ನಂಜನಗೂಡು: ನಗರಸಭಾ ವ್ಯಾಪ್ತಿಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಪೆಟ್ಟಿ ಅಂಗಡಿಗಳ ತೆರವು ಕಾರ್ಯಾಚರಣೆ ಶುಕ್ರವಾರ ಮಧ್ಯಾಹ್ನ ಪೊಲೀಸರ ರಕ್ಷಣೆಯಲ್ಲಿ ನಗರಸಭಾ ಆರೋಗ್ಯ ವಿಭಾಗದ ಅಧಿಕಾರಿಗಳು ಆರಂಭಿಸಿದರು.
ಏಕಾಏಕಿ ಕಾರ್ಯಚರಣೆಯನ್ನು ಪೆಟ್ಟಿ ಅಂಗಡಿ ಮಾಲಿಕರು ವಿರೋಧಿಸಿದರೂ ಲೆಕ್ಕಿಸದ ನಗರಸಭಾ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ 766 ವಿಶ್ವೇಶ್ವರಯ್ಯ ವೃತ್ತದಲ್ಲಿರುವ 15ಕ್ಕೂ ಹೆಚ್ಚು ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಿದರು. ಈ ವೇಳೆ ಅಂಗಡಿ ಮಾಲಿಕರು, ನಾಳೆಯವರಿಗೆ ಕಾಲಾವಕಾಶ ನೀಡಿ ನಾವೇ ನಮ್ಮ ಅಂಗಡಿಗಳನ್ನು ದೂರ ಸಾಗಿಸಿಕೊಳುತ್ತೇವೆ ಎಂದು ಗೋಗರೆದರು.
ಕೆಲವರು ಸ್ವಯಂಪ್ರೇರಿತರಾಗಿ ಅಂಗಡಿ ಟೆಂಟ್‌ಗಳನ್ನು ಬಿಚ್ಚಿ ಕಾಲಿ ಮಾಡಿದರು. ನಂಜನಗೂಡು ನಗರಸಭಾ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಪೆಟ್ಟಿ ಅಂಗಡಿಗಳಿಂದಾಗಿ ರಸ್ತೆ ಬದಿಯಲ್ಲಿ ಪಾದಚಾರಿಗಳಿಗೆ ಕಿರಿಕಿರಿ ಉಂಟಾಗಿತ್ತು. ಈ ಕಿರಿಕಿರಿ ಅನುಭವಿಸಲಾಗದೆ ಹಲವಾರು ಬಾರಿ ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.
ನಾಳೆಯೂ ಕಾರ್ಯಾಚರಣೆ: ಪ್ರಸ್ತುತ ನಗರಸಭಾ ವ್ಯಾಪ್ತಿಯ ಹುಲ್ಲಹಳಿ ರಸ್ತೆಯ ಬಸವನಗುಡಿಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಮಹಾತ್ಮಗಾಂಧಿ ರಸ್ತೆಯುದ್ದಕ್ಕೂ ತೆರವು ಮಾಡಲಾಗುವುದು. ಕೆಲವರು ನಾಳೆಯವರಿಗೆ ಕಾಲವಕಾಶ ಕೇಳಿದ್ದಾರೆ. ಅವರಾಗಿಯೇ ಮಾಡಿಕೊಂಡರೆ ಮತ್ತೂ ಒಳ್ಳೆಯದು.
ಇಲ್ಲದಿದ್ದರೆ ನಾವೇ ತೆರವು ಮಾಡುತ್ತೇವೆ. ಅಷ್ಟೇ ಅಲ್ಲ ನಗರಸಭಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿರುವ ರಸ್ತೆ ಬದಿಯ ಅಂಗಡಿಗಳನ್ನು ತೆರವು ಮಾಡಲಾಗುವುದು ಎಂದು ನಗರಸಭೆಯ ಆರೋಗ್ಯಾಧಿಕಾರಿ ಅಶೋಕಚಂದ್ರ ಬೋಸ್ ತಿಳಿಸಿದ್ದಾರೆ.