Advertisement

ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ : ಹಾಡಿ ಹೊಗಳಿದ ಜಿ.ಟಿ.ದೇವೇಗೌಡ

02:29 PM Aug 11, 2022 | Team Udayavani |

ಮೈಸೂರು: ನಗರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ”ಯುವಜನ ಮಹೋತ್ಸವ” ಆಯೋಜಿಸಲಾಗಿತ್ತು.ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

Advertisement

ಸಚಿವರಾದ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಖ್ಯಾತ  ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್ .ಎ. ರಾಮದಾಸ್, ಎಲ್. ನಾಗೇಂದ್ರ, ನಿರಂಜನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಮೇಯರ್ ಸುನಂದಾ ಪಾಲನೇತ್ರ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಜಿ.ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

ಮೈಸೂರಿನ ವಿವಿಧೆಡೆಗಳಿಂದ ಆಗಮಿಸಿರುವ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಯುವಜನ ಮಹೋತ್ಸವದಲ್ಲಿ ಭಾಗಿಯಾದರು.

ದೇಶದ ಭವಿಷ್ಯ ರೂಪಿಸಲು ಮುಂದಾಗಬೆಕು

”ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ.ಆದರೆ ಅನಾಮಧೇಯ ಹೋರಾಟಗಾರರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ‌.ಹಾಗಾಗಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸಲು ಮುಂದಾಗಿದ್ದೇವೆ.ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಸಲಾಮ್, ಶ್ರಮ ಜೀವಿಗಳಿಗೆ ಸಲಾಮ್, ಯುವ ಶಕ್ತಿಗೆ ಸಲಾಮ್.ಯುವಕರು ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯ ರೂಪಿಸಲು ಮುಂದಾಗಬೆಕು” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

”ರಾಕಿಂಗ್ ಸ್ಟಾರ್ ಯಶ್ ಯೂತ್ ಐಕಾನ್ ಆಗಿದ್ದಾರೆ.ಹಾಗಾಗಿ ಯಶ್ ರನ್ನು ಕರೆಸಿದ್ದೇವೆ.ಯಶ್ ಹೆಸರಿನಲ್ಲೇ ಯಶಸ್ಸು ಇದೆ. ಅವರು ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಮಾತ್ರವಲ್ಲ.ಕೆಜಿಎಫ್ 1, ಕೆಜಿಎಫ್ 2 ಚಿತ್ರಗಳ ಯಶಸ್ಸಿನ ಮೂಲಕ ಇಡೀ ದೇಶದ ರಾಕಿಂಗ್ ಸ್ಟಾರ್ ಆಗಿದ್ದಾರೆ. ಕನ್ನಡ, ಕನ್ನಡತನವನ್ನು ಇಡೀ ದೇಶದಾದ್ಯಂತ ಯಶ್ ಪಸರಿಸಿದ್ದಾರೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ  ಗುಣಗಾನ ಮಾಡಿದರು.

”ಮೈಸೂರು ಸಂಸ್ಥಾನದಲ್ಲಿ ಮಹಾರಾಜ, ಮಹಾರಾಣಿ ಇಬ್ಬರೂ ಮುಖ್ಯವಾಗಿದ್ದಾರೆ.ಹಾಗಾಗಿ ಮೈಸೂರಿನ ಮಹಾರಾಜ, ಮಹಾರಾಣಿ ಕಾಲೇಜುಗಳೆರಡನ್ನು ನವೀಕರಣ ಮಾಡುತ್ತೇವೆ. ಮಾನಸ ಗಂಗೋತ್ರಿಯಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ‌” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮೋದಿ ಮಾದರಿಯಲ್ಲೇ  ಬೊಮ್ಮಾಯಿ

”ಪ್ರಧಾನಿ ನರೇಂದ್ರ ಮೋದಿ ಮಾದರಿಯಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದಾಗ ಜನರ ಸೇವಕನಾಗಿ ಕೆಲಸ ಮಾಡುವುದಾಗಿ ಹೇಳಿದ್ದರು.ಅದೇ ರೀತಿ ಬಸವರಾಜ ಬೊಮ್ಮಾಯಿ ನಡೆದುಕೊಳ್ಳುತ್ತಿದ್ದಾರೆ‌. ಕಳೆದೊಂದು ವರ್ಷದಿಂದ ಒಳ್ಳೆಯ ಆಡಳಿತ ನೀಡಿದ್ದಾರೆ”. ಎಂದು ಜಿ.ಟಿ.ದೇವೇಗೌಡ ಅವರು ಬಸವರಾಜ ಬೊಮ್ಮಾಯಿ ಅವರ ಗುಣಗಾನ ಮಾಡಿದರು.

”ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಕೆಲವರು ಅಗೌರವದ ಹೇಳಿಕೆ ನೀಡುತ್ತಿದ್ದಾರೆ.ಸಾವರ್ಕರ್ ಜೈಲಿಗೆ ಹೋಗಿದ್ದರಾ ಎಂದು ಪ್ರಶ್ನೆ ಮಾಡುತ್ತಾರೆ.ವೀರ ಸಾವರ್ಕರ್ ಜೈಲಿಗೆ ಹೋಗಿರಲಿಲ್ಲವೇ? ಅವರ ಇತಿಹಾಸವನ್ನು ಎಲ್ಲರೂ‌ ಓದಬೇಕು‌” ಎಂದು ಕಾಂಗ್ರೆಸ್ ನಾಯಕರನ್ನು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಪರೋಕ್ಷವಾಗಿ ಕುಟುಕಿದರು.

ನಗು ನಗುತ್ತಾ ಇರಿ

”ನಮ್ಮೂರಿನಲ್ಲಿ ದೇಶದ ಹೆಮ್ಮೆಯ ಧ್ವಜ ಹಿಡಿಯುವ ಕಾರ್ಯಕ್ರಮ ಆಯೋಜಿಸಿರುವುದರಿಂದ ಬಹಳ ಹೆಮ್ಮೆಯಿಂದ ಬಂದಿದ್ದೇನೆ.ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ.ಮೈಸೂರಿನ ಕಾಳಿದಾಸರಸ್ತೆ, ಒಂಟಿಕೊಪ್ಪಲ್, ಪಡುವಾರಹಳ್ಳಿ, ಮಾನಸ ಗಂಗೋತ್ರಿಯಲ್ಲಿ ಓಡಾಡಿಕೊಂಡಿದ್ದೆ. ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ.ನಾನೇನು ಹೆಚ್ಚು ಬದಲಾಗಿಲ್ಲ.
ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ. ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡುತ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ.ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ” ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next