ನವದೆಹಲಿ: ಭಾರತ ಕಂಡ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತೆ ಭಾರತವನ್ನು ಪ್ರತಿನಿಧಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸದ್ಯ ವೃತ್ತಿಪರ ಬಾಕ್ಸರ್ ಆಗಿರುವ ಅವರು ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಸಿದ್ಧತೆಯಲ್ಲಿದ್ದಾರೆ. ಆದರೆ ಇದಕ್ಕೆ ಭಾರತ ಬಾಕ್ಸಿಂಗ್ (ಬಿಎಫ್ಐ) ನಿಯಮಗಳು ಅನುವು ಮಾಡಿಕೊಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತದ ಪರ ಬಾಕ್ಸಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದರು. ವೃತ್ತಿಪರ ಬಾಕ್ಸಿಂಗ್ ಪ್ರವೇಶಿಸಿದ ನಂತರ ದೇಶವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ತನ್ನ ನಿಯಮ ಬದಲಾವಣೆ ಮಾಡಿದೆ. ಆದ್ದರಿಂದ ವಿಜೇಂದರ್ ಸಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ತೆರೆದುಕೊಂಡಿದೆ.
ಭಾರತವನ್ನು ಪ್ರತಿನಿಧಿಸುವ ಬಾಕ್ಸರ್‌ಗಳು ಎರಡೂವರೆ ತಿಂಗಳು ರಾಷ್ಟ್ರೀಯ ತಂಡದ ಶಿಬಿರದಲ್ಲಿರಬೇಕು ಎನ್ನುವುದು ಸೇರಿದಂತೆ, ಇನ್ನೂ ಹಲವು ನಿಬಂಧನೆಗಳಿವೆ. ಇದನ್ನೆಲ್ಲ ಪೂರೈಸುವುದು ಕಷ್ಟ ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವಿಜೇಂದರ್ ಹೇಳಿದ್ದಾರೆ.