Advertisement
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶೃಂಗೇರಿ ಮಠ ಒಡೆದಿರುವ ಮಹಾರಾಷ್ಟ್ರದ ಪೇಶ್ವೆ ವಂಶಸ್ಥ ಪ್ರಹ್ಲಾದ ಜೋಷಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆರೆಸ್ಸೆಸ್ ನಿರ್ಧಾರ ಮಾಡಿದೆ ಎಂದು ಹೇಳುವ ಮೂಲಕ ಎಚ್.ಡಿ. ಕುಮಾರಸ್ವಾಮಿ ವಿವಾದದ ಬಾಂಬ್ ಸಿಡಿಸಿದ್ದಾರೆ.
Related Articles
Advertisement
ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, “ಪ್ರಹ್ಲಾದ್ ಜೋಷಿ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನವನ್ನು ಬಿಜೆಪಿ ಖಂಡಿಸುತ್ತದೆ. ಸಾವರ್ಕರ್, ಗೋಪಾಲ ಕೃಷ್ಣ ಗೋಖಲೆ, ರಾನಡೆ, ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಅವರೆಲ್ಲ ಬ್ರಾಹ್ಮಣರಾದರೂ ಸ್ವಂತ ಜಾತಿಯ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ’ ಎಂದಿದ್ದಾರೆ. “ಆರೆಸ್ಸೆಸ್ ನವರು ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದರು ಎಂದು ಹೇಳಿದ್ದೀರಿ. ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ತನಿಖೆಗೆ ಕಾಂಗ್ರೆಸ್ ಪಕ್ಷ ಜಸ್ಟಿಸ್ ಕಪೂರ್ ಆಯೋಗ ರಚಿಸಿತ್ತು. ಅಕಸ್ಮಾತ್ ನಿಮಗೆ ಓದುವ ಅಭ್ಯಾಸವಿದ್ದರೆ ಆ ಆಯೋಗದ ವರದಿಯನ್ನು ಓದಿ. ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ’ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ದಿಲ್ಲಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಬಗ್ಗೆ ಕುಮಾರಸ್ವಾಮಿ ತಲೆಕಡಿಸಿಕೊಳ್ಳುವುದು ಬೇಡ. ಅವರ ಪಕ್ಷದ ಬಗ್ಗೆ ಚಿಂತಿಸಲಿ. ಕುಮಾರಣ್ಣನಿಗೆ ಎಲ್ಲಿಂದ ಮಾಹಿತಿ ಬರುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ.
ಸಿ.ಡಿ., ಹೊಟೇಲ್, ತೋಟದ ಮನೆ!ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕುಮಾರಸ್ವಾಮಿಯವರ ಸಿ.ಡಿ., ತಾಜ್ ವೆಸ್ಟ್‌ಎಂಡ್ ಹೊಟೇಲ್, ಅವರ ಮನೆ, ಅವರ ತೋಟದ ಮನೆ… ಇವೆಲ್ಲ ಪ್ರಕರಣಗಳು ನನಗೂ ಗೊತ್ತಿವೆ. ಅವರು ಇದೇ ರೀತಿ ಮಾತು ಮುಂದುವರಿಸಿದರೆ ನಾವು ಕೂಡ ಮಾತನಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕುಮಾರಸ್ವಾಮಿ ಅತ್ಯಂತ ಸ್ವಾರ್ಥಿ. ಬಿಜೆಪಿಗಾಗಲೀ, ಕಾಂಗ್ರೆಸ್‌ಗಾಗಲೀ ಬಹುಮತ ಬರಬಾರದು, ಅತಂತ್ರ ಪರಿಸ್ಥಿತಿ ನಿರ್ಮಾಣಗೊಳ್ಳಬೇಕು. ತಾನು ನಿರ್ಧಾರ ಮಾಡು ವವನಾಗಬೇಕು ಎಂಬ ಅತ್ಯದ್ಭುತ ಆಸೆಯನ್ನು ಇರಿಸಿ ಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಚಡ ಪಡಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ವಿಧಾನಸೌಧದಿಂದ ಆಡಳಿತ ನಡೆಸುತ್ತಿರಲಿಲ್ಲ ಎಂದಿದ್ದಾರೆ. ಎಚ್‌ಡಿಕೆ ಹೇಳಿದ್ದೇನು?
ಶೃಂಗೇರಿ ಮಠ ಒಡೆದ ಬ್ರಾಹ್ಮಣ ವರ್ಗ ಪ್ರಹ್ಲಾದ ಜೋಷಿ ಅವರದ್ದು. ಮಹಾತ್ಮಾ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು. ಪ್ರಹ್ಲಾದ್ ಜೋಷಿ ನಮ್ಮ ಹಳೆಯ ಕಾಲದ ಬ್ರಾಹ್ಮಣರಲ್ಲ. ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠ ಪೇಶ್ವೆ ಸಮುದಾಯಕ್ಕೆ ಸೇರಿದವರು. ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇಜನ ಸುಖೀನೋ ಭವಂತು ಎನ್ನುವವರು. ಆದರೆ ಇವರು ದೇಶ ಒಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನು ಹತ್ಯೆ ಮಾಡಿದವರು ಎಂಬ ವಿವಾದಾತ್ಮಕ ಹೇಳಿಕೆಯನ್ನು ಎಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ನವಗ್ರಹ ಯಾತ್ರೆ: ಜೋಷಿ
ಪ್ರಹ್ಲಾದ್ ಜೋಷಿ ಅವರು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ, “ಜೆಡಿಎಸ್ ತಮ್ಮ ಯಾತ್ರೆಗೆ ಪಂಚರತ್ನ ಯಾತ್ರೆ ಎಂದು ಏಕೆ ಹೆಸರಿಟ್ಟಿತು ಎಂಬುದೇ ಗೊಂದಲಕಾರಿ. ಎಚ್.ಡಿ. ದೇವೇಗೌಡರ ಮನೆಯಲ್ಲಿ ಹಲವು ನಾಯಕರಿದ್ದು, ಅಧಿಕಾರಕ್ಕಾಗಿ ಕಚ್ಚಾಟ ಅಲ್ಲಿಂದಲೇ ಆರಂಭವಾಗಿದೆ. ಅವರು ನವಗ್ರಹ ಯಾತ್ರೆ ಎಂಬ ಹೆಸರಿಡಬೇಕಿತ್ತು’ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಎಚ್.ಡಿ. ಕುಮಾರ ಸ್ವಾಮಿ ಪ್ರತಿಕ್ರಿಯಿಸಿ, “ಪ್ರಹ್ಲಾದ್ ಜೋಷಿ ಯನ್ನು ಚುನಾವಣೆ ಅನಂತರ ಮುಖ್ಯ ಮಂತ್ರಿ ಮಾಡಬೇಕು ಎಂದು ಸಂಘ ಪರಿವಾರ ನಿರ್ಧರಿಸಿದೆ. ದಿಲ್ಲಿಯಲ್ಲಿ ಎಂಟು ಉಪ ಮುಖ್ಯ ಮಂತ್ರಿಗಳನ್ನು ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಎಂಬ ಹೆಸರು ಬೇಕಾದರೂ ಕೊಡುತ್ತೇನೆ’ ಎಂದರು. ಜತೆಗೆ ಮುಖ್ಯಮಂತ್ರಿ ಆಗ ಬೇಕು ಎಂದು ಪ್ರಹ್ಲಾದ ಜೋಷಿ ಏನೇನೋ ಮಾತ ನಾಡುತ್ತಿದ್ದಾರೆ. ಅವರದು ಯಾವ ಯಾತ್ರೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು. ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಂಗಳೂರು ಮತ್ತು ತುಮಕೂರಿನಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. ಸೋಮವಾರ ಬೆಳಗ್ಗೆ ನಗರಕ್ಕೆ ಬಂದಿಳಿಯಲಿರುವ ಅವರು 11 ಗಂಟೆಗೆ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ “ಭಾರತ ಇಂಧನ ಸಪ್ತಾಹ’ವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಗುಬ್ಬಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿದರೆಹಳ್ಳಿ ಕಾವಲ್‌ನಲ್ಲಿ ಭಾಷಣ ಮಾಡಲಿದ್ದಾರೆ. ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆಯಿದೆ. ಕುಮಾರಸ್ವಾಮಿಯವರು ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ತ್ಯಾಗ, ಬಲಿದಾನ ಸಾಕಷ್ಟಿದೆ. ಯಾವುದೇ ಜಾತಿಯ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಮಾಜಿ ಸಿಎಂಗೆ ಶೋಭೆ ತರುವುದಿಲ್ಲ. ಅವರು ತತ್‌ಕ್ಷಣ ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು.
– ಆರ್. ಅಶೋಕ್, ಕಂದಾಯ ಸಚಿವ ಎಂಟು ಮಂದಿ ಉಪ ಮುಖ್ಯಮಂತ್ರಿಗಳು ಎಂದು ಅವರ ಮನೆಯೊಳಗಿರುವವರನ್ನೇ ನೋಡಿ ಹೇಳಿರಬಹುದು. ಏಕೆಂದರೆ ಅವರದು ಕುಟುಂಬ ರಾಜಕಾರಣ. ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಸಂಘದ ವಿಚಾರದ ಬಗ್ಗೆ ಎಚ್ಚರಿಕೆಯಿಂದ ಮಾತನಾಡಲಿ.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ