Advertisement
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಮೈಸೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಮೂರನೇ ಸಭೆಯಲ್ಲಿ ಸದಸ್ಯರು ಕೆ-ಸೆಟ್ ಪರೀಕ್ಷೆ ಅಕ್ರಮ ಆರೋಪ ಮತ್ತು ಪರೀಕ್ಷೆ ನಡೆಸುವ ಅಧಿಕಾರವನ್ನು ಕೆಇಎಗೆ ವರ್ಗಾಯಿಸಿರುವ ಬಗ್ಗೆ ಪ್ರಶ್ನಿಸಿದರು.
Related Articles
Advertisement
ಅತಿಥಿ ಉಪನ್ಯಾಸಕರ ಖಾಯಂಗೆ ಚರ್ಚೆ: ವಿಶ್ವವಿದ್ಯಾಲಯ ದಲ್ಲಿನ ಸಿಬ್ಬಂದಿ ನೇಮಕಾತಿ ಕ್ರಮ ವಿಧಾನಗಳಿಗೆ ಸಂಬಂಧಿಸಿ ದಂತೆ ನಿಯಮಾವಳಿ ರಚಿಸುವ ಬಗ್ಗೆ ಅನುಮೋದನೆಗೆ ಸಭೆಯ ಗಮನಕ್ಕೆ ಬಂದಾಗ ಮಧ್ಯ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಈಗಾಗಲೇ ಹತ್ತಾರು ವರ್ಷಗಳಿಗೂ ಹೆಚ್ಚು ಕಾಲ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಸೇವೆಯನ್ನು ಪರಿಗಣಿಸಿ ಎಂದರು.
ಸಭೆಯಲ್ಲಿ ಅನುಮೋದನೆ: ಈಗಾಗಲೇ ಬಹಳಷ್ಟು ಮಂದಿ ಅತಿಥಿ ಉಪನ್ಯಾಸಕರು ನಿವೃತ್ತಿ ಅಂಚಿಗೆ ಬಂದಿದ್ದಾರೆ. ನೇಮಕಾತಿ ಸಂದರ್ಭ ಹೊಸಬರಿಗೆ ಅವಕಾಶ ನೀಡುವ ಜತೆಗೆ ಇವರನ್ನೂ ಪರಿಗಣಿಸಿ. ಈ ಬಗ್ಗೆ ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಸರ್ಕಾರಕ್ಕೆ ಕಳುಹಿಸಿಕೊಟ್ಟರೆ ನಾವು ಧ್ವನಿ ಎತ್ತುತ್ತೇವೆ ಎಂದು ಹೇಳಿದರು.
ಸರ್ಕಾರಕ್ಕೆ ಒತ್ತಡ ಹೇರಬೇಕು: ಈ ವೇಳೆ ಮಧ್ಯ ಪ್ರವೇಶಿಸಿದ ವಿಜ್ಞಾನ ನಿಕಾಯ ಡೀನ್ ಪ್ರೊ.ಬಸವರಾಜು ಮಾತನಾಡಿ, ಈ ಸಮಸ್ಯೆ ಹಲವು ವರ್ಷಗಳಿಂದಲೂ ಇದೆ. ನ್ಯಾಯಾಲಯವೂ ಅವರ ಸೇವೆಯನ್ನು ಕಾಯಂ ಮಾಡುವಂತೆ ಆದೇಶಿಸಿದೆ. ಆದರೆ, ಸರ್ಕಾರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಬಗ್ಗೆ ವಿಶ್ವವಿದ್ಯಾಲಯ ಮತ್ತು ಎಲ್ಲಾ ಸಮಿತಿ, ಮಂಡಳಿಗಳು ಒಮ್ಮತದ ತೀರ್ಮಾನ ತೆಗೆದುಕೊಂಡು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ತಿಳಿಸಿದರು.
ಈ ವೇಳೆ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಚಿನ್ನದ ಪದಕ, ಪ್ರೊ. ಸರೋಜ ರಾಮಪ್ಪ ಚಿನ್ನದ ಪದಕ, ಕಮಲಮ್ಮ ಜಿ.ಎ.ಶಿವಲಿಂಗಯ್ಯ ನಗದು ಬಹುಮಾನ ದತ್ತಿ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಜತೆಗೆ ಸ್ವಾಯತ್ತ ಕಾಲೇಜುಗಳಾದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು, ಮಹಾಜನ ಪ್ರಥಮ ದರ್ಜೆ ಕಾಲೇಜು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮತ್ತು ಜೆಎಸ್‌ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಕಾಲೇಜುಗಳಿಗೆ ಪರಾಮರ್ಶನಾ ಸಮಿತಿ ಭೇಟಿ ನೀಡಿ ಸಲ್ಲಿಸಿದ ವರದಿಗೆ ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಕುಲಸಚಿವೆ ವಿ.ಆರ್.ಶೈಲಜಾ, ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಮತ್ತು ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನಭಟ್ ಮತ್ತು ಸದಸ್ಯರು ಇದ್ದರು.
ಕುಲಪತಿಗಳು ಸಭೆ ನಡೆಸಬಹುದೇ? :
ಮೈಸೂರು: ಕೆ-ಸೆಟ್ ಸಂಯೋಜನಾಧಿಕಾರಿಯೂ ಆಗಿದ್ದ ಪ್ರಭಾರ ಕುಲಪತಿಗಳು ಆಗಿರುವ ಪ್ರೊ.ಎಚ್.ರಾಜಶೇಖರ್ ಅವರ ಮೇಲೆ ಆರೋಪ ಕೇಳಿಬಂದಿದೆ. ಜತೆಗೆ ಈ ಬಗ್ಗೆ ವಿಚಾರಣೆಗೆ ಸಮಿತಿಯೂ ನೇಮಕವಾಗಿರುವುದರಿಂದ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಸುವುದು ಸೂಕ್ತವೇ ಎಂದು ವಿಜ್ಞಾನ ನಿಕಾಯ ಡೀನ್ ಪ್ರೊ.ಬಸವರಾಜು ಪ್ರಶ್ನಿಸಿದರು.
ಶುಕ್ರವಾರ ಮೈಸೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಮೂರನೇ ಸಭೆ ಆರಂಭವಾಗುತ್ತಿದ್ದಂತೆ ಎದ್ದುನಿಂತು ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾಲಯವು ನಡೆಸಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್)ಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಕುಲಪತಿಗಳ ವಿರುದ್ಧವೂ ಆರೋಪ ಕೇಳಿಬಂದಿದೆ. ಹಾಗೆಯೇ ಪ್ರಭಾರ ಕುಲಪತಿಗಳಾಗಿರುವುದರಿಂದ ಸಭೆ ನಡೆಸುವುದು ಸೂಕ್ತವೇ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಆರೋಪ ಕೇಳಿಬಂದಾಕ್ಷಣ ಯಾರೂ ಅಪರಾಧಿಗಳಾಗುವುದಿಲ್ಲ. ಪ್ರಭಾರ ಕುಲಪತಿ ಎಂದು ಸರ್ಕಾರ ನೇಮಿಸಿದರೆ ಅವರು ಕುಲಪತಿ ಎಂದೇ ಅರ್ಥ. ಈ ನಿಟ್ಟಿನಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೇ ಸಭೆ ಮುಂದುವರಿಸಿ ಎಂದು ಸಲಹೆ ನೀಡಿದರು.