ಮುಂಬೈ : ದೊಡ್ಡ ಪರದೆಯಲ್ಲಿ ಸಿನಿಮಾ ಸೋಲಿನಿಂದ ಉಂಟಾಗುವ ಮುಜುಗರ ತಪ್ಪಿಸಿಕೊಳ್ಳಲು ಕೆಲವು ನಟರಿಗೆ ಒಟಿಟಿ ಒಳ್ಳೆಯ ಆಯ್ಕೆಯಾಗಿದೆ ಎಂದು ಬಾಲಿವುಟ್ ನಟ ಜಾನ್ ಅಬ್ರಾಹಾಂ ಹೇಳಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದರಲ್ಲಿ ನೀಡಿರುವ ಸಂದರ್ಶನದಲ್ಲಿ ಒಟಿಟಿ ವಿರುದ್ಧ ಹರಿಹಾಯ್ದಿರುವ ಅವರು, ಚಿತ್ರರಂಗಕ್ಕೆ ಬಿಗ್ ಸ್ಕ್ರೀನ್ ಗಳ ಅಗತ್ಯತೆ ಎಷ್ಟು ಎಂಬುದನ್ನ ಒತ್ತಿ ಹೇಳಿದ್ದಾರೆ. ಕೋವಿಡ್ ಪಿಡುಗು ನಂತರ ತೆರೆದುಕೊಳ್ಳುತ್ತಿರುವ ಚಿತ್ರಮಂದಿರಗಳತ್ತ ಸಿನಿಮಾ ಪ್ರೇಕ್ಷಕರು ಆಗಮಿಸಬೇಕು. ಆದ್ದರಿಂದ ದೊಡ್ಡ ಸ್ಕ್ರೀನ್‍ಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು. ಇದರಿಂದ ಸಿನಿಮಾ ನಿರ್ಮಾಪಕರು ಹಾಗೂ ಚಿತ್ರಮಂದರಿಗಳ ಮಾಲೀಕರಲ್ಲಿ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಎಂದಿದ್ದಾರೆ.
ಸಿನಿ ಪ್ರೇಮಿಗಳನ್ನ ರಂಜಿಸಲೆಂದೇ ನಾನು ಇಲ್ಲಿದ್ದೇನೆ. ಚಿತ್ರಮಂದಿರಗಳ ಮೂಲಕ ನನ್ನ ಸಿನಿಮಾ ತಲುಪುದು ನನಗೆ ಹೆಚ್ಚು ಖುಷಿ ಕೊಡುತ್ತದೆ. ಒಳ್ಳೆಯ ಸಿನಿಮಾಗಳನ್ನು ಮಾಡಲು ನಾನು ಇಷ್ಟಪಡುತ್ತೇನೆ. ಸಿನಿಮಾಗಳ ಸೋಲು ಗೆಲುವು ನನಗೆ ಮುಖ್ಯವಲ್ಲ ಎಂದಿದ್ದಾರೆ ಅಬ್ರಾಹಂ.
ಸಿನಿಮಾಗಳು ಹೆಚ್ಚು ಜನರನ್ನು ತಲುಪುವುದರಲ್ಲಿ ನಾನು ಯಶಸ್ಸು ಕಾಣುತ್ತೇನೆ. ಪ್ರೇಕ್ಷಕರು ದೊಡ್ಡ ಸ್ಕ್ರೀನ್‍ಗಳಲ್ಲಿ ಸಿನಿಮಾ ನೋಡಿ ಸಂಭ್ರಮಿಸಬೇಕು, ಖುಷಿ ಪಡಬೇಕು ಎಂಬುದು ನನ್ನ ಬಯಕೆ. ಇತ್ತೀಚಿಗೆ ನಾವು ಬೆಳ್ಳಿ ಪರದೆಯ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದೇವೆ. ನನ್ನ ಮುಂಬೈ ಸಾಗಾ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ದೊಡ್ಡ ಪರದೆಗಳ ಗತವೈಭವ ಮರಳಿ ಬರುವಂತೆ ಮಾಡುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವೊಂದು ನಟರು ದೊಡ್ಡ ಸ್ಕ್ರೀನ್‍ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಭಯ. ದೊಡ್ಡ ಪರದೆಯಲ್ಲಿ ಸಿನಿಮಾಗಳು ಸೋಲುವುದರಿಂದಾಗುವ ಮುಜುಗರಿಂದ ಪಾರಾಗಲು ಒಟಿಟಿ ವೇದಿಕೆ ಮಾಡಿಕೊಂಡಿದ್ದಾರೆ ಎಂದು ಜಾನ್ ಕಿಡಿ ಕಾರಿದ್ದಾರೆ.
ಇನ್ನು ಜಾನ್ ಅಬ್ರಹಾಂ ಅವರ ‘ಮುಂಬೈ ಸಾಗಾ’ ಈ ವರ್ಷ ತೆರೆ ಕಾಣಲಿದೆ. ಬಹುನಿರೀಕ್ಷೆಯ ಈ ಚಿತ್ರವನ್ನ ದೊಡ್ಡ ಪರದೆಯ ಮೇಲೇ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.