ಮುಂಬಯಿ : ನೋಟು ನಿಷೇಧದ ಕರಾಳ ಛಾಯೆಯ ಹೊರತಾಗಿಯೂ ಕಳೆದ ಡಿಸೆಂಬರ್ ತ್ತೈಮಾಸಿಕದಲ್ಲಿ ಶೇ.7ರ ಉತ್ತಮ ಜಿಡಿಪಿ ದಾಖಲಾಗಿದ್ದು ಭಾರತವು ವಿಶ್ವದಲ್ಲಿ ಈಗಲೂ ಅತ್ಯಂತ ಕ್ಷಿಪ್ರಗತಿಯಲ್ಲಿ ಉದಯಿಸುತ್ತಿರುವ ಬಲಿಷ್ಠ ಆರ್ಥಿಕ ಶಕ್ತಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 241.17 ಅಂಕಗಳ ಉತ್ತಮ ಏರಿಕೆಯೊಂದಿಗೆ 28,984.49 ಅಂಕಗಳ ಮಟ್ಟದಲ್ಲಿ ಬುಧವಾರದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 66.20 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,945.80 ಅಂಕಗಳ ಮಟ್ಟದಲ್ಲಿ ಮುಗಿಸಿತು.
ಮುಂಬಯಿ ಶೇರು ಪೇಟೆಯ ಇಂದಿನ ರಾಲಿಗೆ HDFC ಮತ್ತು ITC ಗಣನೀಯ ಕೊಡುಗೆ ನೀಡಿದವು. ಲೋಹದ ಶೇರುಗಳು ಇಂದು ಹೊಳೆದು ವಿಜೃಂಭಿಸಿದವು.
ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಮಹೀಂದ್ರ, ಸನ್ ಫಾರ್ಮಾ, ಡಾ. ರೆಡ್ಡಿ, ಐಟಿಸಿ, ಹಿಂಡಾಲ್ಕೊ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಶೇರುಗಳು ಶೇ.2 ರಿಂದ ಶೇ.3.6ರ ಏರಿಕೆಯನ್ನು ದಾಖಲಿಸಿದವು.
ಇದೇ ವೇಳೆ ಎನ್‌ಟಿಪಿಸಿ, ಟಾಟಾ ಮೋಟರ್, ಗೇಲ್, ಬಿಎಚ್‌ಇಎಲ್, ಭಾರ್ತಿ ಏರ್‌ಟೆಲ್, ಐಡಿಯಾ ಸೆಲ್ಯುಲರ್ ಮತ್ತು ಈಶರ್ ಮೋಟರ್ ಒತ್ತಡಕ್ಕೆ ಗುರಿಯಾದವು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,630 ಶೇರುಗಳು ಮುನ್ನಡೆ ಸಾಧಿಸಿದವು; 1,220 ಶೇರುಗಳು ಹಿನ್ನಡೆಗೆ ಗುರಿಯಾದವು.
ಈ ವರ್ಷಾಂತ್ಯದ ವೇಳೆಗೆ ಭಾರತೀಯ ಶೇರುಗಳು ಬಹುವಾಗಿ ವಿಜೃಂಭಿಸುವ ವಿಶ್ವಾಸವನ್ನು ಗಮನಾರ್ಹ ಸಂಖ್ಯೆಯ ಮಾರುಕಟ್ಟೆ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಅಂತೆಯೇ ವಿಶ್ವ ಹೂಡಿಕೆದಾರರು ಈಗ ಮತ್ತೆ ಭಾರತದತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.