Advertisement

Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!

05:32 PM Jun 15, 2024 | Team Udayavani |

ಬ್ರಹ್ಮಾವರ: ಇಲ್ಲಿನ ರಸ್ತೆ ಡಾಮರೀಕರಣಗೊಂಡಿದೆ. ಕಿರಿದಾದ ರಸ್ತೆಗಳು ವಿಸ್ತರಣೆಗೊಂಡಿವೆ. ಖಾಸಗಿ ವಾಹನಗಳು, ಟೆಂಪೊ, ಟಿಪ್ಪರ್‌ಗಳು ಭರದಿಂದ ಸಂಚರಿಸುತ್ತಿವೆ. ಆದರೆ, ಇವರು ಮಾತ್ರ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತೆ ನಡೆದೇ ಸಾಗುತ್ತಿದ್ದಾರೆ. ಯಾಕೆಂದರೆ ಡಬಲ್‌ ರೋಡ್‌ ಆದರೂ ಇಲ್ಲಿ ಬಸ್ಸೇ ಸಂಚರಿಸುವುದಿಲ್ಲ.

Advertisement

ಬ್ರಹ್ಮಾವರ ಗ್ರಾಮಾಂತರದ ಹಲವು ಕಡೆ ಇಂದಿಗೂ ಸಾವಿರಾರು ವಿದ್ಯಾರ್ಥಿಗಳ, ನಿತ್ಯ ನೌಕರಿಗೆ ತೆರಳುವವರ ದುಸ್ಥಿತಿ ಇದು.
ಹೆಚ್ಚು ದೂರದ ಸಂಗತಿ ಬಿಡಿ, ಬ್ರಹ್ಮಾವರಕ್ಕೆ ತಾಗಿಕೊಂಡಿರುವ ಮಟಪಾಡಿ ಜನತೆಯ ಪರಿ ಸ್ಥಿತಿ ನೋಡಿದರೆ ಸಾಕು. ಮಟಪಾಡಿ, ಬಲ್ಜಿ, ಕುದ್ರುಗಳ ಜನರು ದಶಕಗಳಿಂದ ನಡೆದೇ ಸಾಗುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು. ಮೊದಲಾದರೆ ಕಿರಿದಾದ ಹದಗೆಟ್ಟ ರಸ್ತೆ ಇತ್ತು, ಈಗ ಎರಡು ಘನ ವಾಹನಗಳು ಆರಾಮವಾಗಿ ಸಂಚರಿಸಬಹುದಾದ ಕಾಂಕ್ರೀಟ್‌, ಫೇವರ್‌ ಫಿನಿಶ್‌ ರಸ್ತೆ. ಆದರೆ ಬಸ್‌ ಮಾತ್ರ ಸಂಚರಿಸುವುದಿಲ್ಲ. ಮಟಪಾಡಿ ಮೂಲಕ ನೀಲಾವರ ಸಂಪರ್ಕವಿದೆ.

ಒಂದಾನೊಂದು ಕಾಲದಲ್ಲಿ ಈ ಮಾರ್ಗದಲ್ಲಿ ಬಸ್‌ ಸಂಚರಿಸಿತ್ತಂತೆ, ಕೆಲವೇ ದಿನಗಳಲ್ಲಿ ಅದೂ ಸ್ಥಗಿತಗೊಂಡಿತು ಎಂದು ಜನರು ನೆನಪಿಸುತ್ತಾರೆ. ಕುಂಜಾಲಿನಿಂದ ನೀಲಾವರ, ಕೂರಾಡಿಯಿಂದ ಗುಡ್ಡೆಯಂಗಡಿ ಮೂಲಕ ಮಂದಾರ್ತಿ ವರೆಗೆ ರಸ್ತೆ
ಅಭಿವೃದ್ದಿಗೊಂಡಿದೆ. ಈ ಭಾಗದಲ್ಲಿ ಬಸ್‌ ಸೌಕರ್ಯ ಕಲ್ಪಿಸಬೇಕೆನ್ನುವುದು ಬಹುಜನರ ಬೇಡಿಕೆ. ಕುಂಜಾಲಿನಿಂದ ಆರೂರು, ಕೊಳಲಗಿರಿ ಮೂಲಕ ಮಣಿಪಾಲ ಸಂಪರ್ಕ ಅತಿ ಸಮೀಪ. ಆದರೆ ಬಸ್‌ ಸೌಲಭ್ಯವೇ ಇಲ್ಲ. ಗ್ರಾಮಾಂತರದ ಕರ್ಜೆ-ಪೆರ್ಡೂರು, ನಂಚಾರು-ಆವರ್ಸೆ ಮಾರ್ಗಗಳಲ್ಲಿಯೂ ಬಸ್‌ ಮರೀಚಿಕೆ.

ಬೆಳಗ್ಗೆ-ಸಂಜೆ ಉಸಿರಾಡೋದೂ ಕಷ್ಟ!
ಬ್ರಹ್ಮಾವರ ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳಾದ ಪೇತ್ರಿ-ಹೆಬ್ರಿ, ಬಾರಕೂರು-ಮಂದಾರ್ತಿ ಮಾರ್ಗದ ಬಸ್‌ಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಉಸಿರಾಡಲೂ ಆಗದ ಸ್ಥಿತಿ. ಹಾರಾಡಿ ಹೊನ್ನಾಳ ಬಸ್‌ನಲ್ಲಿಯೂ ಇದೇ ದುಸ್ಥಿತಿ. ಕನಿಷ್ಠ ಬೆಳಗ್ಗೆ, ಸಂಜೆಯಾದರೂ ಹೆಚ್ಚುವರಿ ಬಸ್‌ ಕಲ್ಪಿಸಬೇಕೆನ್ನುವುದು ಜನರ ಆಶಯ.

ಕೋವಿಡ್‌ ಸಮಯದಲ್ಲಿ ಹೋದ ಬಸ್‌ ಇಂದಿಗೂ ಮರಳಿ ಬಂದಿಲ್ಲ
ಕೊರೊನಾ ನಂತರ ಉಡುಪಿಯಿಂದ ಬ್ರಹ್ಮಾವರ ಪೇತ್ರಿ ಮಾರ್ಗವಾಗಿ ಸಂಚರಿಸುವ ಬಹುತೇಕ ಬಸ್‌ಗಳು ಕಡಿಮೆ ಆಗಿವೆ. ಬೆಳಗ್ಗೆ ಎಲ್ಲ ಬಸ್‌ಗಳಲ್ಲಿ ಕರ್ಜೆ ಪೇತ್ರಿ ಪರಿಸರದ ಮಕ್ಕಳು ಬಸ್‌ ಬಾಗಿಲಲ್ಲಿ ನಿಂತು ಹೋಗುವ ಪರಿಸ್ಥಿತಿ. ಬೇರೆ ಎಲ್ಲ ಮಾರ್ಗಗಳಲ್ಲಿ ನರ್ಮ್ ಬಸ್‌ ಸಂಚರಿಸಿರುತ್ತಿದ್ದರೂ ಈ ರೂಟ್‌ನಲ್ಲಿ ಸೌಲಭ್ಯವಿಲ್ಲ. ಬೆಳಗ್ಗೆ 7.50ಕ್ಕೆ ಕರ್ಜೆ ಪರಿಸರದಲ್ಲಿ ಬಸ್‌ ತಪ್ಪಿ ಹೋದರೆ ಮತ್ತೆ 8.50ಕ್ಕೆ ಬರುವುದು. ಮಧ್ಯ ಇದ್ದ ಬಸ್‌ ಟ್ರಿಪ್‌ ಕಟ್‌. 9.10ಕ್ಕೆ ಇದ್ದ ಬಸ್‌ ಈಗಿಲ್ಲ. ಉಡುಪಿಯಿಂದ ಪೇತ್ರಿಗೆ ಸಂಚರಿಸಲು ಇದ್ದ ರಾತ್ರಿ ಟ್ರಿಪ್‌ ಖೋತಾ. ರವಿವಾರ ಬಹುತೇಕ ಬಸ್‌ಗಳು ಈ ರೂಟ್‌ನಲ್ಲಿ ಟ್ರಿಪ್‌ ಕಟ್‌ ಮಾಡುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Advertisement

ಉಡುಪಿ, ಮಣಿಪಾಲಕ್ಕೆ ನೇರ ರಸ್ತೆ ಇದೆ, ಆದರೆ…
ಗ್ರಾಮಾಂತರ ಪ್ರದೇಶದವರು ಉಡುಪಿ, ಮಣಿಪಾಲಕ್ಕೆ ತೆರಳಲು ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವುದೇ ಬೇಕಿಲ್ಲ. ಕೂರಾಡಿ-ನೀಲಾವರ, ಆರೂರು-ಬೆಳ್ಮಾರು, ಕೊಳಲಗಿರಿ-ಶೀಂಭ್ರ ಸೇತುವೆ ನಿರ್ಮಾಣದಿಂದ ಕನಿಷ್ಠ ಸಮಯದಲ್ಲಿ ನಗರ ಸಂಪರ್ಕಿಸಬಹುದು. ಆದರೆ ಈ ಮಾರ್ಗದಲ್ಲಿ ಒಂದೇ ಒಂದು ಬಸ್‌ ಓಡಾಡದೇ ಇರುವುದು ವಿಪರ್ಯಾಸ. ಹೊಸ ಬಸ್‌ ಸಂಚಾರದಿಂದ ನಿತ್ಯ ನೌಕರಿಗೆ ತೆರಳುವವರು, ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿಗೆ ಅನುಕೂಲ ಆಗಲಿದೆ. ಇನ್ನು ಎಳ್ಳಂಪಳ್ಳಿ, ಕೂರಾಡಿ, ನಾಲ್ಕೂರು, ಮುದ್ದೂರು, ಕೆಂಜೂರು, ಕೆ.ಜಿ. ರೋಡ್‌, ಹಾವಂಜೆ, ಕುಕ್ಕೆಹಳ್ಳಿ ಮೊದಲಾದೆಡೆ ಬಸ್‌
ಸೌಕರ್ಯ ಸಾಲದು.

ಬಸ್‌ಗಳಿಗೆ ರವಿವಾರ ಕಡ್ಡಾಯ ರಜೆ!
ಗ್ರಾಮಾಂತರದ ಬಹುತೇಕ ಪ್ರದೇಶಗಳಲ್ಲಿ ರವಿವಾರ ಜನರಿಗೆ ಇದ್ದಂತೆ ಬಸ್‌ಗಳಿಗೂ ರಜೆ ಕಡ್ಡಾಯ. ಜನ ಸಂಚಾರ ಕಡಿಮೆ ಇರುವುದರಿಂದ ಆರ್ಥಿಕ ದೃಷ್ಟಿಯಿಂದ ಮಾಲಕರು ಬಸ್‌ ಓಡಿಸುವುದೇ ಇಲ್ಲ. ಆ ದಿವಸ ತಿರುಗಾಟಕ್ಕೆ ಹೊರಟ ಉಳಿದವರ ಕಥೆ ಚಿಂತಾಜನಕ.

ಶಾಲೆಯಲ್ಲೂ ಗಮನ ಸೆಳೆದ ಅಭಿಯಾನ 
ಉಡುಪಿ: ಇಲ್ಲಿನ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಬ್ಲ್ಯಾಕ್‌ ಬೋರ್ಡ್‌ನಲ್ಲಿ ನಿತ್ಯವೂ ವಿದ್ಯಾರ್ಥಿಗಳು ಆಯಾ ದಿನ ಪ್ರಮುಖ ಸುದ್ದಿಗಳನ್ನು ಬರೆಯುತ್ತಾರೆ. ಜೂ.14ರಂದು ವಿದ್ಯಾರ್ಥಿಗಳ ಹೆಚ್ಚು ಗಮನ ಸೆಳೆದ ಸುದ್ದಿ ಎಂದರೆ ಉಡುಪಿ ನಗರದಲ್ಲಿಯೇ ಶಾಲಾ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಬಸ್‌ ಸೇವೆ ಸರಿಯಾಗಿಲ್ಲ ಎಂಬುದು. ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡ “ಉಡುಪಿ ನಗರದೊಳಗೆ ಬಸ್‌ ಸರ್ಕಸ್‌’ ಎಂಬ ವರದಿಯನ್ನು ವಿದ್ಯಾರ್ಥಿಗಳು ಮೊದಲ ಆದ್ಯತೆಯಾಗಿ ಬರೆದಿದ್ದರು.

ಪೆರ್ಡೂರು, ಹಿರಿಯಡಕ ಬಲು ಹತ್ತಿರ
ಬ್ರಹ್ಮಾವರದಿಂದ ಪೇತ್ರಿ, ಕುಕ್ಕೆಹಳ್ಳಿ ಮೂಲಕ ಪೆರ್ಡೂರು ಹಾಗೂ ಹಿರಿಯಡ್ಕ ಬಲು ಹತ್ತಿರದಲ್ಲಿದೆ. ಬ್ರಹ್ಮಾವರದಿಂದ ನೇರ ಪೆರ್ಡೂರಿಗೆ ಸೀಮಿತ ಬಸ್‌ ಸಂಚಾರವಿದ್ದರೆ, ಹಿರಿಯಡ್ಕಕ್ಕೆ ಇಲ್ಲವೇ ಇಲ್ಲ. ಅನುಕೂಲ ಕಲ್ಪಿಸಬೇಕೆನ್ನುವುದು ಜನರ ಬೇಡಿಕೆ.

*ಪ್ರವೀಣ್‌ ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next