ಸಿನಿಮಾರಂಗದಲ್ಲಿ ತೆರೆಯ ಮೇಲೆ ಕಾಣುವ ಅದ್ದೂರಿ ದೃಶ್ಯ ಕಾವ್ಯ, ನೃತ್ಯ, ಹೊಡೆದಾಟ, ಸ್ಟಂಟ್ ದೃಶ್ಯಗಳ ಹಿಂದೆ ಇರುವ ನಿಜವಾದ ಹೀರೋಗಳು ತೆರೆಮರೆಯಲ್ಲಿಯೇ ಇರುತ್ತಾರೆ. ಚಿತ್ರರಂಗದಲ್ಲಿ ತೆರೆಯ ಹಿಂದಿನ ಬದುಕಿನ ಮತ್ತೊಂದು ಲೋಕ ಅನಾವರಣಗೊಳ್ಳೋದು ಕಡಿಮೆ. ಪ್ರತಿಯೊಂದು ದೃಶ್ಯದ ಹಿಂದೆ, ಸಿನಿಮಾದಲ್ಲಿ ಒಬ್ಬೊಬ್ಬರ ಶ್ರಮ ಇರುತ್ತದೆ. ಅದಕ್ಕೆ ಮತ್ತೊಂದು ಸೇರ್ಪಡೆ ಬಾಲಿವುಡ್ ನಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಫೈಟರ್ ಶೆಟ್ಟಿ ಎಂದೇ ಖ್ಯಾತರಾದವರು ಕನ್ನಡಿಗ ಎಂ.ಬಿ.ಶೆಟ್ಟಿಯವರ(ಮುಧು ಬಾಬು ಬಲ್ವಂತ್ ಶೆಟ್ಟಿ) ಬಗ್ಗೆ ಗೊತ್ತಾ?
ಹೋಟೆಲ್ ಸಪ್ಲೈಯರ್ ಎಂಎಂ ಶೆಟ್ಟಿ ಬಾಲಿವುಡ್ ಸ್ಟಂಟ್ ಮ್ಯಾನ್ ಆಗಿದ್ಹೇಗೆ?
ತುಳುನಾಡಿನ (ಮಂಗಳೂರು) ಯುವಕ ಮುದ್ದು ಬಾಬು ಬಾಲ್ಯದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲವಾಗಿತ್ತು. ಗುಂಡು, ಗುಂಡಾಗಿದ್ದ ಮಗನಿಗೆ ಮುದ್ದು ಅಂತ ಹೆಸರಿಟ್ಟು ಬಿಟ್ಟಿದ್ದರು. ಆದರೆ 9ನೇ ವರ್ಷದ ವೇಳೆಗೆ ಮಗನಿಗೆ ವಿದ್ಯೆಯಲ್ಲಿ ಆಸಕ್ತಿ ಇಲ್ಲ ಎಂಬುದನ್ನು ತಂದೆ ಗಮನಿಸಿದ್ದರು. ಹೊಟ್ಟೆಪಾಡಿಗೆ ಏನಾದರು ಮಾಡಿಕೊಳ್ಳಲಿ ಎಂಬ ನೆಲೆಯಲ್ಲಿ ಮಗನನ್ನು ಬಾಂಬೆಗೆ ಕಳುಹಿಸಿ ಬಿಟ್ಟಿದ್ದರು!
ಹೀಗೆ ಉಡುಪಿಯಿಂದ ಸಂಬಂಧಿಕರ ಜತೆ ಬಾಂಬೆಗೆ ಮುದ್ದು ಬಾಬು ಶೆಟ್ಟಿ ಬಂದು ಬಿಟ್ಟಿದ್ದರು. ಮುಂಬೈನ ಕಾಟನ್ ಗ್ರೀನ್ ಪ್ರದೇಶದಲ್ಲಿನ ಟಾಟಾ ಕಂಪನಿಯ ಕ್ಯಾಂಟೀನ್ ನಲ್ಲಿ ಬಾಲಕ ಎಂಬಿ ವೇಯ್ಟರ್ ಕೆಲಸ ಮಾಡತೊಡಗಿದ್ದರು. ವರ್ಷ ಕಳೆಯುತ್ತಾ ಬಂದಂತೆ ವರ ಎಂಬಂತೆ ಶೆಟ್ಟಿಯವರಿಗೆ ದೈಹಿಕವಾಗಿ ಬಲಿಷ್ಠ ಹಾಗೂ ಆಕರ್ಷರಾಗಿದ್ದರು. ನಂತರ ಬಾಕ್ಸಿಂಗ್ ಕಲಿಯಲು ಆರಂಭಿಸಿದ್ದರು. ಅಂದಿನ ಹೆಸರಾಂತ ಕುಸ್ತಿಪಟು ಕೆಎನ್ ಮೆಂಡನ್ ಅವರು ಎಂಎಂರನ್ನು ಗುರುತಿಸಿ ವೃತ್ತಿಪರ ಕುಸ್ತಿಪಟುವನ್ನಾಗಿ ರೂಪುಗೊಳಿಸಲು ನಿರ್ಧರಿಸಿದ್ದರು.
ಕೆಎನ್ ಮೆಂಡನ್ ಅವರ ಕನಸು, ನಿರೀಕ್ಷೆ ಎರಡನ್ನೂ ಎಂಎಂ ಶೆಟ್ಟಿ ಸುಳ್ಳಾಗಿಸಲಿಲ್ಲ. ಸತತ ಎಂಟು ವರ್ಷಗಳ ಕಾಲ ಬಾಕ್ಸಿಂಗ್ ನಲ್ಲಿ ಎಂಬಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಬಳಿಕ ಶೆಟ್ಟಿಯವರು ಹಿಂದಿ ಸಿನಿಮಾರಂಗ ಪ್ರವೇಶಿಸಿದ್ದರು. ಅಂದು ಹಿರಿಯ ಸ್ಟಂಟ್ ನಿರ್ದೇಶಕ ಅಜೀಂ ಭಾಯಿ ಗರಡಿಯಲ್ಲಿ ಕತ್ತಿ ಕಾಳಗ, ಕುದುರೆ ಸವಾರಿ ಹಾಗೂ ಸ್ಟಂಟ್ ಕಲಿಯುವ ಮೂಲಕ ಫೈಟರ್ ಶೆಟ್ಟಿ ಆಗಿ ಹೊರಹೊಮ್ಮಿದ್ದರು.
ಬಾಲಿವುಡ್ ಅಂಗಳದಲ್ಲಿ ಮೊದಲಿಗೆ ಫೈಟರ್, ನಂತರ ಆ್ಯಕ್ಷನ್ ಡೈರೆಕ್ಟರ್ ಆಗಿ ಕೊನೆಗೆ ನಟನಾಗಿ ಮಿಂಚಿದ್ದರು. ಬಲಿಷ್ಠ ದೇಹ, ಬೋಳು ತಲೆಯ ಎಂಬಿ ಮುಖ್ಯವಾಗಿ ಗುರುತಿಸಿಕೊಂಡಿದ್ದು ವಿಲನ್ ಪಾತ್ರದಲ್ಲಿ. 1950ರ ದಶಕದಲ್ಲಿ ಖ್ಯಾತ ನಟರಾಗಿದ್ದ ಪ್ರದೀಪ್ ಕುಮಾರ್ ಮತ್ತು ಪ್ರೇಮ್ ನಾಥ್ ಜತೆ ನಟಿಸಿದ್ದರು. ಎಂಎಂ ಶೆಟ್ಟಿಯೊಳಗೊಬ್ಬ ಅದ್ಭುತ ನಟನಿದ್ದಾನೆ ಎಂಬುದನ್ನು ಗುರುತಿಸಿದ್ದು ಬಾಲಿವುಡ್ ಹಿರಿಯ ನಟ ಪ್ರಾಣ್. ಬಳಿಕ ಬಾಲಿವುಡ್ ನಿರ್ದೇಶಕ ಸುಬೋಧ್ ಮುಖರ್ಜಿ ಅವರ ಬಳಿ ಪ್ರಾಣ್ ಶೆಟ್ಟಿ ಅವರಿಗೆ ಫೈಟ್ ಡೈರೆಕ್ಟರ್ ಆಗಲು ಅವಕಾಶ ಕೊಡುವಂತೆ ಮನವೊಲಿಸಿದ್ದರು.
1955ರ ಮುನಿಮ್ಜಿ ಎಂಬ ರೋಮ್ಯಾಂಟಿಕ್ ಸಿನಿಮಾದಲ್ಲಿ ಮೊದಲ ಬಾರಿಗೆ ಎಂಎಂ ಶೆಟ್ಟಿಯವರು ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ದೇವ್ ಆನಂದ್ ಹೀರೋ, ನಳಿನಿ ಜಯ್ ವಂತ್ ಹೀರೋಯಿನ್ ಆಗಿ ನಟಿಸಿದ್ದರು. 1956ರಲ್ಲಿ ಪಂಜಾಬಿನ ದಂತಕಥೆ ಲವ್ ಸ್ಟೋರಿ ಹೀರಾ ಚಿತ್ರದಲ್ಲಿ ಎಂಬಿ ಶೆಟ್ಟಿ ಸಾಹಸ ಸಂಯೋಜಕರಾಗಿ ದುಡಿದಿದ್ದರು. ಆ್ಯಕ್ಷನ್ ಕೋ ಆರ್ಡಿನೇಟರ್, ಫೈಟ್ ಕಂಪೋಸರ್, ಸ್ಟಂಟ್ಸ್ ಕೋ ಆರ್ಡಿನೇಟರ್, ಸ್ಟಂಟ್ ಮಾಸ್ಟರ್ ಆಗಿ ನೂರಾರು ಸಿನಿಮಾಗಳಲ್ಲಿ ದುಡಿದಿದ್ದರು.
ಕನ್ನಡ, ಹಿಂದಿ ಸಿನಿಮಾರಂಗದಲ್ಲಿ ಮಿಂಚಿದ್ದರು:
1978ರಲ್ಲಿ ಬಿಡುಗಡೆಯಾದ ಆಪರೇಶನ್ ಡೈಮಂಡ್ ರಾಕೆಟ್, ಕಿಲಾಡಿ ಕಿಟ್ಟು, 1980ರ ರುಸ್ತುಂ ಜೋಡಿ, 1981ರ ಸಿಂಹದ ಮರಿ ಸೈನ್ಯ ಸೇರಿದಂತೆ ಕೆಲವು ಕನ್ನಡ ಸಿನಿಮಾದಲ್ಲಿಯೂ ಎಂಬಿ ಶೆಟ್ಟಿ ನಟಿಸಿದ್ದರು. ಬಾಲಿವುಡ್ ನಲ್ಲಿ 1959ರ ಉಜಾಲಾ, 1961ರ ಟೆಲ್ ಮಾಲಿಶ್ ಬೂಟ್ ಪಾಲಿಶ್, ಜಬ್ ಪ್ಯಾರ್ ಕೈಸೆ ಹೋತಾ ಹೈ, 1964ರ ಕಾಶ್ಮೀರ್ ಕಿ ಕಲಿ, 1966ರ ತೀಸ್ರಿ ಮಂಝಿಲ್, 1967ರ ಆ್ಯನ್ ಇವ್ ನಿಂಗ್ ಇನ್ ಪ್ಯಾರೀಸ್, ಸೀತಾ ಔರ್ ಗೀತಾ, ಡಾನ್, ದ ಗ್ರೇಟ್ ಗ್ಯಾಂಬ್ಲರ್, ಬಾಂಬೆ 405 ಮೈಲ್ಸ್, ದೀವಾರ್ ಹೀಗೆ ಸುಮಾರು 700ಕ್ಕೂ ಅಧಿಕ ಸಿನಿಮಾಗಳಲ್ಲಿ ಆ್ಯಕ್ಷನ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಶೆಟ್ಟಿಯವರದ್ದಾಗಿದೆ.
ಸಿಐಡಿ 909, ಸಪೇರಾ, ಚೈನಾ ಟೌನ್, ಆಗ್ ಔರ್ ದಾಗ್, ಯಾದೋನ್ ಕಿ ಬಾರಾತ್, ವಿಕ್ಟೋರಿಯಾ ನಂ.203, ಡಾನ್, ಶಾಲಿಮಾರ್, ಜೈಲ್ ಯಾತ್ರಾ, ಆಜ್ ಕೇ ಶೋಲೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ಎಂಬಿ ಶೆಟ್ಟಿ ತಮ್ಮ ಖದರ್ ತೋರಿಸಿದ್ದರು.
ಈ ಸಿನಿಮಾ ದುನಿಯಾದಲ್ಲಿ ದುಡ್ಡೇ ದೊಡ್ಡಪ್ಪ ಎಂಬುದನ್ನು ಶೆಟ್ಟಿ ಮನಗಂಡಿದ್ದರು. ತಾನು ಹೆಚ್ಚು ವಿದ್ಯಾವಂತನಲ್ಲದ ಕಾರಣ ಬಾಲಿವುಡ್ ನಲ್ಲಿ ದೊಡ್ಡ, ದೊಡ್ಡ (ಇಂಟಲೆಕ್ಚುವಲ್) ಜನರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಶೆಟ್ಟಿಯವರು ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ್ದರು. ಬಿಗ್ ಸ್ಕ್ರೀನ್ ನಲ್ಲಿ ನೀವೇ ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದರಂತೆ. ಧಾರಾಳಿ, ಸ್ನೇಹ ಜೀವಿಯಾಗಿದ್ದ ಶೆಟ್ಟಿಯವರು ಫೈಟ್ ಸನ್ನಿವೇಶದ ಸಂದರ್ಭದಲ್ಲಿ ಮದ್ಯದ ಮೊರೆ ಹೋಗಿದ್ದರು. ನಂತರ ಮದ್ಯವನ್ನು ಅಧಿಕವಾಗಿ ಸೇವಿಸತೊಡಗಿದ್ದರಂತೆ. ತೀವ್ರ ಅನಾರೋಗ್ಯಕ್ಕೊಳಗಾಗಿ 51ನೇ ವಯಸ್ಸಿನಲ್ಲಿಯೇ (1982ರ ಜನವರಿ 23) ವಿಧಿವಶರಾಗಿದ್ದರು.
ಎಂಬಿ ಶೆಟ್ಟಿಯವರಿಗೆ ಇಬ್ಬರು ಪತ್ನಿಯರು. ವಿನೋದಿನಿ ಶೆಟ್ಟಿ ಎಂಬಿ ಅವರ ಮೊದಲ ಪತ್ನಿ. ಇವರಿಗೆ ಇಬ್ಬರು ಪುತ್ರರು. ವಿನೋದಿನಿ ಕಥಕ್ ಡ್ಯಾನ್ಸ್ ತರಬೇತಿ ನೀಡುತ್ತಿದ್ದರು. ಬಳಿಕ ಎಂಬಿ ಕಿರಿಯ ನಟಿ ರತ್ನಾ ಶೆಟ್ಟಿಯನ್ನು ವಿವಾಹವಾಗಿದ್ದರು. ಎಂಬಿ, ರತ್ನಾ ದಂಪತಿಗೆ ಒಬ್ಬ ಪುತ್ರ, ನಾಲ್ವರು ಪುತ್ರಿಯರು. ಅಂದ ಹಾಗೆ ಬಾಲಿವುಡ್ ನ ಫೇಮಸ್ ನಿರ್ದೇಶಕ ರೋಹಿತ್ ಶೆಟ್ಟಿ ಎಂಬಿ ಅವರ ಪುತ್ರ.