Advertisement
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಪರಿಷತ್‌ನಲ್ಲಿ ಕೆ.ಎಸ್. ಈಶ್ವರಪ್ಪ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾವಿಸಿದರಾದರೂ ಅನಂತರದಲ್ಲಿ ವಿಧಾನಸಭೆಯಲ್ಲಿ ನಿಯಮ 69 ಮತ್ತು ವಿಧಾನ ಪರಿಷತ್ತಿನಲ್ಲಿ ನಿಯಮ 68ರಡಿ ಚರ್ಚೆಗೆ ಅವಕಾಶ ನೀಡಲಾಯಿತು. ರಾಜಕೀಯ ಕಾರಣ ಕ್ಕಾಗಿ ಹಿಂದೂಪರ ಕಾರ್ಯಕರ್ತರ ಹತ್ಯೆ ಯಾಗುತ್ತಿದ್ದು ಸರಕಾರ ಕೊಲೆಗಡುಕರ ರಕ್ಷಣೆಗೆ ನಿಂತಿದೆ ಎಂದು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಆರೋಪಿಸಿದರು.
ಇದರಿಂದ ಕುಪಿತರಾದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಗುಜರಾತ್‌ನಲ್ಲಿ ನರೇಂದ್ರಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ನರಮೇಧ ನಡೆದಿರಲಿಲ್ಲವೇ ಎಂದು ತಿರುಗೇಟು ನೀಡಿದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತಲ್ಲದೆ, ಮೋದಿ ಅವರ ಬಗ್ಗೆ ಮಾತನಾಡಬೇಡಿ ಎಂದು ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಅಪ್ಪಚ್ಚು ರಂಜನ್, ಜೀವರಾಜ್, ಬಸವರಾಜ ಬೊಮ್ಮಾಯಿ ಸಚಿವರ ಮೇಲೆ ಮುಗಿಬಿದ್ದರು. ಈ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ನೆರವಿಗೆ ಬಂದ ಸಚಿವ ಕೆ.ಜೆ. ಜಾರ್ಜ್, ಬಿಜೆಪಿಯವರು ಸತ್ತವರನ್ನೆಲ್ಲಾ ನಮ್ಮವರೇ ಅಂತಾರೆ. ನಾವು ಡೆಡ್ ಬಾಡಿ ರಾಜಕಾರಣ ಮಾಡಲ್ಲ. ನಿಮ್ಮ ಅವಧಿಯಲ್ಲಿ ಕೊಲೆಗಳೇ ಆಗಿಲ್ಲವೇ ಎಂದು ಪ್ರಶ್ನಿಸಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಗೃಹ ಸಚಿವರು ನೀವೋ ರಾಮಲಿಂಗಾರೆಡ್ಡಿಯವರೋ …ನೀವೇಕೆ ಉದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿದ್ದೀರಿ ಎಂದು ದಬಾಯಿಸಿದರು. ಆಗ ಜಾರ್ಜ್ ನೆರವಿಗೆ ಬಂದ ಎಂ.ಬಿ.ಪಾಟೀಲ್, ಬಿಜೆಪಿಯವರು ಕೊಲೆಗಳ ಕೃತ್ಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ? ಮೋದಿಯವರು ಬಂದು ಹೋದ ಮೇಲೆ ಹೆಚ್ಚು ಮಾತನಾಡುತ್ತಿದ್ದೀರಿ ಎಂದು ಆರೋಪಿಸಿದರು.
Related Articles
Advertisement
ಭೋಜನಾನಂತರ ಮಾತು ಮುಂದುವರಿಸಿದ ಜಗದೀಶ್ ಶೆಟ್ಟರ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸ ಮುಂದುವರಿಸಿದರು. ಜಗದೀಶ್ ಶೆಟ್ಟರ್, ಆರ್.ಅಶೋಕ್, ಸಿಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಿ.ಎನ್.ಜೀವರಾಜ್ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಮಧ್ಯೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ಮುಂದುವರಿಯಿತು.
ಚರ್ಚೆಗೆ ಉತ್ತರಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಸರಕಾರವನ್ನು ಸಮರ್ಥಿಸಿ ಕೊಂಡು ಬಿಜೆಪಿ ವಿರುದ್ಧ ಹರಿಹಾಯ್ದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಧರಣಿ ಆರಂಭಿಸಿದರಲ್ಲದೆ ಸರಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರಿಂದ ಗದ್ದಲ ಹೆಚ್ಚಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.
ಕೊಲೆಗಡುಕರ ಸ್ವರ್ಗ: ಮೇಲ್ಮನೆಯಲ್ಲಿ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವಿಷಯ ಪ್ರಸ್ತಾವಿಸಿ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅತ್ಯಾಚಾರಿಗಳು ಮತ್ತು ಕೊಲೆಗಡುಕರಿಗೆ ಕರ್ನಾಟಕ ಸ್ವರ್ಗವಾಗಿದೆ. ಆರೋಪಿಗಳನ್ನು ಬಂಧಿಸುವ ಬದಲು ಪೊಲೀಸ್ ಠಾಣೆಗಳಲ್ಲಿ ಬಿರಿಯಾನಿ ಕೊಟ್ಟು ಕಳುಹಿಸುವ ಈ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ವಿರುದ್ಧ ವಾಗ್ಧಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. 6 ವರ್ಷದ ಕಂದಮ್ಮನಿಂದ ಹಿಡಿದು 60 ವರ್ಷ ವೃದ್ಧೆಯ ಮೇಲೂ ಅತ್ಯಾಚಾರ ನಡೆಯುತ್ತಿದೆ. ಹಾಡಹಗಲೇ ಕೊಲೆಗಳು ನಡೆಯುತ್ತಿವೆ. ಪ್ರಶಾಂತ ಪೂಜಾರಿಯಿಂದ ಹಿಡಿದು ಸಂತೋಷ್‌ವರೆಗೆ ಇಲ್ಲಿತನಕ ಸಂಘಪರಿವಾರದ 23 ಕಾರ್ಯಕರ್ತರ ಹತ್ಯೆಯಾಗಿದೆ. ನಮ್ಮ ಒತ್ತಾಯ, ಪ್ರತಿಭಟನೆಗೆ ಮಣಿದು ಕೆಲವರನ್ನು ಸರಕಾರ ಬಂಧಿಸುತ್ತದೆ. ಆದರೆ, ಮುಂದೆ ಕ್ರಮ ಆಗುವುದಿಲ್ಲ. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದು ಬಿರಿಯಾನಿ ತಿನ್ನಿಸಿ ಕಳಿಸುವ ವ್ಯವಸ್ಥೆ ಈ ಸರಕಾರದಲ್ಲಿದೆ ಎಂದು ಆರೋಪಿಸಿದರು.
ಉಗ್ರಪ್ಪ ವರದಿ ಎಲ್ಲಿ: ಉಗ್ರಪ್ಪ ಅವರು ಅಧ್ಯಕ್ಷತೆಯ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆ ಸಮಿತಿ 2015ರಲ್ಲಿ ಡಿಸೆಂಬರ್‌ನಲ್ಲಿ ವರದಿ ಕೊಟ್ಟಿದೆ. ಇಡೀ ರಾಜ್ಯ ಸುತ್ತಾಡಿ, ಹೆಣ್ಣುಮಕ್ಕಳ ಅಳಲನ್ನು ಕೇಳಿರುವ ಉಗ್ರಪ್ಪನವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಸರಕಾರ ಆ ವರದಿಗೆ ಸ್ಪಂದಿಸಿಲ್ಲ. ಅತ್ಯಾಚಾರಗಳು ಎಷ್ಟು ನಡೆದವು ಎಂದು ತೋರಿಸಲಿಕ್ಕೆ ವರದಿ ಸಿದ್ದಪಡಿಸಿದಂತಿದೆ ಎಂದರು. ಕಾನೂನು-ಸುವ್ಯವಸ್ಥೆಗೆ ನಮ್ಮ ಸರಕಾರ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ. 2008ರಿಂದ 13 ಹಾಗೂ 2013ರಿಂದ ಇಲ್ಲಿವರೆಗಿನ ಅಪರಾಧ ಪ್ರಕರಣಗಳನ್ನು ಅವಲೋಕಿಸಿದರೆ ಅಪರಾಧ ಪ್ರಕರಣಗಳಲ್ಲಿ ಶೇ.2ರಷ್ಟು ಇಳಿಕೆಯಾಗಿದೆ ಎಂದು ಸಭಾನಾಯಕ ಎಂ.ಆರ್. ಸೀತಾರಾಂ ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಇತ್ತೀಚೆಗೆ ಕೊಲೆ ಪ್ರಕರಣಗಳು ನಡೆದಾಗ ಅಪರಾಧಿಗಳು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುವ ಬದಲು ಮುಖ್ಯ ಮಂತ್ರಿ ಹಾಗೂ ಗೃಹ ಸಚಿವರು, ಹತ್ಯೆಯಾದವರು ಬಿಜೆಪಿ ಕಾರ್ಯಕರ್ತರಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಮಾತನಾಡಿ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಪುರಾಣ ಕಾಲದಿಂದಲೂ ನಡೆಯುತ್ತಿವೆ. ಅಂಕಿ ಅಂಶಗಳ ಮೇಲೆ ಆರೋಪ ಮಾಡುವುದರಿಂದ ತಡೆಯಲು ಸಾಧ್ಯವಿಲ್ಲ. ತಾವು ನೀಡಿರುವ ವರದಿ ಬಗ್ಗೆ ಸರಕಾರ ಕ್ರಮ ಕೈಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಲ್ಲದೇ ನಿರ್ಭಯಾ ನಿಧಿಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.
ಕಾರಜೋಳ ಸಿಡಿಮಿಡಿ: ಅಪರಾಧ ಕೃತ್ಯಗಳ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಜಿಲ್ಲೆ ಹಾಗೂ ಕ್ಷೇತ್ರದ ಬಗ್ಗೆ ಹೇಳಲು ಬಿಜೆಪಿಯ ಗೋವಿಂದ ಕಾರಜೋಳ ಎದ್ದು ನಿಂತರು. ಆದರೆ, ಜಾರ್ಜ್ ಅವರು ಮಾತನಾಡುತ್ತಲೇ ಇದ್ದರು. ಇದಕ್ಕೆ ಸಿಡಿಮಿಡಿಗೊಂಡ ಕಾರಜೋಳ, ನಾವೇನು ಇಲ್ಲಿ ಗೋಲಿ ಆಡಲು ಬರುತ್ತೇವಾ, ಕೂಡ್ರಿ … ಕೂಡ್ರಿ ಎಂದರು. ಅದಕ್ಕೆ ಜಾರ್ಜ್, ನನ್ನನ್ನು ಕೂಡ್ರಿ ಅಂತ ಹೇಳಲು ನೀವ್ಯಾರು ಎಂದರು. ಆಗ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ವಾತಾವರಣ ಉಂಟಾದಾಗ ಸದನ ಮುಂದೂಡಲಾಯಿತು.ಪೊಲೀಸ್ ರಾಜ್ಯ: ಮೈಸೂರಿನಲ್ಲಿ ಪೊಲೀಸ್ ರಾಜ್ಯ ಇದೆ. ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯರು, ರಾಜಕೀಯ ಮುಖಂಡರನ್ನು ಖುದ್ದು ಸಿದ್ದರಾಮಯ್ಯ ಕರೆದು ಕೇಸ್ ವಾಪಸ್ ಪಡೆಯುತ್ತೇನೆ. ನಮ್ಮ ಪರ ಕೆಲಸ ಮಾಡಿ ಎಂದು ಆಮಿಷವೊಡ್ಡುತ್ತಿದ್ದಾರೆ. ಕೆಂಪಯ್ಯ ಅವರು ಅಂತಹ ಪ್ರಕರಣಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಜೆಡಿಎಸ್‌ನ ಜಿ.ಟಿ. ದೇವೇಗೌಡ ಆರೋಪಿಸಿದರು. ಬಿಜೆಪಿ ಅವಧಿಯಲ್ಲೇ ಹೆಚ್ಚು ಅಪರಾಧ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕೊಲೆ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳು ಹೆಚ್ಚಾಗಿವೆ ಎಂಬ ವಿಪಕ್ಷ ಬಿಜೆಪಿ ಆರೋಪಕ್ಕೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿಧಾನಸಭೆಯಲ್ಲಿ ಅಂಕಿ-ಸಂಕಿಗಳ ಸಹಿತ ತಿರುಗೇಟು ನೀಡಿದ್ದು, ಕಾಂಗ್ರೆಸ್ ಸರಕಾರದ ಅವಧಿ ಗಿಂತ ಬಿಜೆಪಿ ಸರಕಾರದ ಅವಧಿಯಲ್ಲೇ ಹೆಚ್ಚು ಅಪರಾಧ ಪ್ರಕರಣ ಗಳು ವರದಿಯಾಗಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಮತ್ತು ಹಿಂದೂ ಕಾರ್ಯಕರ್ತರ ಕೊಲೆ ಕುರಿತಂತೆ ನಿಯಮ 69ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, ಬಿಜೆಪಿ ಸರಕಾರದ ಅವಧಿಯಲ್ಲಿ ಅಪರಾಧ ಪ್ರಮಾಣ ಶೇ. 6ರಷ್ಟಿದ್ದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2017ರ ಅಂತ್ಯಕ್ಕೆ ಶೇ. 5ಕ್ಕೆ ಇಳಿದಿದೆ. ಹೀಗಿರುವಾಗ ಕಾನೂನು ಸುವ್ಯವಸ್ಥೆ ಬಿಜೆಪಿ ಸರಕಾರದ ಅವಧಿಯಲ್ಲಿ ಚೆನ್ನಾಗಿತ್ತೇ ಅಥವಾ ಈಗಿನ ಸರಕಾರದಲ್ಲಿ ಚೆನ್ನಾಗಿದೆಯೇ ಎಂದು ಪ್ರಶ್ನಿಸಿದರು.