ಶ್ರೀನಗರ: 33 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬಿಎಸ್‌ಎಫ್ ಯೋಧರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕೈಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದು 20 ಕಿ.ಮೀ. ಸೈಕಲ್ ರ್‍ಯಾಲಿ ನಡೆಸಿದರು.
ಭಾರತದ ಮಾಜಿ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಏಕತಾ ದಿನದ ಅಂಗವಾಗಿ ಈ ಸೈಕಲ್ ರ್‍ಯಾಲಿಯನ್ನು ಶನಿವಾರ ಮುಂಜಾನೆ ಹಮ್ಮಿಕೊಳ್ಳಲಾಗಿತ್ತು.
ಉಗ್ರ ದಾಳಿಗಳು ಹೆಚ್ಚಿರುವ ಈ ದಿನಗಳಲ್ಲಿ ಶ್ರೀನಗರದ ರಸ್ತೆಗಳಲ್ಲಿ ನಿಶಸ್ತ್ರರಾಗಿ ಬಿಎಸ್‌ಎಫ್ ಯೋಧರು ರ್‍ಯಾಲಿ ನಡೆಸಿದ್ದು ಆಶ್ಚರ್ಯಕರವಾಗಿತ್ತು.
ಶ್ರೀನಗರದ ಬಿಎಸ್‌ಎಫ್ ಹುಮ್ಹಾಮಾ ಶಿಬಿರದಲ್ಲಿ ಆರಂಭಗೊಂಡು ದಾಲ್ ಸರೋವರದ ದಡದಲ್ಲಿರುವ ಬೌಲೆವಾರ್ಡ್ ರಸ್ತೆಗೆ ಮುಕ್ತಾಯಗೊಂಡ ಈ ಸೈಕಲ್ ರ್‍ಯಾಲಿಯಲ್ಲಿ ಮಹಿಳಾ ಯೋಧರು ಕೂಡ ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರವು ಈಗ ಸುರಕ್ಷಿತವಾಗಿದೆ ಎಂದು ಸಾರುವುದು ಕೂಡ ಈ ರ್‍ಯಾಲಿಯ ಉದ್ದೇಶವಾಗಿತ್ತು.