Advertisement

ಬಾಂಬ್‌ ನಾಗನ ಮನೆ, ಕಚೇರಿ ಮೇಲೆ ದಾಳಿ 

11:57 AM Apr 15, 2017 | Team Udayavani |

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ, ಮಾಜಿ ರೌಡಿಶೀಟರ್‌ ವಿ.ನಾಗರಾಜ್‌ ಅಲಿಯಾಸ್‌ ಬಾಂಬ್‌ ನಾಗನ ಮನೆ ಹಾಗೂ ಕಚೇರಿ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು, 14.80 ಕೋಟಿ ರೂ. ಮೌಲ್ಯದ ಹಳೇ 1000 ರೂ.ಹಾಗೂ 500 ರೂ. ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಪ್ರತಿ ಗೇಟ್‌ಗಳಿಗೂ ಬೀಗ: ನಾಗರಾಜ್‌ ಮಾಲೀಕತ್ವದ ವಾಣಿಜ್ಯ ಕಟ್ಟಡದ ಎಲ್ಲ ಬಾಗಿಲುಗಳಿಗೆ ಕಬ್ಬಿಣದ ಗೇಟ್‌ಗಳು ಅಳವಡಿಸಿದ್ದು, ದಾಳಿ ಮುನ್ಸೂಚನೆ ಹಿನ್ನೆಲೆಯಲ್ಲಿ ತನ್ನ ಶಿಷ್ಯರಿಂದ ಪ್ರತಿ ಗೇಟ್‌ಗಳಿಗೂ ಬೀಗ ಹಾಕಿಸಿದ್ದ. ಇದನ್ನು ಕಂಡ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಬೀಗ ತೆರೆಯಲು ಸಾಧ್ಯವಾಗಿಲ್ಲ. ಕೊನೆಗೆ ನಕಲಿ ಕೀಲಿ ಕೈ ತಯಾರಿಸುವವರ ಮೂಲಕ ನಾಲ್ಕು ಗೇಟ್‌ಗಳನ್ನು ತೆಗೆಸಿ ಒಳ ಪ್ರವೇಶಿಸಬೇಕಾಯಿತು. ಮತ್ತೂಂದೆಡೆ ಪೊಲೀಸರನ್ನು ಕಂಡ ನಾಗನ ಪತ್ನಿ ಲಕ್ಷಿà ಹಾಗೂ ಪುತ್ರಿ ಮನೆಯ ಬಾಗಿಲು ತೆರೆಯಲು ನಿರಾಕರಿಸಿದರು. ಬಾಗಿಲು ಒಡೆಯಲು ಯತ್ನಿಸಿದಾಗ ಬಾಗಿಲು ತೆರೆದರು ಎಂದು ಮೂಲಗಳು ತಿಳಿಸಿವೆ.

ರಸ್ತೆ ತುಂಬಾ ಸಿಸಿ ಕ್ಯಾಮರಾ: ನಾಗರಾಜ್‌ ಮನೆ ಸುತ್ತ ಮುತ್ತ ಸುಮಾರು 38 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಈತನ ವಾಣಿಜ್ಯ ಕಟ್ಟಡದ ಪಕ್ಕದ ಕಟ್ಟಡದ‌ಲ್ಲೇ ಸುಮಾರು 8 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಮನೆ ಬಳಿ 6 ಮತ್ತು ಮುಖ್ಯರಸ್ತೆಯಿಂದ ನಾಗನ ಮನೆ ಕಡೆ ಬರುವ ರಸ್ತೆಯಲ್ಲೂ ಸಿಸಿ ಕ್ಯಾಮರಾ, ಟೆರೇಸ್‌ ಮೇಲೆ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಂಡು, ಕಡಿಮೆ ವೊಲ್ಟೆಜ್‌ ವಿದ್ಯುತ್‌ ಹರಿಸಲಾಗಿತ್ತು.

ದೂರುದಾರ ದಿನೇಶ್‌, ಇತ್ತೀಚೆಗೆ ಕೇಂದ್ರ ಅಪರಾಧ ವಿಭಾಗದ ಪೊಲೀಸರ ನಡೆಸಿದ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಸಿಕ್ಕಿ ಬಿದ್ದ ಪರಿಷತ್‌ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್‌ ಕುಮಾರ್‌ ಜತೆ ಬಂಧನಕ್ಕೊಳ­ಗಾಗಿದ್ದರು. ಅಲ್ಲದೇ ನಾಗರಾಜ್‌ ಜತೆ ಮಾ.18ಕ್ಕೂ ಮೊದಲು 3-4 ಬಾರಿ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆ ನಡೆಸಿದ್ದು, ಓಕಳೀಪುರಂ ಬಳಿಯಿರುವ ಗಾಂಧಿ ಪಾರ್ಕ್‌ನಲ್ಲಿ ವ್ಯವಹಾರ ನಡೆಸಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರು ಇ.ಡಿ ಮತ್ತು ಐ.ಟಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. 

ಹೋಮ್‌ ಥಿಯೇಟರ್‌ನಲ್ಲಿತ್ತು ಕೋಟಿ ಕೋಟಿ ರೂ.
ನಾಗರಾಜ್‌ ಮನೆ ಮತ್ತು ಕಚೇರಿಯಲ್ಲಿ ಐಷಾರಾಮಿ ಹೋಮ್‌ ಥಿಯೇಟರ್‌ ಇದ್ದು ಮೂರನೇ ಮಹಡಿಯಲ್ಲಿ 40 ಲಕ್ಷ ರೂ. ಮೌಲ್ಯದ ಹೋಂ ಥಿಯೇಟರ್‌, ಕಚೇರಿಯ ನಾಲ್ಕನೇ ಮಹಡಿಯಲ್ಲಿ 70 ಲಕ್ಷ ರೂ. ಮೊತ್ತದ ಐಷಾರಾಮಿ ಹೋಂ ಥಿಯೇಟರ್‌ ಇದೆ. ದಾಳಿ ವೇಳೆ, ಕಚೇರಿಯಲ್ಲಿರುವ ಹೋಂ ಥಿಯೇಟರ್‌ನ ಪಕ್ಕದಲ್ಲೇ ಕೋಟ್ಯಂತರ ರೂ. ಹಳೇ ನೋಟುಗಳನ್ನು ಜೋಡಿ­ಸಿದ್ದು, ಕಾಣದಂತೆ ಬಟ್ಟೆ ಮುಚ್ಚಲಾಗಿತ್ತು.

Advertisement

ಇದೇ ಕೊಠಡಿಯಲ್ಲಿರುವ ಸೋಫಾಸೆಟ್‌ ಕೆಳಭಾಗದಲ್ಲಿ ರಹಸ್ಯ ಕಪಾಟುಗಳನ್ನು ಮಾಡಿಸಿಕೊಂಡು ಮೇಲ್ಭಾಗದಲ್ಲಿ ಫ್ಲೈವುಡ್‌ ಶೀಟ್‌ ಅಳವಡಿಸಿ, ಅದರ ಕೆಳಗೆ ನೋಟು­ಗಳನ್ನು ಜೋಡಿಸಿಡಲಾ­ಗಿತ್ತು.  ಇದಲ್ಲದೇ ಹೋಂ ಥಿಯೇಟರ್‌ನ ಕೊಠಡಿಗೆ ಅಟ್ಟಿಕೊಂಡಂತಿರುವ  ಮತ್ತೂಂದು ಕೊಠಡಿಯ ಬಾಗಿಲು ಒಡೆದು ಅಲ್ಲಿ ಇಟ್ಟಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಆತ ಮಲಗುತ್ತಿದ್ದ ಎಲ್ಲ ಮಂಚಗಳಲ್ಲಿ ಲಾಕರ್‌ ಮಾಡಿಕೊಂಡಿದ್ದು, ಅಲ್ಲಿಯೂ ನೋಟುಗಳು ಹಾಗೂ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

20ನೇ ವಯಸ್ಸಿನಲ್ಲೇ ರೌಡಿ ಪಟ್ಟಿಯಲ್ಲಿ ಸೇರ್ಪಡೆ
ಬೆಂಗಳೂರು:
ತಮಿಳುನಾಡಿನ ಧರ್ಮಪುರಿ ಮೂಲದ ನಾಗರಾಜ್‌ ಅಲಿಯಾಸ್‌ ಬಾಂಬ್‌ ನಾಗ ನಗರದ ಶ್ರೀರಾಂಪುರಕ್ಕೆ ಬಂದು ನೆಲೆಸಿ ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ದರೋಡೆ ಹಾಗೂ ಕೊಲೆ ಪ್ರಕರಣಗಳ ಆರೋಪದ ಮೇಲೆ 20ನೇ ವಯಸ್ಸಿನಲ್ಲೇ ರೌಡಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ. ಬಳಿಕ ರಾಜಕೀಯದಲ್ಲಿ ತೊಡಗಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದ. 

ಸ್ನೇಹಿತ ಶೇಖರ್‌ನ ಜತೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ ನಾಗರಾಜ್‌ ನಾಡಬಾಂಬ್‌ನ್ನು ಸದಾ ಜೇಬಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದ. ಹಣ ವಸೂಲಿ ಮಾಡಿದ ಬಳಿಕ ಬಾಂಬ್‌ ಎಸೆದು ನಾಪತ್ತೆಯಾಗುತ್ತಿದ್ದ. ಹೀಗೆ ಮಚ್ಚಾ ರಾಜೇಂದ್ರ ಎಂಬುವರ ಮನೆ ಮೇಲೆ ನಾಡಬಾಂಬ್‌ ಎಸೆದು ಬಾಂಬ್‌ ನಾಗ ಎಂದು ಕುಖ್ಯಾತಿ ಪಡೆದುಕೊಂಡಿದ್ದ.

ನಗರದ ವಿವಿಧ ಠಾಣೆಗಳಲ್ಲಿ ತನ್ನ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರೌಡಿ ಚಟುವಟಿಕೆ ನಿಲ್ಲಿಸಿ, ಹಸು ಇಟ್ಟುಕೊಂಡು ಹಾಲು ಮಾರಾಟದಲ್ಲಿ ತೊಡಗಿದ್ದ. 
ಇದರಿಂದ ಈತನನ್ನು ಪಾಲ್‌ ನಾಗ ಎಂದೂ ಕರೆಯುತ್ತಿದ್ದರು. ತನ್ನದೇ  ಪಡೆ ಕಟ್ಟಿಕೊಂಡು ಕೆಲ ಉದ್ಯಮಿಗಳನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ. ಈ ರೀತಿ ಸುಮಾರು ಹತ್ತಾರು ಕೋಟಿ ರೂ.ಗೂ ಅಧಿಕ ಆಸ್ತಿ ಸಂಪಾದನೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ಮುಖಂಡರೊಬ್ಬರ ಮೂಲಕ ರಾಜಕೀಯ ಪ್ರವೇಶಿಸಿ ಪಾಲಿಕೆ ಸದಸ್ಯನಾಗಿದ್ದ ನಾಗ, ನಂತರ ವಿಧಾನಸಭೆ ಚುನಾವಣೆಗೂ ಗಾಂಧಿನಗರ ಕ್ಷೇತ್ರದಿಂದ ಹಲವು ಬಾರಿ ಸ್ಪರ್ಧಿಸಿದ್ದ. ಒಮ್ಮೆ  ಕೆಲವೇ ಮತಗಳ ಅಂತರದಿಂದ ಸೋತಿದ್ದ. ಪಾಲಿಕೆ ಚುನಾವಣೆ­ಯಲ್ಲಿ ತನ್ನ ಜತೆ ಪತ್ನಿಯನ್ನೂ ಸ್ಪರ್ಧೆಗೆ ಇಳಿಸಿದ್ದ. ಇಬ್ಬರೂ ಗೆಲುವು ಸಾಧಿಸಿದ್ದರು.

ಸಿಕ್ಕಿದ್ದೇನು?
14.80 ಕೋಟಿ ರೂ. ಅಮಾನ್ಯಗೊಂಡ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳು. ಎರಡು ಲಾಂಗ್‌ ಹಾಗೂ ಮಾರಕಾಸ್ತ್ರ. ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಪತ್ರ.

ಎಲ್ಲೆಲ್ಲಿ ಆಸ್ತಿ?
ನೆಲಮಂಗಲದ ಕಾಸರಘಟ್ಟದಲ್ಲಿ ಭವ್ಯ  ಬಂಗಲೆ, ಫಾರಂ ಹೌಸ್‌, ಗೌರಿಬಿದನೂರು ಬಳಿಯೊಂದು ಫಾರಂ ಹೌಸ್‌ ಹಾಗೂ ತಮಿಳುನಾಡಿನ ಧರ್ಮ ಪುರಿಯಲ್ಲಿ ಆಸ್ತಿ, ಶ್ರೀರಾಮಪುರ ವ್ಯಾಪ್ತಿಯಲ್ಲಿ ನಾಲ್ಕು ಅಂತಸ್ತಿನ ಐದಾರು ವಾಣಿಜ್ಯ ಕಟ್ಟಡಗಳು ಸೇರಿ ಕೋಟ್ಯಂತರ ರೂ. ಆಸ್ತಿ, ದಾಖಲೆಗಳು ದಾಳಿ ವೇಳೆ ಲಭ್ಯವಾಗಿವೆ.

ಉದ್ಯಮಿ ಉಮೇಶ್‌ ಕೊಟ್ಟ ದೂರಿನ ಮೇರೆಗೆ ನಾಗರಾಜ್‌ ಮನೆ  ತಪಾಸಣೆ ಮಾಡಲಾಗಿದೆ. ಈ ವೇಳೆ 14.80 ಕೋಟಿ ರೂ. ಹಳೆಯ ನೋಟುಗಳು, ಮಾರಕಾಸ್ತ್ರಗಳು ಪತ್ತೆಯಾಗಿವೆ. ನಾಗರಾಜ್‌ಗೆ ಅಷ್ಟೊಂದು ಹಳೇ ನೋಟುಗಳು ಹೇಗೆ ಸಿಕ್ಕವು ಎಂಬುದನ್ನು ತನಿಖೆ ಮಾಡಬೇಕಿದೆ. ಆತನ ಬಳಿಯಿದ್ದ ಆಸ್ತಿ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ.
-ಹೇಮಂತ್‌ ನಿಂಬಾಳ್ಕರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next