ಮುಂಬಯಿ ಆರ್‌ಸಿಬಿ ಎದುರಿನ ಸೋಲಿಗೆ ಬೌಲಿಂಗ್ ವೈಫಲ್ಯವೇ ಮುಖ್ಯ ಕಾರಣ ಎಂದು ಲಕ್ನೋ ನಾಯಕ ಕೆ.ಎಲ್. ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಓವರ್‌ನಲ್ಲೇ 2 ಪ್ರಮುಖ ವಿಕೆಟ್ ಉರುಳಿಸಿದ ಬಳಿಕ ಆರ್‌ಸಿಬಿ ಮೊತ್ತವನ್ನು 180ರ ತನಕ ಮುಂದುವರಿಯಲು ಅವಕಾಶ ಮಾಡಿಕೊಟ್ಟ ಬಗ್ಗೆ ಅವರು ಚಿಂತೆಗೊಳಗಾಗಿದ್ದಾರೆ.
“ನಮ್ಮ ತಂಡದ ಯೋಜನೆ ಹಾಗೂ ಕಾರ್ಯತಂತ್ರಗಳೆರಡನ್ನೂ ಸಾಕಾರಗೊಳಿಸಲು ಬೌಲರ್ ವಿಫಲರಾದರು. ಟ್ರ್ಯಾಕ್ ಹೇಗಿದೆ ಎಂಬುದನ್ನು ಆರಂಭದಲ್ಲೇ ಗುರುತಿಸಿ ಇದಕ್ಕೆ ತಕ್ಕಂತೆ ಲೈನ್-ಲೆಂತ್ ಕಾಪಾಡಿಕೊಂಡು ಬರಬೇಕಾಗುತ್ತದೆ. ಪಿಚ್‌ನಿಂದ ಬೌಲರ್‌ಗಳಿಗೆ ನೆರವು ಲಭಿಸಿತ್ತು, ನಮ್ಮ ಬೌಲರ್ ಆರಂಭದಲ್ಲೇ ಇದರ ಲಾಭವೆತ್ತಿದರು. ಆದರೆ ಮಿಡ್ಲ್ ಓವರ್‌ಗಳಲ್ಲಿ ಇದೇ ಲಯವನ್ನು ಕಾಯ್ದುಕೊಳ್ಳಲಾಗಲಿಲ್ಲ. ಡೆತ್ ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟೆವು. ಒಟ್ಟಾರೆ 15-20 ರನ್ ಜಾಸ್ತಿ ನೀಡಿದೆವು. ಇದು ಪಂದ್ಯದ ಚಿತ್ರಣವನ್ನು ಬದಲಿಸಿತು’ ಎಂದು ರಾಹುಲ್ ಹೇಳಿದರು.
ಡು ಪ್ಲೆಸಿಸ್ ಆಟಕ್ಕೆ ಪ್ರಶಂಸೆ
“ಚೇಸಿಂಗ್ ವೇಳೆ ನಾವು ದೊಡ್ಡ ಜತೆಯಾಟವೊಂದನ್ನು ದಾಖಲಿಸಬೇಕಿತ್ತು. ಆರ್‌ಸಿಬಿ ಪರ ಡು ಪ್ಲೆಸಿಸ್ ಹೇಗೆ ಇನ್ನಿಂಗ್ಸ್ ಕಟ್ಟಿದರೋ ಅದೇ ರೀತಿ ನಮ್ಮ ಅಗ್ರ ಕ್ರಮಾಂಕದ ಆಟಗಾರರು ಕ್ರೀಸ್ ಆಕ್ರಮಿಸಿಕೊಳ್ಳಬೇಕಿತ್ತು. ಆದರೆ ನಮ್ಮಿಂದ ಇದು ಸಾಧ್ಯವಾಗಲಿಲ್ಲ’ ಎಂದರು.
“ಡು ಪ್ಲೆಸಿಸ್ ಅತ್ಯಂತ ಅನುಭವಿ ಬ್ಯಾಟರ್, ಅತ್ಯುತ್ತಮ ಆಟಗಾರ. ಕಳೆದ ಕೆಲವು ವರ್ಷಗಳಿಂದ ಅವರು ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಇಲ್ಲಿ ಬ್ಯಾಟಿಂಗ್ ನಡೆಸುವುದು ಆಷ್ಟು ಸುಲಭವಾಗಿರಲಿಲ್ಲ. ಆದರೆ ಡು ಪ್ಲೆಸಿಸ್ ಆತ್ಯಂತ ಯೋಜನಾಬದ್ಧವಾಗಿ ಇನ್ನಿಂಗ್ಸ್ ಕಟ್ಟಿದರು. ಇದು ನಿಜವಾದ ಕ್ಯಾಪ್ಟನ್ಸ್ ಇನ್ನಿಂಗ್ಸ್…’ ಎಂದು ಆರ್‌ಸಿಬಿ ಕಪ್ತಾನನನ್ನು ಪ್ರಶಂಸಿಸಿದರು ರಾಹುಲ್.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 6 ವಿಕೆಟಿಗೆ 181 ರನ್ ಪೇರಿಸಿದರೆ, ಲಕ್ನೋ 8 ವಿಕೆಟಿಗೆ 163 ರನ್ ಮಾಡಿ 3ನೇ ಸೋಲನುಭವಿಸಿತು. 25 ರನ್ನಿಗೆ 4 ವಿಕೆಟ್ ಕೆಡವಿದ ಜೋಶ್ ಹ್ಯಾಝಲ್‌ವುಡ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.