Advertisement

BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

05:07 PM May 04, 2024 | Team Udayavani |

ದಾವಣಗೆರೆ: ‘ಬಿಜೆಪಿ ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ. ಇಂಥಾ ಬಿಜೆಪಿಗೆ ವಿನಯ್ ಅನುಕೂಲ ಆಗುವಂತೆ ಮಾಡಿದ್ದು ಸರಿಯಲ್ಲ. ನನಗೆ ಮೋಸ ಮಾಡಿ ಹೋಗಿದ್ದ ಬೈರತಿ ಬಸವರಾಜು ಬಿಜೆಪಿಗೆ ಲಾಭ ಆಗಲಿ ಎಂದು ವಿನಯ್ ಗೆ ಕುಮ್ಮಕ್ಕು ಕೊಡುತ್ತಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

Advertisement

ದಾವಣಗೆರೆಯಲ್ಲಿ ಶನಿವಾರ ನಡೆದ ಕುರುಬ ಸಮುದಾಯ ಮತ್ತು ಹಿಂದುಳಿದ ಸಮಾಜಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ”ಬಿಜೆಪಿ ಹಿಂದುಳಿದವರನ್ನು ಬಳಸಿಕೊಂಡು ಬಿಸಾಡುತ್ತದೆ. ಇದಕ್ಕೆ ಕೆ.ಎಸ್.ಈಶ್ವರಪ್ಪ ಕೂಡ ಸ್ಪಷ್ಟ ಉದಾಹರಣೆ. ಅವರ ಮಗನಿಗೂ ಬಿಜೆಪಿ ಟಿಕೆಟ್ ಕೊಡಲಿಲ್ಲ. ಇದೇ ಬಿಜೆಪಿಯ ಜಾಯಮಾನ” ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರ್ಜರಿ ಪ್ರಚಾರ ಮಾಡುತ್ತಿರುವ ಕುರುಬ ಸಮುದಾಯದ ಮುಖಂಡ ಜಿ.ಬಿ.ವಿನಯ್ ಕುಮಾರ್ ಅವರು ಕಾಂಗ್ರೆಸ್ ಗೆ ಮತ ವಿಭಜನೆಯ ಭೀತಿ ಹುಟ್ಟಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರೇ ಸಮುದಾಯದ ಮತಗಳನ್ನು ಕಾಂಗ್ರೆಸ್ ನಲ್ಲೇ ಉಳಿಸಲು ಕಸರತ್ತು ನಡೆಸುತ್ತಿದ್ದಾರೆ.

”ನನ್ನ ಮತ್ತು ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ಧಿಕ್ಕರಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ಅವರನ್ನು ನೀವೆಲ್ಲರೂ ತಿರಸ್ಕರಿಸಬೇಕು.ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಲ್ಲ, ಇಲ್ಲಿ ನಾನೇ ಅಭ್ಯರ್ಥಿ. ಕಾಂಗ್ರೆಸ್ ಗೆ ಹಾಕುವ ಒಂದೊಂದು ಮತಗಳೂ ನನಗೇ ಹಾಕಿದಂತೆ. ವಿನಯ್ ಗೆ ಹಾಕುವ ಒಂದೊಂದು ಮತವೂ ನನ್ನ ವಿರುದ್ಧ ಹಾಕಿದಂತೆ” ಎಂದು ಹೇಳಿದ್ದಾರೆ.

‘ಕನಕಗುರುಪೀಠದ ಶ್ರೀಗಳ ಜತೆಗೆ ವಿನಯ್ ನನ್ನ ಮನೆಗೆ ಬಂದಿದ್ದರು. ನಾನು ಮತ್ತು ಶ್ರೀಗಳು ವಿನಯ್ ಗೆ ಸಾಕಷ್ಟು ಹೇಳಿದೆವು. “ನಿನ್ನ ಮನೆ ಹಾಳು ಮಾಡ್ತಾರೆ, ಯಾರದ್ದೋ ಮಾತು ಕೇಳಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬೇಡ. ನಿನಗೆ ಮುಂದೆ ಅನುಕೂಲ ಮಾಡ್ತೀನಿ” ಎಂದು ಹೇಳಿದ್ದೆ. ಸ್ವಾಮೀಜಿಗಳ ಸಾನಿಧ್ಯದಲ್ಲಿ ಆಯ್ತು ಎಂದು ಒಪ್ಪಿಕೊಂಡು ಹೋದ ವಿನಯ್ ಆಮೇಲೆ ಉಲ್ಟಾ ಹೊಡೆದಿದ್ದಾರೆ. ಇದು ತಪ್ಪಲ್ವಾ?’ ಎಂದು ಪ್ರಶ್ನಿಸಿದರು.

Advertisement

‘ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬಂದು ಆರು ತಿಂಗಳಾಗಿತ್ತು. ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಮಾಜಿ ಸಚಿವರು, ಶಾಸಕರು, ಜಿಲ್ಲಾ ಮುಖಂಡರು ಒಟ್ಟಾಗಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಡಲು ಹೇಳಿದ್ದಾರೆ. ಹೀಗಾಗಿ ವಿನಯ್ ಗೆ ಮುಂದೆ ಅನುಕೂಲ ಆಗ್ತದೆ ಎಂದು ಹೇಳಿದ್ದೆ ಆದರೂ ನನ್ನ ಮಾತಿಗೆ ಅವರು ಬೆಲೆ ಕೊಡಲಿಲ್ಲ’ ಎಂದರು.

‘ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ. ಆದ್ದರಿಂದ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡಿ ಎಂದು ಕೈಮುಗಿದು ಮನವಿ ಮಾಡುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next