣಿಸುವುದು ಶಿಶು ಮತ್ತು ತಾಯಿ- ಇವರಿಬ್ಬರ ಜೀವನಗಳಲ್ಲಿಯೂ ಅತ್ಯಂತ ಸುಂದರ ಮತ್ತು ಪ್ರಾಮುಖ್ಯವಾದ ಘಟ್ಟ. ಇದು ತಾಯಿ ಮತ್ತು ಶಿಶುವಿನ ನಡುವೆ ಸಂಬಂಧ ರೂಪುಗೊಂಡು ಬಲಯುತವಾಗುವ ಹಂತ. ಶಿಶುವಿನ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಜೀವದ್ರವ ತಾಯಿಯ ಹಾಲು; ಅದರ ಮೂಲಕ ಶಿಶುವಿಗೆ ಒದಗುವ ಪೌಷ್ಟಿಕಾಂಶಗಳ ಪ್ರಮಾಣ ಮತ್ತು ಗುಣಮಟ್ಟ ಪ್ರಶ್ನಾತೀತವಾದುದು.

Advertisement

Udayavani is now on Telegram. Click here to join our channel and stay updated with the latest news.

Next