ಬೆಂಗಳೂರು: ಹುಟ್ಟೂರು ತುಮಕೂರು ಜಿಲ್ಲೆ ತುರುವೇಕೆರೆಯಿಂದ ಕಾಂಗ್ರೆಸ್ ಟಿಕೆಟ್ ಸಿಗದೆ ನಿರಾಶರಾಗಿದ್ದ ಚಿತ್ರ ನಿರ್ಮಾಪಕ ಕೆ.ಮಂಜು ಜೆಡಿಎಸ್ ಸೇರಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಕೆ.ಮಂಜು ಅವರನ್ನು ಸೋಮವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುದೀರ್ಘ ಸಮಾಲೋಚನೆ ನಡೆಸಿದ್ದು, ಈ ವೇಳೆ ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆ.ಮಂಜು ಅವರನ್ನು ಒಪ್ಪಿಸಿದ್ದಾರೆ. ಜತೆಗೆ ಪಕ್ಷದ ಬಿ ಫಾರಂ ಅನ್ನೂ ಮಂಜು ಅವರಿಗೆ ಹಸ್ತಾಂತರಿಸಿದ್ದಾರೆ. ಮಂಗಳವಾರ ಅವರು ಬೊಮ್ಮನಹಳ್ಳಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಕೆ.ಮಂಜು ಅವರು ಕಳೆದ ಒಂದು ವರ್ಷದಿಂದ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದರು. ಅಲ್ಲದೆ, ಕ್ಷೇತ್ರದಲ್ಲೂ ಸಂಘಟನೆ ವಿಚಾರದಲ್ಲಿ ಕೆಲಸ ಮಾಡಿದ್ದರು. ಆದರೆ, ಕಾಂಗ್ರೆಸ್ ಅಲ್ಲಿ ಬೇರೆಯವರಿಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಕೆ.ಮಂಜು ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ ದೇವೇಗೌಡರು ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುವಂತೆ ಕೋರಿದರು. ಇದಕ್ಕೆ ಮಂಜು ಅವರು ಒಪ್ಪಿಗೆ ನೀಡಿದರು ಎನ್ನಲಾಗಿದೆ.
ಸ್ವಾಮೀಜಿಗೆ ಟಿಕೆಟ್- ಬಗೆಹರಿದ ಗೊಂದಲ: ಈ ಬೆಳವಣಿಗೆಯಿಂದಾಗಿ ಬೊಮ್ಮನಹಳ್ಳಿಯಿಂದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಬೊಮ್ಮನಹಳ್ಳಿ ಕ್ಷೇತ್ರದಿಂದ ಟಿಕೆಟ್ ನೀಡುವ ಕುರಿತಂತೆ ಇದ್ದ ಸಮಸ್ಯೆಯೂ ಬಗೆಹರಿದಂತಾಗಿದೆ. ಇತ್ತೀಚೆಗೆ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಕೆಂಗೇರಿಯ ಮಠಕ್ಕೆ ಭೇಟಿನೀಡಿ ಜೆಡಿಎಸ್‌ನಿಂದ ಸ್ಪರ್ಧಿಸುವ ಕುರಿತು ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಸ್ವಾಮೀಜಿಯವರೂ ಆಸಕ್ತಿ ತೋರಿಸಿದ್ದರು.
ಆದರೆ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರಿಗೆ ಟಿಕೆಟ್ ನೀಡಿದರೆ ಆದಿಚುಂಚನಗಿರಿ ಪೀಠದ ಭಕ್ತರು ಅಸಮಾಧಾನಗೊಳ್ಳಬಹುದು ಎಂಬ ಕಾರಣಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗೊಂದಲಕ್ಕೆ ಸಿಲುಕಿದ್ದರು. ಈ ಕಾರಣಕ್ಕಾಗಿಯೇ ಕೆ.ಮಂಜು ಅವರನ್ನು ಕರೆಸಿ ದೇವೇಗೌಡರು ಚರ್ಚಿಸಿದ್ದರು. ಮಂಜು ಒಪ್ಪಿದ್ದರಿಂದ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅಭ್ಯರ್ಥಿಯೂ ಸಿಕ್ಕಿದಂತಾಗಿದೆ. ಸ್ವಾಮೀಜಿಯವರನ್ನು ಚುನಾವಣಾ ಕಣಕ್ಕಿಳಿಸುವುದರಿಂದ ಉಂಟಾಗುವ ಗೊಂದಲಕ್ಕೂ ತೆರೆ ಎಳೆದಿದ್ದಾರೆ ಎಂದು ಹೇಳಲಾಗಿದೆ.