Advertisement

ಕವಿವಿ ಕನ್ನಡ ಅಧ್ಯಯನ ಪೀಠಕ್ಕೆ  ಗ್ರಂಥದಾನ 

04:44 PM Apr 14, 2018 | Team Udayavani |

ಧಾರವಾಡ: ವಚನ ವಾಙ್ಮಯದ ಸುಲಭ ಅಧ್ಯಯನಕ್ಕೆ ಪೂರಕವಾಗಿ ಹಿರಿಯ ಸಂಶೋಧಕ, ಭಾಷಾ ವಿಜ್ಞಾನಿ ಡಾ| ಸಂಗಮೇಶ ಸವದತ್ತಿಮಠ ಅವರು ಬರೆದಿರುವ ವರ್ಣನಾತ್ಮಕ ವಚನ ಪದಕೋಶ ಒಂದು ಉತ್ಕೃಷ್ಟ ಕೃತಿಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ| ಬಿ.ವಿ. ಮಲ್ಲಾಪುರ ಹೇಳಿದರು.

Advertisement

ಕವಿವಿಯ ಡಾ| ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಮತ್ತು ಕರ್ನಾಟಕ ಸಂಘದ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ| ಸಂಗಮೇಶ ಸವದತ್ತಿಮಠ ಅವರು ತಮ್ಮ 75ನೇ ಜನ್ಮದಿನದ ಸ್ಮರಣೆಯಲ್ಲಿ ಕೊಡಮಾಡಿದ 52 ಸಾವಿರ ರೂ. ಮೌಲ್ಯದ ಗ್ರಂಥದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯದ ವಿದ್ಯಾರ್ಥಿಗಳು ಹಳೆಗನ್ನಡ ಸಾಹಿತ್ಯದ ಮಹತ್ವ ಅರಿತುಕೊಳ್ಳುವಲ್ಲಿ ಆ ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ಮನಸ್ಸು ಮಾಡಬೇಕು.ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ತಮ್ಮ ಜನ್ಮದಿನೋತ್ಸವ ನೆನಪಿನಲ್ಲಿ ಡಾ| ಸಂಗಮೇಶ ಸವದತ್ತಿಮಠ ಅವರು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ 52 ಸಾವಿರ ರೂ. ಮುಖಬೆಲೆಯ ಗ್ರಂಥಗಳನ್ನು ಕನ್ನಡ ಅಧ್ಯಯನ ಪೀಠದ ಗ್ರಂಥಾಲಯಕ್ಕೆ ಉಚಿತವಾಗಿ ಕೊಡಮಾಡಿರುವುದು ವಿನೂತನ ಉಪಕ್ರಮವಾಗಿದೆ. ಈ ಮೌಲಿಕ ಕೃತಿಗಳನ್ನು ಆಸಕ್ತಿಯಿಂದ ಅವಲೋಕಿಸಿ ತಮ್ಮ ವ್ಯಾಸಂಗಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು.

ಹಿರಿಯ ಸಂಶೋಧಕ ಡಾ| ಸಂಗಮೇಶ ಸವದತ್ತಿಮಠ ಮಾತನಾಡಿ, ತಮ್ಮ ಮಾತೃಸಂಸ್ಥೆಯಲ್ಲಿ ಇಂತಹ ಸಮಾರಂಭ ನಡೆದದ್ದು ಸ್ಮರಣೀಯ ಎಂದು ಹೇಳಿದರು. ನಂತರ ಅವರನ್ನು ಸನ್ಮಾನಿಸಲಾಯಿತು. ಡಾ| ಜೆ.ಎಂ. ನಾಗಯ್ಯ ಮತ್ತು ಕರ್ನಾಟಕ ಸಂಘದ ಅಧ್ಯಕ್ಷ ಡಾ| ರಾಜೇಂದ್ರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರಾದ ಡಾ| ಟಿ.ಎಂ. ಭಾಸ್ಕರ, ಡಾ| ಧನವಂತ ಹಾಜವಗೋಳ, ಡಾ| ನಿಂಗಪ್ಪ ಮುದೇನೂರ, ಡಾ| ವಿ.ಎಲ್‌. ಪಾಟೀಲ, ಡಾ| ಅನಿತಾ ಗುಡಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಗಮೇಶ ಹತ್ತರಕಿ ಹಾಗೂ ಸರಸ್ವತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next