ಮುಂಬಯಿ : ಕೇಂದ್ರ ಬಜೆಟ್ ಪ್ರಸ್ತಾವಗಳ ಬಲದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಏರುಗತಿಯನ್ನು ಪಡೆದುಕೊಂಡಿದ್ದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ವಹಿವಾಟನ್ನು 104.12 ಅಂಕಗಳ ನಷ್ಟದೊಂದಿಗೆ 28,335.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.75 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,768.30 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ನಾಳೆ ಬುಧವಾರ ಹಣಕಾಸು ನೀತಿ ರೂಪಣೆ ಸಮಿತಿಯ ಎರಡು ದಿನಗಳ ಸಭೆಯ ಫಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಶೇರು ಪೇಟೆಯಲ್ಲಿಂದು ಹೂಡಿಕೆದಾರರು ಹಾಗೂ ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ್ದೇ ಸೆನ್ಸೆಕ್ಸ್ ಹಾಗೂ ನಿಫ್ಟಿಯ ಹಿನ್ನಡೆಗೆ ಕಾರಣವಾಗಿದೆ. ಇದೇ ಫೆಬ್ರವರಿ 28ರಂದು ಆರ್‌ಬಿಐ ನಿಂದ ನಡೆಯಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಶೇ.0.25ರ ಬಡ್ಡಿ ದರ ಕಡಿತವಾಗುವುದೆಂಬ ನಿರೀಕ್ಷೆಯನ್ನು ಈಗಾಗಲೇ ಶೇರು ದರ ಏರಿಕೆಯಲ್ಲಿ ಪ್ರತಿಫಲಿಸಲಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇಂದಿನ ವಹಿವಾಟಿನಲ್ಲಿ ಬಿಎಚ್‌ಇಎಲ್, ಬಿಪಿಸಿಎಲ್, ಬ್ಯಾಂಕ್ ಆಫ್ ಬರೋಡ, ಲಾರ್ಸನ್ ಮತ್ತು ಮಾರುತಿ ಸುಜುಕಿ ಟಾಪ್ ಗೇನರ್ ಎನಿಸಿಕೊಂಡವು. ಅದೇ ವೇಳೆ ಟಾಟಾ ಮೋಟರ್, ಕೋಲ್ ಇಂಡಿಯಾ, ಓಎನ್‌ಜಿಸಿ, ಹಿಂಡಾಲ್ಕೋ ಟಾಪ್ ಲೂಸರ್ ಎನಿಸಿಕೊಂಡವು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,562 ಶೇರುಗಳು ಹಿನ್ನಡೆಗೆ ಗುರಿಯಾದವು; 1,330 ಶೇರುಗಳು ಮುನ್ನಡೆ ಕಂಡವು.