ಮುಂಬಯಿ: ಮಹಾರಾಷ್ಟ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇರುವ ಬಾಲಿವುಡ್ ನಟಿ ಕಂಗನಾ ರಣೌತ್ ಸೋಮವಾರ ಸಿಎಂ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಗೆ ಟಾಂಗ್ ನೀಡಿದ್ದಾರೆ.
ಆದಿತ್ಯ ಅವರ ಸ್ನೇಹಿತರ ವಿರುದ್ಧ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಶಿವಸೇನೆ ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಆದಿತ್ಯ ಠಾಕ್ರೆ ಅವರು ಮೂವಿ ಮಾಫಿಯಾ, ಸುಶಾಂತ್‌ರ ಕೊಲೆಗಾರರು ಮತ್ತು ಡ್ರಗ್ ದಂಧೆಕೋರರೊಂದಿಗೆ ಸ್ನೇಹ ಹೊಂದಿದ್ದಾರೆ. ಮೂವಿ ಮಾಫಿಯಾವನ್ನು ನಾನು ಬಯಲಿಗೆಳೆಯಲು ಮುಂದಾಗಿದ್ದೇ ಸಿಎಂ ಉದ್ಧವ್‌ಗೆ ಸಹಿಸಿಕೊಳ್ಳಲಾಗಲಿಲ್ಲ ಎಂದು ಕಂಗನಾ ಕಿಡಿಕಾರಿದ್ದಾರೆ.
ಹಿಮಾಚಲಕ್ಕೆ ವಾಪಸ್: ಶಿವಸೇನೆಯೊಂದಿಗೆ ಜಟಾಪಟಿ ಆರಂಭವಾದ ಅನಂತರ ಸವಾಲೆಸೆಯುವ ರೀತಿಯಲ್ಲಿ ಕಳೆದ ವಾರ ಮುಂಬಯಿಗೆ ಆಗಮಿಸಿದ್ದ ಕಂಗನಾ, ಸೋಮವಾರ ತಮ್ಮ ಹುಟ್ಟೂರು ಹಿಮಾಚಲ ಪ್ರದೇಶಕ್ಕೆ ವಾಪಸಾಗಿದ್ದಾರೆ. ನಿರಂತರ ದಾಳಿ ಮತ್ತು ಅವಹೇಳನಗಳಿಂದ ನಾನು ಭಯಭೀತಳಾಗಿದ್ದೇನೆ.
ಭಾರವಾದ ಹೃದಯದಿಂದ ನಾನೀಗ ಮುಂಬಯಿಯಿಂದ ಹೊರಡುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ, ನಾನು ಅಬಲೆ ಎಂದು ಭಾವಿಸಬೇಡಿ. ಒಬ್ಬ ಮಹಿಳೆಗೆ ಬೆದರಿಕೆ ಹಾಕುವ, ಅವಹೇಳನ ಮಾಡುವ ಮೂಲಕ ಅವರು (ಶಿವಸೇನೆ) ತಮ್ಮದೇ ಘನತೆಯನ್ನು ಕಳೆದುಕೊಂಡರು ಎಂದೂ ಕಂಗನಾ ಹೇಳಿದ್ದಾರೆ.
ಉದ್ಧವ್‌ಗೆ ಅಯೋಧ್ಯೆ ಟ್ರಸ್ಟ್ ಬೆಂಬಲ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಅಯೋಧ್ಯೆಗೆ ಬಾರದಂತೆ ತಡೆಯುವ ಧೈರ್ಯ ಯಾರಿಗೂ ಇಲ್ಲ ಎಂದು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಈ ಮೂಲಕ ಟ್ರಸ್ಟ್ ಉದ್ಧವ್ ಅವರ ಬೆನ್ನಿಗೆ ನಿಂತಿದೆ. ಕಂಗನಾ ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಯೋಧ್ಯೆಯ ಸಂತರು ಹಾಗೂ ವಿಶ್ವ ಹಿಂದೂ ಪರಿಷತ್ ಹೇಳಿಕೆ ನೀಡಿ, ಉದ್ಧವ್ ಅವರಿಗೆ ಇನ್ನು ಮುಂದೆ ಅಯೋಧ್ಯೆಗೆ ಸ್ವಾಗತವಿಲ್ಲ ಎಂದಿದ್ದರು.