Advertisement
ನವೆಂಬರ್ 4ರ ಸೋಮವಾರ ಬೆಳಗಾದಂತೆ ದೇಶದ ಬಹುಪಾಲು ಕೃಷಿಕರು, ಹೈನುಗಾರರು, ಕೈಗಾರಿಕೋದ್ಯಮಿಗಳು ಹಾಗೂ ಉದ್ಯೋಗಾಕಾಂಕ್ಷಿ ಯುವ ಜನಗಳ ಎದೆಬಡಿತ ಜೋರಾಗಿತ್ತು. ಪ್ರಧಾನಿ ಮೋದಿ ಬ್ಯಾಂಕಾಕ್‌ನಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಎಲ್ಲಿ ಸಹಿ ಮಾಡಿ ಬಿಡುವರೋ ಎಂಬುದೇ ಭಾರತೀಯರ ಆತಂಕಕ್ಕೆ ಕಾರಣವಾಗಿತ್ತು. ಕಳೆದ 8-10ದಿನಗಳಿಂದ ಆರ್‌ಸಿಇಪಿ ಒಪ್ಪಂದದ ವಿರುದ್ಧ ದೇಶಾದ್ಯಂತ ವ್ಯಾಪಕವಾಗಿ ಚರ್ಚೆ-ಪ್ರತಿಭಟನೆಗಳು ನಡೆದಿದ್ದವು. ಸಂತೋಷದ ಸಂಗತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ತಿರಸ್ಕರಿಸಿ ಎಲ್ಲ ಭಾರತೀಯರ ಮನಗೆದ್ದುಬಿಟ್ಟರು. ಅಂತಾರಾಷ್ಟ್ರೀಯ ಕಿರೀಟಕ್ಕಿಂತ ರಾಷ್ಟ್ರದ ಆರ್ಥಿಕ ಸಂರಕ್ಷಣೆ ತನಗೆ ಹೆಚ್ಚು ಮುಖ್ಯವಾದುದು ಎಂಬುದನ್ನು ಮೋದಿ ಸಾಬೀತು ಮಾಡಿದರು.
Related Articles
Advertisement
ಚೀನಾ ಭಾರತದ ಪರಮ ಶತ್ರು ದೇಶ. ಪಾಕಿಸ್ತಾನದೊಂದಿಗೆ ಸೇರಿ ಭಾರತಕ್ಕೆ ನಿರಂತರ ಕಿರುಕುಳ ಕೊಡುತ್ತಿರುವುದು ಎಲ್ಲ ತಿಳಿದದ್ದೆ. ಭಾರತವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದು ಚೀನಾದ ಉದ್ದೇಶ. ಇಂದು ಅಗ್ಗದ ಚೀನಿ ವಸ್ತುಗಳ ಪ್ರವಾಹದಿಂದ ಭಾರತದ ದೊಡ್ಡ, ಸಣ್ಣ ಹಾಗೂ ಕುಟೀರ ಕೈಗಾರಿಕೆಗಳೆಲ್ಲವೂ ಮುಚ್ಚಿ ಹೋಗುತ್ತಿವೆ. ವ್ಯಾಪಾರ ಕೊರತೆ ಕಡಿಮೆ ಮಾಡುವ ಬಗ್ಗೆ ಭಾರತ ಸರಕಾರದ ಕೋರಿಕೆಗಳಿಗೆ ಚೀನಾದ ಉತ್ತರ ತಿರಸ್ಕಾರವೇ ಆಗಿದೆ. ಆರ್‌ಸಿಇಪಿ ಒಪ್ಪಂದದಲ್ಲಿ ನಾವು ಚೀನಾದ ಶೇ.80-90ರಷ್ಟು ಸರಕುಗಳನ್ನು ಸುಂಕವೇ ಇಲ್ಲದೆ ಆಮದು ಮಾಡಿಕೊಳ್ಳಬೇಕಾಗುತ್ತದೆ. ಸುಂಕ ಹಾಕಿಯೇ ಚೀನಾದ ಸ್ಪರ್ಧೆ ಎದುರಿಸಲಾರದೆ ತತ್ತರಿಸುತ್ತಿರುವಾಗ ಇನ್ನು ಸುಂಕವೆ ಇಲ್ಲದೇ ಆಮದು ಮಾಡಿಕೊಳ್ಳುವ ಒಪ್ಪಂದ ಹಗಲು ಕಂಡ ಬಾವಿಗೆ ಇರುಳು ಬಿದ್ದಂತೆ ಆಗುವುದಿಲ್ಲವೇ?
ಇನ್ನು ಕೃಷಿಕರು ಹಾಗೂ ಹೈನುಗಾರರ ಆತಂಕ ವಾಸ್ತವವಾದದ್ದು. ಆಸಿಯಾನ್ ದೇಶಗಳೊಂದಿಗೆ 2010ರಲ್ಲಿ ಮುಕ್ತ ವ್ಯಾಪಾರ ಆದ ನಂತರ ಆ ದೇಶಗಳಿಂದ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ರಬ್ಬರ್, ಏಲಕ್ಕಿ ಮುಂತಾದ ತೋಟಗಾರಿಕೆ ಬೆಳೆಗಳು ಆಮದು ವಿಪರೀತ ಏರಿಕೆಯಾಗಿ ಬೆಲೆಗಳು ಬಿದ್ದು ಹೋಗುತ್ತಿವೆ.
ವರ್ಗೀಸ್ ಕುರಿಯನ್‌ರ ತಪಸ್ಸಿನಿಂದ ಹಾಗೂ ಅವರ ಸಹಸ್ರಾರು ಸಹೋದ್ಯೋಗಿಗಳ ಪರಿಶ್ರಮದಿಂದ ಭಾರತ ಒಂದು ಬೃಹತ್ ಹೈನುಗಾರಿಕೆ ಉದ್ಯಮವನ್ನು ಸಹಕಾರ ತತ್ವದ ಆಧಾರದಲ್ಲಿ ನಿರ್ಮಿಸಿಕೊಂಡಿದೆ. ನಮ್ಮಲ್ಲಿ ಹಾಲಿನ ಕೊರತೆ ಇಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಆರ್‌ಸಿಇಪಿಯಲ್ಲಿ ಇರುವುದರಿಂದ ಒಪ್ಪಂದ ಏರ್ಪಟಲ್ಲಿ ಆ ದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆಗ ಹೈನುಗಾರಿಕೆ ಅಪಾಯಕ್ಕೆ ಈಡಾಗುವುದಿಲ್ಲವೇ? ಪರಿಸ್ಥಿತಿ ಭಾರತಕ್ಕೆ ಇಷ್ಟು ಪ್ರತಿಕೂಲ ವಾಗಿರುವಾಗ ಕೇವಲ ಒಣ ಅಹಂಕಾರಕ್ಕಾಗಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿ, ದೇಶವನ್ನು ಹಾಗೂ ದೇಶದ ಆರ್ಥಿಕತೆಯನ್ನು ಚೀನಾ ರಾಕ್ಷಸ ತೋಡಿರುವ ಗುಂಡಿಗೆ ಕೆಡವಬೇಕಾಗಿತ್ತೆ? ಆರ್‌ಸಿಇಪಿ ಕೇವಲ ಸರಕುಗಳ ವ್ಯಾಪಾರಕ್ಕೆ ಸಂಬಂಧಿಸಿದ್ದಲ್ಲ. ಅದು ಒಂದು ಸಮಗ್ರ ಒಪ್ಪಂದ. ಅದರಲ್ಲಿ ಹೂಡಿಗೆ ಬೌದ್ಧಿಕ ಆಸ್ತಿ ಹಕ್ಕುಗಳು, ವ್ಯಾಜ್ಯ ತೀರ್ಮಾನ ವ್ಯವಸ್ಥೆ ಎಲ್ಲವೂ ಇದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ಸಾರ್ವಜನಿಕರಿಗೆ ಲಭ್ಯವಿಲ್ಲ. ಇದು ನಮ್ಮ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಒಟ್ಟಾರೆಯಾಗಿ ಯಾರಿಗೂ ಬೇಡದ ಆರ್‌ಸಿಇಪಿ ಒಪ್ಪಂದವನ್ನು ತಿರಸ್ಕರಿಸುವುದ ಮೂಲಕ ಮೋದಿ ಜನ ಮೆಚ್ಚುವ ಕೆಲಸವನ್ನೇ ಮಾಡಿದ್ದಾರೆ.
ಕಲಿಯಬೇಕಾದ ಪಾಠಗಳು1 ಭಾರತಕ್ಕೆ ಪ್ರತಿಕೂಲವಾಗಿರುವ ಆಸಿಯಾನ್ ಸೇರಿದಂತೆ ಎಲ್ಲ ಮುಕ್ತ ವ್ಯಾಪಾರ ಒಪ್ಪಂದ ಗಳನ್ನು ಪುನರ್ ವಿಮರ್ಶೆಗೆ ಒಳಪಡಿಸಬೇಕು.
2 ಚೀನಾದ ಸರಕುಗಳು ಆಸಿಯಾನ್ ದೇಶಗಳ ಮೂಲಕ ಸುಂಕತಪ್ಪಿಸಿ ಭಾರತಕ್ಕೆ ನುಗ್ಗುವ ಸಾಧ್ಯತೆಗಳಿವೆ. ಅದನ್ನು ತಡೆಗಟ್ಟುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು.
3 ಭಾರತದ ಕೃಷಿ, ಹೈನುಗಾರಿಕೆ ಹಾಗೂ ಉದ್ಯಮಗಳ ಸ್ಪರ್ಧಾ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.
4 ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲ ಸ್ವದೇಶಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಶತ್ರು ರಾಷ್ಟ್ರ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಹಾಗೂ ಭಾರತೀಯ ಉತ್ಪನ್ನಗಳನ್ನು ಮಾತ್ರಕೊಳ್ಳುವ ಶಪಥ ಮಾಡಬೇಕು.
5 ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸಾರ್ವ ಭೌಮತ್ವ. ಇವೆ ಭಾರತವನ್ನು ಮೇಲೆತ್ತುವ ತತ್ವಗಳು ಎಂಬುದನ್ನು ಮರೆಯಬಾರದು. – ಬಿ.ಎಂ.ಕುಮಾರಸ್ವಾಮಿ