ರಾಸ್ ಅಬು ಅಬೌದ್: ಫೈರ್-ಫೈಟರ್ ಖ್ಯಾತಿಯ ಮಿಡ್‌ಫಿಲ್ಡರ್ ಕಾರ್ಲೋಸ್ ಹೆನ್ರಿಕ್ ಕೇಸ್‌ಮಿರೊ 83ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವು ಪಡೆದ ನೆಚ್ಚಿನ ಬ್ರಝಿಲ್ ಫಿಫಾ ವಿಶ್ವಕಪ್ ನಾಕೌಟ್‌ಗೆ ಮುನ್ನುಗ್ಗಿದೆ.
ಕಳೆದ ರಾತ್ರಿ “974 ಸ್ಟೇಡಿಯಂ’ನಲ್ಲಿ ನಡೆದ ಮೇಲಾಟದಲ್ಲಿ ಬ್ರಝಿಲ್ 1-0 ಅಂತರದಿಂದ ಸ್ವಿಜರ್ಲೆಂಡ್‌ಗೆ ಹೊಡೆತವಿಕ್ಕಿತು.
ಬ್ರಝಿಲ್ ಎರಡೂ ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಬಹಳ ಮೇಲ್ಮಟ್ಟದಲ್ಲಿದೆ. ಈ ಸೋಲಿನಿಂದ ಸ್ವಿಸ್ ಪಡೆಗೆ ತೀವ್ರ ಹಿನ್ನಡೆಯೇನೂ ಆಗಿಲ್ಲ. ಮೊದಲ ಪಂದ್ಯದಲ್ಲಿ ಅದು ಕ್ಯಾಮರೂನ್ ಮೇಲೆ ಸವಾರಿ ಮಾಡಿತ್ತು. ಮುಂದಿರುವುದು ಸರ್ಬಿಯ ಸವಾಲು. ಇದನ್ನು ಗೆದ್ದರೆ ಸ್ವಿಜರ್ಲೆಂಡ್ ಹಾದಿ ಸುಗಮಗೊಳ್ಳಲಿದೆ.
ಗಾಯಾಳು ನೇಯ್ಮರ್ ಗೈರಲ್ಲಿ ಬ್ರಝಿಲ್ ಕಣಕ್ಕಿಳಿದಿತ್ತು. ಪಂದ್ಯಕ್ಕೂ ಸ್ವಲ್ಪ ಮೊದಲು ಟ್ವೀಟ್ ಮಾಡಿದ ನೇಯ್ಮರ್, “ಕೇಸ್‌ಮಿರೊ ಬಹಳ ಕಾಲದಿಂದ ವಿಶ್ವದ ಅತ್ಯುತ್ತಮ ಮಿಡ್‌ಫಿಲ್ಡರ್ ಆಗಿ ಉಳಿದಿದ್ದಾರೆ’ ಎಂದು ಪ್ರಶಂಸಿಸಿದ್ದರು. ಬಹುಶಃ ಅವರ ಗೋಲ್ ಸಾಹಸಕ್ಕೆ ಇದೇ ಸ್ಫೂರ್ತಿ ಆಗಿರಬೇಕು.
“ತಂಡಕ್ಕೆ ಬೆಂಬಲವಾಗಿ ನಿಲ್ಲುವುದು ನನ್ನ ಮೊದಲ ಗುರಿ. ಗೋಲು ಬಾರಿ ಸುವ ಸಣ್ಣ ಅವಕಾಶವನ್ನೂ ಕಳೆದುಕೊಳ್ಳ ಬಾರದು. ಗೆಲುವು ನಮ್ಮೆಲ್ಲರದು. ಹಾಗೆಯೇ ಸೋಲು ಕೂಡ…’ ಎಂಬುದಾಗಿ ಪಂದ್ಯಶ್ರೇಷ್ಠ ಗೌರವ ಪಡೆದ ಕೇಸ್‌ಮಿರೊ ಹೇಳಿದರು.
ಬ್ರಝಿಲ್ ನಾಕೌಟ್ ಪ್ರವೇಶಿಸಿದ ದ್ವಿತೀಯ ತಂಡವೆಂಬ ಹೆಗ್ಗಳಿಕೆಗೆ ಪಾತ್ರ ವಾಯಿತು. ಮೊದಲ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್. ಅದು “ಡಿ’ ವಿಭಾಗದಿಂದ ಮುನ್ನಡೆ ಸಾಧಿಸಿತ್ತು.
ಲಾಭವೆತ್ತದ ಸ್ವಿಸ್ ಪಡೆ
ಆರಂಭದಲ್ಲಿ ಬ್ರಝಿಲ್ ಆಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಸಾಕಷ್ಟು ಲೂಸ್ ಪಾಸ್‌ಗಳು ತಂಡದ ಹಿನ್ನಡೆಗೆ ಕಾರಣವಾದವು. ಇದರ ಲಾಭವೆತ್ತಲು ಸ್ವಿಜರ್ಲೆಂಡ್‌ನಿಂದ ಸಾಧ್ಯವಾಗದಿದ್ದುದು ವಿಪರ್ಯಾಸ. ಅದು ಬ್ರಝಿಲ್ ಆಕ್ರಮಣವನ್ನು ತಡೆಯಲು ಯತ್ನಿಸಿತೇ ಹೊರತು ಗೋಲ್ ಬಾರಿಸುವ ಸಾಹಸಕ್ಕೆ ಮುಂದಾಗಲೇ ಇಲ್ಲ!
64ನೇ ನಿಮಿಷದಲ್ಲಿ ವಿನಿಶಿಯಸ್ ಜೂನಿಯರ್ ಬ್ರಝಿಲ್‌ಗೆ ಮುನ್ನಡೆ ತಂದುಕೊಡುವ ಸುವರ್ಣಾವಕಾಶ ಹೊಂದಿದ್ದರು. ಆದರೆ ಚೆಂಡು ಆಫ್ಸೈಡ್‌ನತ್ತ ಸಾಗಿತು. ಆದರೆ ಕೇಸ್‌ಮಿರೊ ಪ್ರಯತ್ನ ವಿಫಲಗೊಳ್ಳಲಿಲ್ಲ.