Advertisement

ಸರ್ವಋತುವಿಗೆ ಇನ್ನೂ ತೆರೆದುಕೊಳ್ಳದ ರಾಜ್ಯದ ಏಕೈಕ ಹೊರ ಬಂದರು

02:10 AM Dec 13, 2018 | Karthik A |

ಕುಂದಾಪುರ: ರಾಜ್ಯದ ಏಕೈಕ ಹೊರ ಬಂದರು ಆಗಿರುವ ಮರವಂತೆಯಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ವಿಳಂಬದಿಂದಾಗಿ ಸರ್ವಋತುವಿಗೆ ಈ ಬಂದರು ಇನ್ನೂ ತೆರೆದುಕೊಂಡಿಲ್ಲ. ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ವತಿಯಿಂದ 55 ಕೋ. ರೂ. ವೆಚ್ಚದಲ್ಲಿ ಹೊರ ಬಂದರು (ಔಟ್‌ಡೋರ್‌) ನಿರ್ಮಾಣ ಕಾಮಗಾರಿ ಆರಂಭಗೊಂಡು 6 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಗುತ್ತಿಗೆ ಪಡೆದ ಸಂಸ್ಥೆಯ ವಿರುದ್ಧ ಮೀನುಗಾರರಿಗೆ ಅಸಮಾಧಾನದಿಂದಾಗಿ ಕೆಲವು ಸಮಯದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆ ಕಾರಣದಿಂದ ಈ ಬಂದರು ಎಲ್ಲ ಸಮಯದಲ್ಲಿಯೂ ಮೀನುಗಾರರರಿಗೆ ಪ್ರಯೋಜನಕ್ಕೆ ಸಿಗುತ್ತಿಲ್ಲ.

Advertisement

ಏನಿದು ಹೊರ ಬಂದರು?
ಇತರ ಮೀನುಗಾರಿಕಾ ಬಂದರು ಹಾಗೂ ಇಲ್ಲಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಬೇರೆಲ್ಲ ಬಂದರುಗಳು ಸಹಜ ಬಂದರು ಆಗಿದ್ದರೆ, ಇದು ಕೃತಕವಾಗಿ ನಿರ್ಮಿಸಿದ ಬಂದರು ಆಗಿದೆ. ಅಂದರೆ ಮರವಂತೆಯಲ್ಲಿ ಇಲ್ಲಿನ ಮೀನುಗಾರರು ಬೇರೆ ಬಂದರನ್ನು ಅವಲಂಬಿಸುವ ಬದಲು ತಮ್ಮ ಅನುಕೂಲಕ್ಕಾಗಿ ಸ್ವತಃ ಕೃತಕವಾಗಿ ನಿರ್ಮಿಸಿಕೊಂಡ ಬಂದರು ಇದಾಗಿದೆ. ನಾಡದೋಣಿ ಮೀನುಗಾರಿಕೆ ಇಲ್ಲಿನ ವೈಶಿಷ್ಟ್ಯವಾಗಿದೆ. 300ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಇಲ್ಲಿದ್ದಾರೆ. ಇದಲ್ಲದೆ ಬೇರೆ ಕಡೆಗಳ ಮೀನುಗಾರರು ಕೂಡ ಇಲ್ಲಿಗೆ ಬರುತ್ತಾರೆ.

ಇದು ಮೀನುಗಾರರೇ ಸಮುದ್ರ ಅಲೆಗಳನ್ನು ತಡೆಯಲು ತಡೆಗೋಡೆ ಹಾಕಿ ನಿರ್ಮಿಸಿದ ಬಂದರು ಇದಾಗಿದೆ. ಆದರೆ ಅಲೆಗಳ ಅಬ್ಬರ ತಡೆಯಲು 6 ವರ್ಷಗಳ ಹಿಂದೆ ಆರಂಭವಾದ ಹೊಸ ಯೋಜನೆಯ ಬ್ರೇಕ್‌ ವಾಟರ್‌ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾದಾಗ ಗಂಗೊಳ್ಳಿ, ಕೊಡೇರಿ ಸಹಿತ ಇನ್ನಿತರ ಬಂದರುಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ.

ಏಕೈಕ ಹೊರ ಬಂದರು
ನೆರೆಯ ರಾಜ್ಯ ಕೇರಳದಲ್ಲಿ 3 ಹೊರ ಬಂದರುಗಳಿದ್ದರೆ, ರಾಜ್ಯದ ಏಕೈಕ ಹೊರ ಬಂದರು ಮರವಂತೆಯಲ್ಲಿ ಮಾತ್ರ ಇರುವುದು. ಕೇರಳದ ಕರಾವಳಿಯ ಪ್ರತಿ 30 ಕಿ.ಮೀ. ಗೊಂದು ಬಂದರು ನಿರ್ಮಿಸಲಾಗಿದೆ.

ಮೀನುಗಾರರಿಗೆ ತೊಂದರೆ
ಹೊರ ಬಂದರಿನ ಬ್ರೇಕ್‌ ವಾಟರ್‌ ಕಾಮಗಾರಿ ವಿಳಂಬದಿಂದಾಗಿ ಮೀನುಗಾರರಿಗೆ ಎಲ್ಲ ಸಮಯದಲ್ಲಿಯೂ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸ್ಥಗಿತಗೊಂಡ ಕಾಮಗಾರಿಯನ್ನೂ ತ್ವರಿತಗತಿಯಲ್ಲಿ ಆರಂಭಿಸಿ, ಪೂರ್ಣಗೊಳಿಸಿ, ಮೀನುಗಾರರಿಗೆ ಅನುಕೂಲ ಮಾಡಿಕೊಡಲಿ.
– ಸಂಜೀವ ಖಾರ್ವಿ, ಮೀನುಗಾರರು, ಮರವಂತೆ 

Advertisement

ಮಾರ್ಚ್‌ನೊಳಗೆ ಪೂರ್ಣ
ಮರವಂತೆಯ ಹೊರ ಬಂದರು ಕಾಮಗಾರಿ ಕಳೆದ 3-4 ತಿಂಗಳಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಅಲ್ಲಿನ ಮೀನುಗಾರರ ಅಭಿಪ್ರಾಯಗಳನ್ನು ಪಡೆದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಈಗಾಗಲೇ ಸುಮಾರು 45 ಕೋ.ರೂ. ವೆಚ್ಚದ ಕಾಮಗಾರಿ ಮುಗಿದಿದ್ದು, ಇನ್ನೂ ಸುಮಾರು 9 ಕೋ.ರೂ. ವೆಚ್ಚದ ಕಾಮಗಾರಿ ಬಾಕಿಯಿದೆ. ಅದು ಮುಂದಿನ ಮಾರ್ಚ್‌ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಅದಲ್ಲದೆ ಎರಡನೇ ಹಂತದ ಯೋಜನೆಗೂ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಯುತ್ತಿದೆ. 
– ಕ್ಸೇವಿಯರ್‌ ಡಯಾಸ್‌, ಸಹಾಯಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next