ಮಂಗಳೂರು: ಕೆಪಿಸಿಸಿ ಅಧ್ಯಕ್ಷರ ಹುದ್ದೆ, ಸಂಪುಟ ಪುನಾರಚನೆಯನ್ನು ಹೈಕಮಾಂಡ್ ನವರೇ ನಿರ್ಧಾರ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಹಾಸನದ ಸ್ವಾಭಿಮಾನ ಸಮಾವೇಶಕ್ಕೆ ನಮ್ಮಲ್ಲಿ ಅಪಸ್ವರವಿಲ್ಲ. ಬಿಜೆಪಿಯವರೇ ಅನಾಮಧೇಯ ಪತ್ರ ಬರೆದಿರಬಹುದು. ನಾನು ತುಮಕೂರಿನಲ್ಲೇ ಸಮಾವೇಶ ಮಾಡಬೇಕೆಂದುಕೊಂಡಿದ್ದೆ. ನನಗೆ ಬೇರೆ ಜವಾಬ್ದಾರಿ ನೀಡಿದ್ದಾರೆ ಎಂದರು.
ಡ್ರಗ್ಸ್ ವಿರುದ್ದ ಯುದ್ದವನ್ನೆ ಸಾರಿದ್ದೇವೆ. ಕಳೆದ ಒಂದು ವರ್ಷದಲ್ಲಿ 250 ಕೋ.ರೂ ಮೌಲ್ಯದ ಡ್ರಗ್ಸ್ ವಶ ಪಡಿಸಿ ನಾಶ ಮಾಡಲಾಗಿದೆ. ಕೆಲವು ಪೆಡ್ಲರ್ಸ್ ಮೇಲೆ ಗೂಂಡಾ ಕಾಯಿದೆ ಹಾಕಲಾಗಿದೆ ಎಂದರು.
ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ನಕ್ಸಲರ ಶರಣಾಗತಿಗೆ ಕರೆ ನೀಡಿದ್ದೇವೆ. ಶರಣಾಗತಿಯಾದರೆ ಒಳ್ಳೆಯದು ಎಂದು ಗೃಹ ಸಚಿವರು ಹೇಳಿದರು.
ವಿವಾದಾತ್ಮಕ ಹೇಳಿಕೆ ನೀಡಿದ ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್ಐಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿರುವ ಎಲ್ಲರಿಗೂ ಕಾನೂನು ಒಂದೇ ಎಂದರು.