ಬೆಂಗಳೂರು: ಸರ್ಕಾರ 2 ತಿಂಗಳ ವೇತನ ನೀಡಿದರೂ, ನೌಕರರ ಖಾತೆಗೆ ದಕ್ಕಿದ್ದು ಒಂದು ತಿಂಗಳದ್ದು. ಉಳಿದೊಂದು ಮಾಸಿಕದ ವೇತನದಲ್ಲಿ ಅಲ್ಪ ಸ್ವಲ್ಪ ತಡೆ ಹಿಡಿಯುವ ಸಾಧ್ಯತೆ ಎದುರಾಗಿದೆ. ಕೋವಿಡ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಸರ್ಕಾರ ಜೂನ್, ಜುಲೈ ತಿಂಗಳಿಗೆ ತಲಾ ಶೇ.75ರಂತೆ 121 ಕೋಟಿ ರೂ. ವೇತನ ಬಿಡುಗಡೆ ಮಾಡಿದೆ. ಉಳಿದ ಶೇ.25 ಮೊತ್ತವನ್ನು ಸ್ವಂತ ಸಂಪನ್ಮೂಲಗಳಿಂದ ಭರಿಸುವಂತೆ ಸೂಚಿಸಿದೆ. ಆದರೆ, ಈ ಮಧ್ಯೆ ಲಾಕ್‌ಡೌನ್ ಕಾರಣದಿಂದ ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿದು ಆದಾಯ ಇಳಿಕೆಯಾಗಿದೆ.
ಇದು ಸಂಸ್ಥೆಗೆ ನುಂಗಲಾರದ ತುತ್ತಾಗಿದ್ದು, ನೌಕರರ ವೇತನಕ್ಕೆ “ಕತ್ತರಿ’ ಬೀಳುವ ಸಾಧ್ಯತೆಯಿದೆ. ಲೆಕ್ಕಾಚಾರ ಹೀಗೆ: ಸಂಸ್ಥೆಯಲ್ಲಿ ಸುಮಾರು 35 ಸಾವಿರ ನೌಕರರಿದ್ದು, ಮಾಸಿಕ ವೇತನ 90-100 ಕೋಟಿ ರೂ. ಆಗುತ್ತದೆ. ಹೆಚ್ಚುವರಿ ಡ್ನೂಟಿ, ಬಾಟಾ ಮತ್ತಿತರ ಭತ್ಯೆ ಹೊರತುಪಡಿಸಿದರೂ, 80 ಕೋಟಿ ರೂ. ಪಾವತಿಸ ಬೇಕಾಗುತ್ತದೆ. ಸರ್ಕಾರ ನೀಡಿದ್ದ 121 ಕೋಟಿಯಲ್ಲಿ ಜೂನ್ ವೇತನ 80 ಕೋಟಿ ಪಾವತಿ ಯಾಗಿದೆ. ಉಳಿದದ್ದು 40 ಕೋಟಿ ರೂ. ಅಂದರೆ ಇನ್ನೂ ಶೇ.50 ಮೊತ್ತ ಸಂಗ್ರಹಿಸಬೇಕಾಗಿದೆ. ನಿತ್ಯ ಬರುತ್ತಿರುವ ಆದಾಯ 80 ಲಕ್ಷದಿಂದ 1 ಕೋಟಿ ರೂ. ಅದರಲ್ಲಿ 60 ಲಕ್ಷ ರೂ. ಬರೀ ಡೀಸೆಲ್‌ಗೇ ಖರ್ಚಾಗುತ್ತದೆ. ಜತೆಗೆ 10 ಲಕ್ಷ ರೂ. ಬಸ್‌ಗಳ ನಿರ್ವಹಣೆ ಮತ್ತಿತರ ಕಾರ್ಯಕ್ಕೆ ಬಳಕೆ ಆಗುತ್ತದೆ. ಉಳಿದ 30 ಲಕ್ಷವನ್ನು ತಿಂಗಳಿಗೆ ಲೆಕ್ಕಹಾಕಿದರೂ 9 -10 ಕೋಟಿ ರೂ. ಆಗುತ್ತದೆ. ಹಾಗಿದ್ದರೆ, ಇನ್ನೂ ಕೊರತೆಯಾಗುವ 30 ಕೋಟಿ ರೂ. ಸಂಗ್ರಹಿಸುವುದು ಸಂಸ್ಥೆಗೆ ಸವಾಲಾಗಿದೆ.
ಸದ್ಯ ಸಂಸ್ಥೆ ಮುಂದಿರುವ ಆಯ್ಕೆಗಳು ಎರಡು: ಒಂದು ಪೂರ್ಣ ವೇತನದಲ್ಲಿ ಅಲ್ಪಪ್ರಮಾಣದ ಮೊತ್ತ ತಡೆಹಿಡಿದು, ಲಭ್ಯವಿರುವ ಮೊತ್ತಕ್ಕೆ ಸರಿದೂಗಿಸುವುದು. ಮತ್ತೂಂದು ಬ್ಯಾಂಕ್‌ನಿಂದ ಸಾಲ ಪಡೆಯುವುದು. ಆದರೆ, ಈಗಾಗಲೇ 600 ಕೋಟಿ ರೂ.ಗೂ ಹೆಚ್ಚು ಸಾಲದ ಹೊರೆ ಸಂಸ್ಥೆ ಮೇಲಿದೆ. ಜತೆಗೆ ಕೋವಿಡ್ ಹಾವಳಿಗೂ ಮುನ್ನ ಬಿಎಂಟಿಸಿ ಶಾಂತಿನಗರ ಡಿಪೋದ ಜಾಗ ಅಡವಿಟ್ಟು 200 ಕೋಟಿ ರೂ. ಸಾಲ ಪಡೆದಿದೆ ಎನ್ನಲಾಗಿದೆ. ಇದು ಹೌದು ಎಂದಾದರೆ, ಮತ್ತೆ ಸಾಲ ಕಷ್ಟಸಾಧ್ಯ. ಈ ಮಧ್ಯೆ ಜೂನ್ ವೇತನವನ್ನು ಜು.31ಕ್ಕೆ ಪಾವತಿಸಿದೆ. ಈಗ ಮತ್ತೆ ಆಗಸ್ಟ್ ಅಂತ್ಯದವರೆಗೆ ಹಿಡಿದಿಟ್ಟುಕೊಂಡು, ಇಡೀ ತಿಂಗಳ ಕಾರ್ಯಾಚರಣೆ ಮೂಲಕ ಬರುವ ಆದಾಯ ಸಂಗ್ರಹಿಸಿ ಪಾವತಿಸಲು ಚಿಂತಿಸಬಹುದು.
ನಮಗೇ ವೇತನ ಇಲ್ಲ, ಅಂದ್ರೆ ಹೇಗೆ?: ಕೋವಿಡ್ ಹಾವಳಿ ಮಧ್ಯೆಯೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಜೀವದ ಹಂಗುತೊರೆದು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಸರ್ಕಾರ ಕೊಟ್ಟರೂ ವೇತನ ಪಾವತಿಗೆ ಹಣ ಇಲ್ಲವೆಂದರೆ ಹೇಗೆ? ಎಂದು ಬಿಎಂಟಿಸಿ ಬಸ್ ಚಾಲಕರೊಬ್ಬರು ಕೇಳುತ್ತಾರೆ. ಪ್ರೊಬೇಷನರಿಯಲ್ಲಿದ್ದವರಿಗೆ 16 ಸಾವಿರ ರೂ. ವೇತನ ನೀಡಲಾಗುತ್ತದೆ. ಟ್ರೈನಿ ಇದ್ದವರಿಗೆ ಮಾಸಿಕ 10 ಸಾವಿರ ರೂ. ಇದರಲ್ಲೇ ಕಡಿತ ಅಥವಾ ತಡೆಹಿಡಿದರೆ, ಜೀವನ ನಿರ್ವಹಣೆ ಹೇಗೆ?. ಅದರಲ್ಲೂ ಈಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಇನ್ನೂ ಕಷ್ಟವಾಗಲಿದೆ ಎಂದು ಮತ್ತೂಬ್ಬ ನಿರ್ವಾಹಕ ಅಸಹಾಯಕತೆ ತೋಡಿಕೊಂಡರು.
ಟ್ರಿಪ್ ಕಡಿತದಿಂದ ಹಣ ಉಳಿಕೆ : ಅನಗತ್ಯ ಟ್ರಿಪ್‌ಗ್ಳಿಗೆ ಬಿಎಂಟಿಸಿ ಕತ್ತರಿ ಹಾಕಿದ್ದು, ಇದರಿಂದ ಪ್ರತಿ ಬಸ್‌ನಿಂದ ಪ್ರತಿ ಕಿ.ಮೀ.ಗೆ ಬರುತ್ತಿದ್ದ ಆದಾಯ 17 ರೂ.ಗಳಿಂದ ಈಗ 23ರಿಂದ 24 ರೂ.ಗೆ ಏರಿಕೆಯಾಗಿದೆ. ಸಾಮಾನ್ಯವಾಗಿ ರಾತ್ರಿ ಪಾಳಿ ಬಸ್ ನಿತ್ಯ 230-250 ಕಿ.ಮೀ. ಕಾರ್ಯಾಚರಣೆ ಮಾಡುತ್ತವೆ. ಈಗ ಅದನ್ನು 150 ಕಿ.ಮೀ. ಸೀಮಿತಗೊಳಿಸಲಾಗಿದೆ. ಅದೇ ರೀತಿ, ಸಾಮಾನ್ಯ ಪಾಳಿಯಲ್ಲಿ 150 ಕಿ.ಮೀ.ನಿಂದ 100 ಕಿ.ಮೀ.ಗೆ ತಗ್ಗಿಸಲಾಗಿದೆ. ಇದರಿಂದ ಪ್ರತಿ ಕಿ.ಮೀ.ಗೆ ಬರುತ್ತಿದ್ದ ಆದಾಯ (ಇಪಿಕೆಎಂ) 23-24 ರೂ.ಗೆ ಏರಿಕೆಯಾಗಿದೆ. ಇದು ಒಟ್ಟಾರೆ ಆದಾಯ ಹೆಚ್ಚಳಕ್ಕೆ ಕೊಡುಗೆ ಎನ್ನಬಹುದು. ಜತೆಗೆ ಬಿಎಂಟಿಸಿಯಲ್ಲಿ ಕೆಲವು ವಿಭಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಇದ್ದಾರೆ. ಇದಕ್ಕೆ ಕತ್ತರಿ ಹಾಕಲು ಸಂಸ್ಥೆ ಚಿಂತನೆ ನಡೆಸಿದೆ. ಉದಾಹರಣೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಯೊಬ್ಬರು ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ತಿಂಗಳಿಗೆ ಲಕ್ಷಗಟ್ಟಲೆ ವೇತನ ಇರುತ್ತದೆ. ಇಂತಹ ಹತ್ತಾರು ಅಧಿಕಾರಿಗಳು ಇದ್ದಾರೆ. ಅವರನ್ನು ಮಾತೃ ಸಂಸ್ಥೆಗೆ ವಾಪಸ್ ಕಳುಹಿಸಬಹುದು. ಇದರಿಂದ ಹೊರೆ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ ನಡೆದಿದೆ.
ಅತಿಥಿಗಳ ಸತ್ಕಾರ, ಸಭಾ ವೆಚ್ಚ ಕಡಿತ : ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ಸಂಸ್ಥೆಯ ಎಲ್ಲಾ ದರ್ಜೆಯ ಅಧಿಕಾರಿಗಳಿಗೆ “ಡೆಲಿಗೇಷನ್ ಪವರ್’ ಅಡಿ ಹಂಚಿಕೆಯಾದ “ಅತಿಥಿಗಳ ಸತ್ಕಾರ ಹಾಗೂ ಸಭಾ ವೆಚ್ಚ’ (entertainment and meeting expenses)ಗಳ ಶೇ.25 ಮೊತ್ತವನ್ನು ಮಾತ್ರ ಬಳಸಲು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ. ಸಂಸ್ಥೆಗೆ ಎಲ್ಲಾ ಮೂಲಗಳಿಂದ ಬರುತ್ತಿದ್ದ ಆದಾಯ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ಆಡಳಿತ ವೆಚ್ಚಗಳ ನಿಯಂತ್ರಣ ಅತ್ಯವಶ್ಯಕ. ನಿರ್ದೇಶಕರನ್ನು ಒಳಗೊಂಡಂತೆ ಎಲ್ಲ ದರ್ಜೆಯ ಅಧಿಕಾರಿಗಳಿಗೆ ಅನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ.
–ವಿಜಯಕುಮಾರ್ ಚಂದರಗಿ