ಮುಂಬಯಿ: ಬೊರಿವಲಿ ಪೂರ್ವದ ಸಾವರಾ³ಡಾದ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿಯ ವತಿಯಿಂದ ನೂತನ ವರ್ಷದ ಪ್ರಯುಕ್ತ ಜ. 6 ರಂದು ಪ್ರಥಮ ಶನಿವಾರದಂದು ಮಂಡಳಿಯ ಸದಸ್ಯರಿಂದ ಸಂಪೂರ್ಣ ಶನಿಗ್ರಂಥ ಪಾರಾಯಣವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಅಪರಾಹ್ನ 2.30ರಿಂದ ಮಂದಿರದ ಪ್ರಧಾನ ಅರ್ಚಕ ಪೆರ್ಡೂರು ಶ್ರೀ ವಿಷ್ಣುಮೂರ್ತಿ ಅಡಿಗ ಅವರ ಹಸ್ತದಿಂದ ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆ ನೆರವೇರಿತು. ಬಾಲಕೃಷ್ಣ ಭಟ್, ಸದಾಶಿವ ಭಟ್ ಅವರು ಪೂಜಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಆನಂತರ ಮಂಡಳಿಯ ಸದಸ್ಯರಿಂದ ಶನಿದೇವರ ಸಂಪೂರ್ಣ ಶ್ರೀ ಶನಿಗ್ರಂಥ ಪಾರಾಯಣವು ಜರಗಿತು. ಗ್ರಂಥದ ವಾಚಕರಾಗಿ ನಾಗೇಶ್ ಕರ್ಕೇರ, ದಾಮೋದರ ಪುತ್ರನ್, ಸೀತಾರಾಮ ಸನಿಲ್, ಗೋವರ್ಧನ ಸುವರ್ಣ, ಅರ್ಥದಾರಿಗಳಾಗಿ ಕೇಶವ ಕಾಂಚನ್, ಕೃಷ್ಣ ಅಮೀನ್, ಸಂಜೀವ ಸಾಲ್ಯಾನ್ ಅವರು ಸಹಕರಿಸಿದರು.
ಆನಂತರ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ವಿಶೇಷ ರಂಗಪೂಜೆ, ಮಹಾಮಂಗಳಾರತಿ ಜರಗಿತು. ಇದೇ ಸಂದರ್ಭದಲ್ಲಿ ಶ್ರೀ ಶನಿದೇವರಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು. ಸಮಿತಿಯ ಅಧ್ಯಕ್ಷ ಗೋವರ್ಧನ ಸುವರ್ಣ, ಉಪಾಧ್ಯಕ್ಷ ಸಂಜೀವ ಸಾಲ್ಯಾನ್, ಗೌರವ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ನಾಗೇಶ್ ಕರ್ಕೇರ, ಗೌರವ ಕೋಶಾಧಿಕಾರಿ ಕೇಶವ್ ಕಾಂಚನ್, ಜತೆ ಕೋಶಾಧಿಕಾರಿ ಮತ್ತು ಭುವಾಜಿ ಗಿರೀಶ್ ಕರ್ಕೇರ ಅವರ ಉಪಸ್ಥಿತಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳ ಜರಗಿತು.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ತಿಮ್ಮಪ್ಪ ಕೋಟ್ಯಾನ್, ಮೋನಪ್ಪ ತಿಂಗಳಾಯ, ರಘುನಾಥ್ ಸಾಲ್ಯಾನ್, ಸುಧಾಕರ ಸನಿಲ್, ದೇವೇಂದ್ರ ಸುರತ್ಕಲ್, ಕೃಷ್ಣ ಅಮೀನ್, ಅಮಿತಾ ಪುತ್ರನ್, ದಾಮೋದರ ತಿಂಗಳಾಯ, ವಿನೋದ್ ಸಾಲ್ಯಾನ್, ಗೋಪಾಲ್ ಪುತ್ರನ್, ಸೀತಾರಾಮ ಸನಿಲ್, ರಾಮ ಕರ್ಕೇರ, ದಿವಾಕರ ಗೌಡ, ಮೋಹನ್ ಪೂಜಾರಿ, ಗಂಗಾಧರ ಸುವರ್ಣ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಜನವರಿ 26 ರಂದು ಜರಗಲಿರುವ ಮಂಡಳಿಯ 15 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು 43 ನೇ ವಾರ್ಷಿಕ ಶ್ರೀ ಶನಿಗ್ರಂಥ ಪಾರಾಯಣದ ಬಗ್ಗೆ ಇದೇ ಸಂದರ್ಭದಲ್ಲಿ ಅರ್ಚಕರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಮಂಡಳಿಯ ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯ ತುಳು-ಕನ್ನಡಿಗ ಭಕ್ತಾದಿಗಳು, ದಾನಿಗಳು, ಉದ್ಯಮಿಗಳು, ಸಮಾಜ ಸೇವಕರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.