“ಮುಗುಳು ನಗೆ’ ಚಿತ್ರತಂಡವು ಖುಷಿಯಾಗಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಎಲ್ಲಾ ಕಡೆಯಿಂದ ಚಿತ್ರಕ್ಕೆ ಸಿಗುತ್ತಿರುವ ಬಗ್ಗೆ ಚಿತ್ರತಂಡವು ಖುಷಿಯಾಗಿದೆ. ಅದೇ ನೆಪದಲ್ಲಿ, ಸಂತೋಕೂಟ ಮಾಡಿ ಸಂತೋಷ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಗಣೇಶ್, ಯೋಗರಾಜ್ ಭಟ್, ನಿಖೀತಾ ನಾರಾಯಣ್, ಸಯ್ಯದ್ ಸಲಾಂ ಸೇರಿದಂತೆ ಎಲ್ಲರೂ ಖುಷಿಯಿಂದ ಮಾತನಾಡಿದರು.
ಬೇಸರದಿಂದ ಮಾತನಾಡಿದ್ದು ವಿತರಕ ಜಾಕ್ ಮಂಜು ಒಬ್ಬರೇ. ಇಷ್ಟಕ್ಕೂ ಜಾಕ್ ಮಂಜುಗೆ ಯಾಕೆ ಮತ್ತು ಯಾರ ಮೇಲೆ ಬೇಸರ ಎಂದರೆ ಅದಕ್ಕೆ ಉತ್ತರ ಇಲ್ಲಿದೆ. ಜಾಕ್ ಮಂಜು ಬೇಸರ ಬುಕ್ ಮೈ ಶೋ ವಿರುದ್ಧ. ಅದಕ್ಕೆ ಕಾರಣ, “ಮುಗುಳು ನಗೆ’ ಚಿತ್ರದ ಬಗ್ಗೆ ಹಾಕುತ್ತಿರುವ ಸ್ಟೇಟಸ್. “ಬುಕ್ ಮೈ ಶೋಗೆ ಕನ್ನಡ ಸಿನಿಮಾದವರು ಲಕ್ಷಗಟ್ಟಲೆ ಜಾಹಿರಾತು ಕೊಡಬೇಕು. ಕೊಟ್ಟ ಸಿನಿಮಾಗಳನ್ನು ಎತ್ತುತ್ತಾರೆ.
ಇಲ್ಲದಿದ್ದರೆ, ಅಪಪ್ರಚಾರ ಮಾಡುತ್ತಾರೆ. ಸಿನಿಮಾ ನಿರ್ಮಾಪಕರು ಅವರಿಗೆ ಜಾಹಿರಾತು ಕೊಡದೇ ಇದ್ದಲ್ಲಿ, ಅವರೇ, ಒಂದಷ್ಟು ಮಂದಿಯಿಂದ ವೋಟ್ ಮಾಡಿಸುತ್ತಾರೆ. ಅದರಲ್ಲಿ ನೆಗೆಟಿವ್ ವೋಟ್‌ಗಳೇ ಹೆಚ್ಚಿರುತ್ತವೆ. ಉಳಿದಂತೆ ಮೊದ ಮೊದಲು ಮೂರು, ನಾಲ್ಕು ಸ್ಟಾರ್‌ಗಳಿರುತ್ತವೆ. ಆಮೇಲೆ, ಒಂದು, ಅರ್ಧ ಸ್ಟಾರ್‌ಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಆ ಚಿತ್ರದ ಬಗ್ಗೆ ಜನರಿಗೆ ತಪ್ಪು ಪ್ರಚಾರ ತಲುಪುತ್ತದೆ.
ಸಿನಿಮಾ ಬಗ್ಗೆ ನೆಗೆಟಿವ್ ಅಂಶಗಳು ಜನರನ್ನು ತಲುಪಿದರೆ, ಯಾರೂ ಆ ಸಿನಿಮಾ ವೀಕ್ಷಣೆಗೆ ಬರುವುದಿಲ್ಲ. ಅಷ್ಟೇ ಅಲ್ಲ, ಅಲ್ಲಿ ಪ್ರತಿ ಟಿಕೆಟ್‌ಗೆ 40 ರೂಪಾಯಿಗಳನ್ನು ಹೆಚ್ಚು ಪಡೆಯಲಾಗುತ್ತದೆ. ಆ ಹಣದಲ್ಲಿ ಥಿಯೇಟರ್‌ಗೆ ಅರ್ಧ ಮತ್ತು ಆ್ಯಪ್ ನಡೆಸುವವರಿಗೆ ಅರ್ಧ ಹೋಗುತ್ತೆ. ನಿರ್ಮಾಪಕರಿಗೆ ಅದರಿಂದ ಏನೂ ಲಾಭ ಇಲ್ಲ. ಕೇವಲ ಜಾಹಿರಾತು ಹಾಕಿಸಿಲ್ಲ ಎಂಬ ಕಾರಣಕ್ಕೆ ಇಷ್ಟೆಲ್ಲಾ ಮಾಡಲಾಗುತ್ತಿದೆ. ಇದು “ಮುಗುಳು ನಗೆ’ ಸಿನಿಮಾ ವಿಚಾರದಲ್ಲೂ ಆಗಿದೆ’ ಎಂಬುದು ಅವರ ಆಕ್ರೋಶ.
ಇಷ್ಟಕ್ಕೇ ಮುಗಿಯುವುದಿಲ್ಲ. “ಒಂದು ವೇಳೆ ಕನ್ನಡ ಸಿನಿಮಾಗಳ ಜಾಹಿರಾತು ಕೊಟ್ಟರೆ, ಸೋಮವಾರ, ಮಂಗಳವಾರ ಮತ್ತು ಬುಧವಾರ ಆ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು, ವಿಮರ್ಶೆಗಳು ಬುಕ್‌ಮೈ ಶೋನಲ್ಲಿರುತ್ತವೆ. ಆದರೆ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೇರೆ ಭಾಷೆಯ ಸಿನಿಮಾಗಳಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ. ಆಸನಗಳು ಖಾಲಿ ಇದ್ದರೂ, ರೆಡ್‌ಮಾರ್ಕ್ ತೋರಿಸಲಾಗುತ್ತೆ.
ಅದರಿಂದ ಯಾವುದೇ ನಿರ್ಮಾಪಕರಿಗೂ ಲಾಭ ಇಲ್ಲ’ ಎಂಬುದು ಅವರ ಅಭಿಪ್ರಾಯ. ಈ ಕುರಿತು ಜಾಕ್ ಮಂಜು, ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಜಾಕ್ ಮಂಜು ಜತೆಗೆ ಒಂದಷ್ಟು ನಿರ್ಮಾಪಕರು ಸಹ ದನಿಗೂಡಿಸಿದ್ದಾರೆ. ಹಾಗಾಗಿ, ನಿರ್ಮಾಪಕರ ಸಂಘದಿಂದಲೇ ಒಂದು ಹೊಸ ಆ್ಯಪ್ ಮಾಡುವ ಕುರಿತು ಪ್ರಕ್ರಿಯೆ ಶುರುವಾಗಿದೆ.