Advertisement

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರ ಅಟ್ಟಹಾಸ; ಉಗ್ರರ ದಾಳಿಗೆ ಮತ್ತಿಬ್ಬರು ಬಲಿ

10:16 PM Oct 16, 2021 | Team Udayavani |

ಶ್ರೀನಗರ: ಕಳೆದೊಂದು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ನಡೆಯುತ್ತಿರುವ ನಾಗರಿಕರ ಹತ್ಯೆಗಳು ಅವ್ಯಾಹತವಾಗಿ ಮುಂದುವರಿದಿವೆ.

Advertisement

ಶನಿವಾರ ಶ್ರೀನಗರದಲ್ಲಿ ಮತ್ತೊಂದು ಸುತ್ತಿನ ದಾಳಿ ನಡೆಸಿರುವ ಉಗ್ರರು, ಅರಬಿಂದ್‌ ಕುಮಾರ್‌ ಶಾ ಹಾಗೂ ವೀರೇಂದ್ರ ಪಾಸ್ವಾನ್‌ ಎಂಬ ಬೀದಿಬದಿ ವ್ಯಾಪಾರಿಗಳನ್ನು ಹತ್ಯೆ ಮಾಡಿದ್ದಾರೆ.

ಶನಿವಾರ ಸಂಜೆ 6:30ರ ಸುಮಾರಿಗೆ ಈದ್ಗಾ ಮೈದಾನದ ಬಳಿ ದಾಳಿ ನಡೆಸಿದ ಉಗ್ರರು, ಅಲ್ಲಿ ಅರಬಿಂದ್‌ ಅವರನ್ನು ಕೊಂದರು. ಆನಂತರ, ಅದೇ ಪ್ರಾಂತ್ಯದ ಮತ್ತೊಂದು ಬೀದಿಯಲ್ಲಿ ದಾಳಿ ನಡೆಸಿ, ಮತ್ತೊಬ್ಬ ಬೀದಿ ವ್ಯಾಪಾರಿ ವೀರೇಂದ್ರ ಅವರನ್ನು ಹತ್ಯೆಗೈದಿದ್ದಾರೆ.

ಈ ಮೂಲಕ ಕಳೆದೊಂದು ವಾರದಲ್ಲಿ ಒಟ್ಟು 9 ನಾಗರಿಕರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಉಗ್ರರ ಈ ಅಟ್ಟಹಾಸವನ್ನು ಮಟ್ಟಹಾಕಲು ಭದ್ರತಾ ಪಡೆಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಈ ಕಾರ್ಯಾಚರಣೆಗಳಲ್ಲಿ ಹಲವಾರು ಯೋಧರು ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ತಡವಾದರೂ ಮಾನ್ಯ: ಸುಪ್ರೀಂ ಕೋರ್ಟ್‌

Advertisement

ಯೋಧರ ಮೃತದೇಹ ಪತ್ತೆ
ಜಮ್ಮು ಕಾಶ್ಮೀರದ ಜಿಲ್ಲೆಯಲ್ಲಿ 3 ದಿನಗಳ ಹಿಂದೆ ಉಗ್ರರ ವಿರುದ್ಧದ ಕಾರ್ಯಾಚರಣೆಯ ವೇಳೆ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಜೂನಿಯರ್‌ ಕಮಿಷನ್ಡ್ ಅಧಿಕಾರಿ (ಜೆಸಿಒ) ಹಾಗೂ ಇನ್ನಿಬ್ಬರು ಯೋಧರ ಮೃತದೇಹಗಳನ್ನು ಸೇನೆ ಪತ್ತೆ ಹಚ್ಚಿದೆ. ಕಾರ್ಯಾಚರಣೆಯ ನಂತರ ಈ ಮೂವರು ಕಾಣೆಯಾಗಿದ್ದು ತಿಳಿದುಬಂದಿತ್ತು. ಆ ಹಿನ್ನೆಲೆಯಲ್ಲಿ, ಇಡೀ ಪ್ರಾಂತ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ಆರಂಭವಾಗಿ 48 ಗಂಟೆಗಳ ನಂತರ, ಮೃತದೇಹಗಳು ಸಿಕ್ಕಿವೆ.

ಇಬ್ಬರು ಉಗ್ರರ ಹತ್ಯೆ
ಪುಲ್ವಾಮಾ ಜಿಲ್ಲೆಯ ಪಾಂಪೊರೆ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಕಮಾಂಡರ್‌ ಉಮರ್‌ ಮುಷ್ತಾಕ್‌ ಖಾಂಡೇ ಮೃತಪಟ್ಟಿದ್ದಾನೆ. ಈ ವರ್ಷ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗವಹಿಸಿದ್ದ ಈತ ಇಬ್ಬರು ನಾಗರಿಕರನ್ನು ಕೊಂದಿದ್ದ ಎಂದು ಹೇಳಲಾಗಿದೆ. ದಾಳಿಯಲ್ಲಿ ಮೃತಪಟ್ಟಿರುವ ಮತ್ತೊಬ್ಬ ಉಗ್ರನ ಗುರುತು ಪತ್ತೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next