ಅಜೆಕಾರು: ರಸ್ತೆಯಲ್ಲಿಯೇ ಹರಿಯುವ ಮಳೆ ನೀರು, ಹೊಂಡ, ಕೆಸರಿನಿಂದ ರಾಡಿ ಎದ್ದು ಸಂಚರಿಸುವುದೇ ಇಲ್ಲಿ ಸಾಹಸವಾಗಿದೆ. ಇದು ವರಂಗ ಗ್ರಾ.ಪಂ. ವ್ಯಾಪ್ತಿಯ ತಲೆಮನೆ ಬ್ರಹ್ಮಸ್ಥಾನ ಸಂಪರ್ಕ ಕಲ್ಪಿಸುವ ರಸ್ತೆಯ ಕತೆಯಿದು.
ಮುನಿಯಾಲಿನಿಂದ ಕಬ್ಬಿನಾಲೆಗೆ ಹೋಗುವ ಮುಖ್ಯ ರಸ್ತೆ ಯಿಂದ ತಲೆಮನೆಗೆ ಹೋಗುವ ಕೂಡುರಸ್ತೆ ಇದಾಗಿದ್ದು ಕಳೆದ ಕೆಲ ವರ್ಷಗಳ ಹಿಂದೆ ರಸ್ತೆಯ ಕೆಲ ಭಾಗಗಳಲ್ಲಿ ಕಾಂಕ್ರೀಟ್, ಡಾಮರು ಹಾಕಲಾಗಿತ್ತಾದರೂ ಉಳಿದ ಭಾಗ ಕಚ್ಛಾ ರಸ್ತೆ ಆಗಿರುವುದರಿಂದ ಮಳೆ ನೀರಿನಿಂದ ಕೆಸರುಮಯವಾಗಿದೆದೆ.
2 ಕಿ.ಮೀ. ಹದಗೆಟ್ಟ ರಸ್ತೆ:
ತಲೆಮನೆ ಸಂಪರ್ಕಿಸುವ 4 ಕಿ.ಮೀ. ರಸ್ತೆಯಲ್ಲಿ ಸುಮಾರು 2.10 ಕಿ.ಮೀ. ಭಾಗ 2015ರಲ್ಲಿ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿ ಆಗಿತ್ತು. ಇದರಲ್ಲಿ ಸುಮಾರು 500 ಮೀ.ನಷ್ಟು ಭಾಗ ಅರಣ್ಯ ಪ್ರದೇಶದಲ್ಲಿರುವುದರಿಂವ ಅರಣ್ಯ ಇಲಾಖೆ ರಸ್ತೆ ಅಭಿವೃದ್ಧಿಗೆ ಆಕ್ಷೇಪಿಸುತ್ತಿದ್ದರೆ ತಲೆಮನೆ ಸೇತುವೆಯಿಂದ 300 ಮೀ. ಅನಂತರ ಸುಮಾರು 1.3 ಕಿ.ಮೀ.
ಬ್ರಹ್ಮಸ್ಥಾನ ರಸ್ತೆಯವರೆಗೆ ಅಭಿವೃದ್ಧಿಯನ್ನೇ ಕಂಡಿಲ್ಲ. ಮಳೆಗಾಲ ದಲ್ಲಿ ರಸ್ತೆಯಲ್ಲಿಯೇ ಮಳೆ ನೀರು ಹರಿಯುವುದರಿಂದ ರಸ್ತೆ ತುಂಬ ಹೊಂಡಗಳು ನಿರ್ಮಾಣವಾಗಿವೆ. ರಸ್ತೆ ಸಂಪೂರ್ಣ ಹದಗೆಟ್ಟರುವುದರಿಂದ ವಾಹನ ಸಂಚಾರ ಅಸಾಧ್ಯವಾಗಿದೆ. ಈ ಭಾಗದಲ್ಲಿ ಸುಮಾರು 25 ಮನೆಗಳಿದ್ದು 150ಕ್ಕೂ ಅಧಿಕ ಮಂದಿ ಇಲ್ಲಿ ನೆಲೆಸಿದ್ದಾರೆ. ಇವರೆಲ್ಲರೂ ಈ ಮಾರ್ಗವಾಗಿಯೇ ಪ್ರತಿದಿನ ಸಂಚರಿಸಬೇಕಾಗಿದೆ.
ಹೈನುಗಾರಿಕೆಯಿಂದ ದೂರ :
ಇಲ್ಲಿ ಕೃಷಿಕರು ಹೆಚ್ಚಾಗಿ ಉಪ ಕಸುಬಾಗಿ ಹೈನುಗಾರಿಕೆ ನಡೆಸುತ್ತಾರೆ. ಆದರೆ ಈ ಗ್ರಾಮದ ಜನತೆ ರಸ್ತೆ ದುಸ್ಥಿತಿಯಿಂದ ಹೈನುಗಾರಿಕೆಯಿಂದ ದೂರ ಉಳಿದಿದ್ದಾರೆ. ಸುಮಾರು 9 ಕಿ.ಮೀ ದೂರದಲ್ಲಿ ಹಾಲಿನ ಡೈರಿ ಇರುವುದರಿಂದ ಜನತೆ ಸಂಕಷ್ಟ ಪಡುವಂತಾಗಿದೆ.
ಇತರ ಸಮಸ್ಯೆ ಗಳೇನು? :
- ಜ ಮಳೆಗಾಲದಲ್ಲಿ ನಿರಂತರ ವಿದ್ಯುತ್ ಸಮಸ್ಯೆ.
- ಕೃಷಿಗೆ ಕಾಡು ಪ್ರಾಣಿ ಹಾವಳಿ.
- ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಸಂಚಾರ ನಡೆಸುವುದೇ ಅಸಾಧ್ಯ.
- ಹಾಲಿನ ಡೇರಿ ಇಲ್ಲದೆ ಹೈನುಗಾರಿಕೆಗೆ ಹಿನ್ನಡೆ.
- ಕಾಡುವ ನೆಟ್‌ವರ್ಕ್ ಸಮಸ್ಯೆ.
ಅಭಿವೃದ್ಧಿಗೆ ಕ್ರಮ :
ತಲೆಮನೆ ಬ್ರಹ್ಮಸ್ಥಾನ ರಸ್ತೆಯ ಸುಮಾರು 2 ಕಿ.ಮೀ. ಭಾಗ ಈಗಾಗಲೇ ಅಭಿವೃದ್ಧಿ ಆಗಿದ್ದು ಉಳಿದ ರಸ್ತೆ ಅಭಿವೃದ್ಧಿಗೆ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ. ಅರಣ್ಯ ಇಲಾಖೆ ಆಕ್ಷೇಪ ಬಗ್ಗೆ ಸಚಿವ ಸುನಿಲ್ ಕುಮಾರ್ ಗಮನಕ್ಕೆ ತರಲಾಗಿದ್ದು ರಸ್ತೆ ಅಭಿವೃದ್ಧಿಪಡಿಸಲಾಗುವುದು.
–ಉಷಾ ಹೆಬ್ಟಾರ್, ಅಧ್ಯಕ್ಷರು, ವರಂಗ ಗ್ರಾಮ ಪಂಚಾಯತ್
ಕೆಸರಿನ ಹೊಂಡ :
ತಲೆಮನೆ ಬ್ರಹ್ಮಸ್ಥಾನ ಸಂಪರ್ಕ ರಸ್ತೆ ತೀರಾ ಹದಗೆಟ್ಟದ್ದು ಸಂಚಾರ ನಡೆಸುವುದು ಅಸಾಧ್ಯವಾಗಿದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಅನೇಕ ಬಾರಿ ಮನವಿ ಮಾಡಲಾಗಿದೆ. ಮಳೆಗಾಲದಲ್ಲಿ ರಸ್ತೆ ಕೆಸರಿನ ಹೊಂಡವಾಗುತ್ತದೆ. ಹದಗೆಟ್ಟ ರಸ್ತೆಯಿಂದಾಗಿ ಸ್ಥಳೀಯರು ಮೂಲ ಸೌಕರ್ಯಗಳಿಂದ ವಂಚಿತರಾಗುವಂತಾಗಿದೆ.
–ಪ್ರಶಾಂತ್ ಶೆಟ್ಟಿ ತಲೆಮನೆ, ಸ್ಥಳೀಯರು
-ಜಗದೀಶ್ ಅಂಡಾರು