Advertisement

ಮರೆಯಾದ ಡಿಸ್ಕೋ ಕಿಂಗ್‌ ಬಪ್ಪಿ ಲಹಿರಿ

11:49 PM Feb 16, 2022 | Team Udayavani |

ಸಿನೆಮಾ ಸಂಗೀತವನ್ನು ಮೈಮರೆತು ಆಲಿಸುತ್ತಿದ್ದವರು ಹಾಡು ಕೇಳುತ್ತಿದ್ದಂತೆ ಎದ್ದು ಕುಣಿಯುವಂತೆ ಮಾಡಿದ್ದು ಬಪ್ಪಿ ಲಹಿರಿ. 60-70ರ ದಶಕದಲ್ಲಿ ಪಾಶ್ಚಾತ್ಯ ದೇಶಗಳ ಜನರಿಗೆ ಹುಚ್ಚು ಹಿಡಿಸಿದ್ದ ಡಿಸ್ಕೋ ಸಂಗೀತವನ್ನು ಭಾರತದ ಸಾಂಪ್ರ ದಾಯಿಕ ಸಿನೆಮಾ ಸಂಗೀತದೊಂದಿಗೆ ಬೆಸೆದು, ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಹೊಸ ಟ್ರೆಂಡ್‌ ಸೃಷ್ಟಿ ಮಾಡಿದ ಹೆಗ್ಗಳಿಕೆ ಅವರದ್ದು.

Advertisement

ಬಪ್ಪಿ ಲಹಿರಿ ಹುಟ್ಟಿದ್ದು ಸಂಗೀತಗಾರರ ಕುಟುಂಬ ದಲ್ಲಿ. ತಂದೆ ಅಪಾರೇಶ್‌ ಲಹಿರಿ, ತಾಯಿ ಬಾನ್ಸುರಿ ಲಹಿರಿ ಇಬ್ಬರೂ ಬಂಗಾಲಿ ಹಾಡುಗಾರರು. ಅಲ್ಲದೆ ಶಾಸ್ತ್ರೀಯ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಿದವರು. ಅವರಿಗೆ ಜನಿಸಿದ ಏಕೈಕ ಸಂತಾನವೆಂದರೆ ಅದು ಬಪ್ಪಿ ಲಹಿರಿ.

ಹಿಂದಿ ಚಿತ್ರರಂಗ ಕಂಡ ಅತೀ ದೊಡ್ಡ ಗಾಯಕರಲ್ಲೊಬ್ಬರಾದ ಕಿಶೋರ್‌ ಕುಮಾರ್‌, ಬಪ್ಪಿ ಲಹರಿಯ ಆಪ್ತ ಸಂಬಂಧಿಯಾ­ಗಿದ್ದರು. ಹಾಗಾಗಿ ಚಿಕ್ಕಂದಿನಿಂದ ಸಂಗೀತದ ನಂಟು ಬಪ್ಪಿಯವರಿಗೆ ಬಂದಿತ್ತು. 3ನೇ ವರ್ಷದಲ್ಲಿ ದ್ದಾಗಿ­ನಿಂದಲೇ ತಬಲಾದಲ್ಲಿ ಆಸಕ್ತಿ ಹೊಂದಿ ಅದನ್ನು ಅಭ್ಯಾಸ ಮಾಡಿದ್ದರು.

ಮೊದಲ ಸಿನೆಮಾ
ಬಂಗಾಲಿ
ಲಹಿರಿ, ಮೊದಲು ಸಂಗೀತ ನೀಡಿದ್ದು “ದಾದು’ ಎಂಬ ಬಂಗಾಲಿ ಸಿನೆಮಾಕ್ಕೆ. ಆನಂತರ “ನನ್ಹಾ’ ಶಿಕಾರಿ ಎಂಬ ಹಿಂದಿ ಚಿತ್ರಕ್ಕೆ ಸಂಗೀತ ನೀಡಿದ್ದರು. ಆದರೆ ಇವರೆಡರಲ್ಲಿ ಮೊದಲು ಬಿಡುಗಡೆಯಾಗಿದ್ದು ನನ್ಹಾ ಶಿಕಾರಿ (1973), ದಾದು ಚಿತ್ರ (1974) ಅನಂತರ ಬಿಡುಗಡೆಯಾಯಿತು.

ಕನ್ನಡ ಪ್ರೇಕ್ಷಕರ ಜತೆಗಿನ ನಂಟು
ಬಪ್ಪಿಯವರನ್ನು ಕನ್ನಡಕ್ಕೆ ಕರೆತಂದಿದ್ದು ಹಿರಿಯ ನಟ, ನಿರ್ದೇಶಕ ದ್ವಾರಕೀಶ್‌. 1986ರಲ್ಲಿ ಅವರ ನಿರ್ದೇಶನ ದಲ್ಲಿ ಮೂಡಿಬಂದಿದ್ದ ಆಫ್ರಿಕಾದಲ್ಲಿ ಶೀಲಾ ಎಂಬ ಚಿತ್ರದ ಮೂಲಕ ಬಪ್ಪಿ, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅನಂತರ ಹಿಂದಿ ಚಿತ್ರ “ಸೌತೇನ್‌’ ಚಿತ್ರದ ಕನ್ನಡ ಅವತರಣಿಕೆಯಾದ “ಕೃಷ್ಣಾ ನೀ ಬೇಗನೆ ಬಾರೋ’ ಸಿನೆಮಾಕ್ಕೂ ಬಪ್ಪಿಯವರೇ ಸಂಗೀತ ನೀಡಿದರು. “ಕೃಷ್ಣಾ ನೀ ಬೇಗನೇ ಬಾರೋ’ ಚಿತ್ರ ಕೂಡ 1986ರಲ್ಲಿ ತೆರೆಕಂಡು, ಅದರ ಹಾಡುಗಳು ಸೂಪರ್‌ ಹಿಟ್‌ ಆದವು.

Advertisement

ಇದಾದ ಅನಂತರ ಬಪ್ಪಿ ಪುನಃ ಕನ್ನಡಕ್ಕೆ ಬಂದಿದ್ದು 1989ರಲ್ಲಿ ತೆರೆಕಂಡ, ಅಂಬರೀಷ್‌ ಅಭಿನಯದ “ಗುರು’ ಚಿತ್ರದ ಮೂಲಕ. ಅನಂತರ 1991ರಲ್ಲಿ ತೆರೆಕಂಡಿದ್ದ ಕನ್ನಡ-ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣವಾದ “ಪೊಲೀಸ್‌ ಮತ್ತು ದಾದಾ’ ಚಿತ್ರಕ್ಕೆ ಅವರು ಸಂಗೀತ ನೀಡಿದ್ದರು.

2014ರಲ್ಲಿ ತೆರೆಕಂಡ ನೀನಾಸಂ ಸತೀಶ್‌ ಅಭಿನಯದ “ಲವ್‌ ಇನ್‌ ಮಂಡ್ಯ’ ಸಿನೆಮಾದಲ್ಲಿ “ಕರೆಂಟು ಹೋದ ಟೈಮಲ್ಲಿ’ ಎಂಬ ಹಾಡನ್ನು ಅನೂಪ್‌ ಸಿಳೀನ್‌ ಸಂಗೀತ ನಿರ್ದೇಶನದಲ್ಲಿ ಹಾಡಿದ್ದರು.

1981ರಲ್ಲಿ ಬಂಗಾಲಿ ಭಾಷೆಯಲ್ಲಿ ತೆರೆಕಂಡಿದ್ದ ಸಾಹೀಬ್‌ ಸಿನೆಮಾ, 1985ರಲ್ಲಿ ಹಿಂದಿಯಲ್ಲಿ ಸಾಹೇಬ್‌ ಆಗಿ ತೆರೆಕಂಡಿತ್ತು. ಆ ಸಿನೆಮಾಕ್ಕೆ ಬಪ್ಪಿ ಲಹಿರಿಯವರೇ ಸಂಗೀತ ನೀಡಿದ್ದರು. ಅದೇ ಸಿನೆಮಾ 1986ರಲ್ಲಿ ಕನ್ನಡದಲ್ಲಿ “ಕರ್ಣ’ ಎಂಬ ಹೆಸರಿನಲ್ಲಿ ರಿಮೇಕ್‌ ಆಯಿತು. ವಿಷ್ಣುವರ್ಧನ್‌ ಅಭಿನಯದ ಆ ಚಿತ್ರಕ್ಕೆ ಸಂಗೀತ ನೀಡಿದ್ದು ದಿಗ್ಗಜ ಎಂ.ರಂಗರಾವ್‌. ಹಾಗಿದ್ದರೂ ಹಿಂದಿಯ ಸಾಹೇಬ್‌ ಚಿತ್ರದಲ್ಲಿ ಸೂಪರ್‌ ಹಿಟ್‌ ಆಗಿದ್ದ ಬಪ್ಪಿ ಲಹಿರಿಯವರ ಎರಡು ಹಾಡುಗಳ ಟ್ಯೂನ್‌ಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಯಿತು. ಆ ಎರಡು ಟ್ಯೂನ್‌ಗಳಲ್ಲಿ ಮೂಡಿಬಂದ “ಪ್ರೀತಿಯೇ ನನ್ನುಸಿರು..’ ಹಾಗೂ “ಆಹಾ.. ನನ್ನ ಜೊತೆಯಲ್ಲಿ ಪ್ರೇಯಸಿ ನೀನಿರುವಾಗ…’ ಹಾಡುಗಳು ಈಗಲೂ ಜನಪ್ರಿಯ.

ಮ್ಯಾಜಿಕ್‌ ಆಫ್ 12
ಬಪ್ಪಿ ಸಂಗೀತ ನೀಡಿರುವ ಚಿತ್ರಗಳಲ್ಲಿ 12 ಚಿತ್ರಗಳು ಸಿಲ್ವರ್‌ ಜ್ಯುಬಿಲಿ ಆಚರಿಸಿವೆ. ಅಮಿತಾಭ್‌ ಅಭಿ ನಯದ ನಮಕ್‌ ಹಲಾಲ್‌ನಲ್ಲಿರುವ “ಭಜೇ ಗುಂಗುರು..’ ಎಂಬ ಭಾರತೀಯ ಕ್ಲಾಸಿಕಲ್‌, ಪಾಪ್‌ ಸಂಗೀತಗಳ ಸಂಯೋಗದ ಹಾಡು 12 ನಿಮಿಷಗಳಷ್ಟು ದೊಡ್ಡದು!

ಆಬ್‌ಸ್ಟ್ರಕ್ಟಿವ್‌ ಸ್ಲಿಪ್‌ ಆಪ್ನಿಯಾ ಎಂದರೇನು?
ವೈದ್ಯರ ಪ್ರಕಾರ, ಬಪ್ಪಿ ನಿಧನಕ್ಕೆ “ಆಬ್‌ಸ್ಟ್ರಕ್ಟಿವ್‌ ಸ್ಲಿಪ್‌ ಆಪ್ನಿಯಾ’ (ಒಎಸ್‌ಎ) ಕಾರಣ. ಈ ಸಮಸ್ಯೆಯ ವ್ಯಕ್ತಿ ನಿದ್ರೆಯಲ್ಲಿರುವಾಗ ಆತನ ಉಸಿರಾಟ, ಆ ವ್ಯಕ್ತಿಯ ಅರಿವಿಲ್ಲದಂತೆ ನಿಂತು ಹೋಗುತ್ತದೆ. ಅದರಿಂದ ಉಸಿರು ಕಟ್ಟಿದಂತಾಗಿ ಆತ ಎಚ್ಚರವಾದಾಗ ಪುನಃ ಉಸಿರಾಟ ಶುರು ಆಗುತ್ತದೆ. ನಿದ್ರೆಗೆ ಜಾರಿದ ತತ್‌ಕ್ಷಣ ಗಂಟಲಿನ ಸ್ನಾಯುಗಳು ವಿಶ್ರಾಂತಿಗೆ ಜಾರಿ, ವಾಯುನಾಳಕ್ಕೆ ಗಾಳಿ ಸರಬರಾಜು ನಿಲ್ಲುವುದೇ ಈ ಸಮಸ್ಯೆಗೆ ಕಾರಣ.

ಚಿನ್ನದ ವ್ಯಾಮೋಹ
ಬಪ್ಪಿ ಲಹಿರಿ, ತಮ್ಮ ಹಾಡುಗಳಿಂದ ಎಷ್ಟು ಗುರುತಿಸಿಕೊಂಡಿದ್ದಾರೋ ತಮ್ಮ ಚಿನ್ನದ ಮೇಲಿನ ವ್ಯಾಮೋಹ ದಿಂದಲೂ ಅಷ್ಟೇ ದೊಡ್ಡಮಟ್ಟದಲ್ಲಿ ಗುರುತಿಸಿ­ಕೊಂಡಿದ್ದಾರೆ. ಅವರಿಗೆ ಚಿನ್ನ ಅಂದ್ರೆ ಬಲು ಇಷ್ಟ. ಆದರೆ ಅದು ಸ್ವಾಭಾವಿಕವಾಗಿ ಬಂದಿದ್ದಲ್ಲ. ಅವರು ಚಿಕ್ಕಂದಿನಲ್ಲಿದ್ದಾಗ ಅವರ ತಾಯಿ, “ನೀನು ಚಿನ್ನದ ಆಭರಣಗಳನ್ನು ತೊಡು. ಅದು ನಿನಗೆ ಅದೃಷ್ಟ ತಂದು ಕೊಡುತ್ತೆ’ ಎಂದು ಹೇಳಿದ್ದರಂತೆ. ಹಾಗಾಗಿ ಬಪ್ಪಿ ಲಹಿರಿ ಚಿನ್ನದ ಆಭರಣಗಳನ್ನು ಹೇರಿಕೊಂಡೇ ಇರುತ್ತಿದ್ದರು! ಬಿಡುವಿಲ್ಲದ ಕೆಲಸಗಳ ನಡುವೆಯೂ ಅವುಗಳನ್ನು ಆಗಾಗ ತೊಳೆದು ಕೇಸ್‌ಗಳಲ್ಲಿ ಹಾಕಿ ಸಂರಕ್ಷಿಸಿ ಇಡುತ್ತಿದ್ದರಂತೆ.

2014ರಲ್ಲಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ತಮ್ಮ ಆಸ್ತಿ ಘೋಷಣೆ ಮಾಡಿದ್ದರು. ಅದರಲ್ಲಿ, 754 ಗ್ರಾಂ. ಚಿನ್ನ, 4.62 ಕೆಜಿ ಬೆಳ್ಳಿ ಹೊಂದಿರು­ ವು­ದಾಗಿ ತಮ್ಮ ಅಫಿದವಿತ್‌ನಲ್ಲಿ ಉಲ್ಲೇಖೀಸಿದ್ದರು. ಈಗ ಅವರ ನಿಧನ ಅನಂತರ ಅವರ ಆ ಎಲ್ಲ ಆಭರಣ ಗಳನ್ನು ಸಂರಕ್ಷಣೆ ಮಾಡಿಡುವುದಾಗಿ ಅವರ ಕುಟುಂಬ ಮೂಲಗಳು ಹೇಳಿವೆ.

ರಾಜಕೀಯಕ್ಕೂ ಬಂದಿದ್ದರು!
2014ರಲ್ಲಿ ಭಾರತೀಯ ಜನತಾ ಪಾರ್ಟಿ ಪ್ರವೇಶಿಸುವ ಮೂಲಕ ಬಪ್ಪಿ ಲಹಿರಿ ರಾಜಕೀಯಕ್ಕೂ ಕಾಲಿಟ್ಟಿದ್ದರು. ಅದೇ ವರ್ಷ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಲದ ಶ್ರೀರಾಮ್‌ಪುರ್‌ ಜಿಲ್ಲೆಯಿಂದ ಸ್ಪರ್ಧಿಸಿದ್ದರು. ಆದರೆ ಎದುರಾಳಿ ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ ವಿರುದ್ಧ ಸೋಲು ಅನುಭವಿಸಿದ್ದರು.

ಬಪ್ಪಿ ಲಹಿರಿ ಸರಿಸಾಟಿಯಿಲ್ಲದ ಸಂಗೀತ ನಿರ್ದೇಶಕ. ಅವರ ಹಾಡುಗಳು ಭಾರತ ದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಜನಪ್ರಿಯ.
– ರಾಮನಾಥ್‌ ಕೋವಿಂದ್‌, ರಾಷ್ಟ್ರಪತಿ

ಭಾವನೆಗಳನ್ನು ಅರಳಿಸುವಂಥ ಶಕ್ತಿ ಬಪ್ಪಿ ಲಹಿರಿ ಯವರ ಸಂಗೀತದಲ್ಲಿತ್ತು. ಅವರ ಸಂಗೀತ ಸೇವೆ ಹಲವು ಪೀಳಿಗೆಗಳ ನಡುವೆ ನಂಟು ಬೆಸೆಯುತ್ತದೆ.
– ನರೇಂದ್ರ ಮೋದಿ, ಪ್ರಧಾನಿ

ರೆಸ್ಟ್‌ ಇನ್‌ ಪೀಸ್‌ ಬಪ್ಪಿ ದಾದಾ. ನೀವು ಎಂದೆಂದಿಗೂ ಭಾರತೀಯ ಚಿತ್ರ ಸಂಗೀತದ ಡಿಸ್ಕೋ ಕಿಂಗ್‌ ಆಗಿರಲಿದ್ದೀರಿ.
-ಎ.ಆರ್‌.ರೆಹಮಾನ್‌, ಸಂಗೀತ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next