ಬೆಂಗಳೂರು: ಬ್ರೆಜಿಲ್ ಮತ್ತು ಭಾರತದ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಉತ್ತೇಜಿಸಲು ಬೆಂಗಳೂರಿನ ರಾಜತಾಂತ್ರಿಕ ಕಚೇರಿಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಭಾರತದ ಬ್ರೆಜಿಲ್ ರಾಯಭಾರಿ ಆ್ಯಂಡ್ರೆ ಅರನ್ಹಾ ಕೊರೆಯಾ ಡೊ ಲಾಗೊ ಹೇಳಿದರು.
ಬ್ರೆಜಿಲ್‌ನ ರಾಜತಾಂತ್ರಿಕ ಕಚೇರಿ ನಗರದ ಯಲಹಂಕದಲ್ಲಿ ತೆರೆಯಲಾಗಿದ್ದು, ಶುಕ್ರವಾರ ಈ ಕಚೇರಿ ಉದ್ಘಾಟಿಸಿ ಬಳಿಕ ಸುದ್ದಗಾರರ ಜತೆ ಮಾತನಾಡಿದರು. ಈ ಭಾಗಕ್ಕೆ ಭೇಟಿ ನೀಡುವ ಬ್ರೆಜಿಲ್ ನಾಗರಿಕರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಚೇರಿಯು ಕೆಲಸ ಮಾಡಲಿದೆ. ಈಗಾಗಲೇ ಕೊಲ್ಕತ್ತ, ಹೈದರಾಬಾದ್‌ನಲ್ಲಿ ಬ್ರೆಜಿಲ್ ರಾಜತಾಂತ್ರಿಕ ಕಚೇರಿ ಕೆಲಸ ಮಾಡುತ್ತಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಉದ್ಯಮಿಗಳನ್ನು ಹೊಂದಿರುವ ಪ್ರಮುಖ ಹತ್ತು ನಗರಗಳ ಪೈಕಿ ಬೆಂಗಳೂರು ಕೂಡ ಒಂದಾಗಿದ್ದು, ಇಲ್ಲಿ ರಾಜತಾಂತ್ರಿಕ ಕಚೇರಿ ಹೊಂದುವ ಮೂಲಕ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಉತ್ತಮವಾಗಿ ಬೆಸೆಯಲಿದೆ ಎಂದು ಹೇಳಿದರು.
ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತವು ಮೂಲಸೌಕರ್ಯ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ನಿರೀಕ್ಷೆ ಇದೆ. ಬ್ರಿಕ್ಸ್ (BRICS) ಶೃಂಗಸಭೆಗೂ ಮುನ್ನ ನಡೆಯುವ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು.
ಅಲ್ಲದೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಸಾಕಷ್ಟು ಕೆಲಸ ಮಾಡಿದೆ. ಬ್ರೆಜಿಲ್ ಕೂಡ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಲಿವೆ ಎಂದರು.
ಬೆಂಗಳೂರಿನಲ್ಲಿ ಹಲವು ಬ್ರೆಜಿಲ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ, ಬೆಂಗಳೂರು ಮೂಲದ ಕಂಪನಿಗಳು ಬ್ರೆಜಿಲ್‌ನಲ್ಲಿವೆ. ಎರಡರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇನೆ. ವೈಮಾನಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಎರಡೂ ದೇಶಗಳು ಪ್ರಗತಿ ಸಾಧಿಸಿದ್ದು, ಅವುಗಳನ್ನು ಇನ್ನಷ್ಟು ಹತ್ತಿರ ತರುವುದು ನನ್ನ ಗುರಿ’.
-ಅಪ್ಪಾರಾವ್ ಮಲ್ಲವರಪರು, ಬ್ರೆಜಿಲ್‌ನ ವಿಶೇಷ ರಾಯಭಾರಿ