ಮಂಬಯಿ : 2017ರ ಬಿಎಂಸಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸವನ್ನು ಭಾರತೀಯ ಜನತಾ ಪಕ್ಷ ವ್ಯಕ್ತಪಡಿಸಿದೆ. ಶಿವಸೇನೆಯೊಂದಿಗಿನ ಸಂಬಂಧ ಹಳಸಿರುವ ಹೊರತಾಗಿಯೂ ತಾನು ಬಿಎಂಸಿ ಚುನಾವಣೆಗಳನ್ನು ಗೆಲ್ಲುವುದು ಖಚಿತ ಎಂದು ಅದು ಹೇಳಿದೆ.
ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ಮತ್ತು ಮಹಾರಾಷ್ಟ್ರದಲ್ಲಿನ ಇತರ 9 ಪೌರಾಡಳಿತ ಸಂಸ್ಥೆಗಳಿಗೆ ಇಂದು ಮಂಗಳವಾರ ಮತದಾನ ನಡೆಯುತ್ತಿದೆ. 3.77 ಕೋಟಿ ಮತದಾರರು 17,331 ಅಭ್ಯರ್ಥಿಗಳನ್ನು 3,210 ಸೀಟುಗಳಿಗಾಗಿ ಇಂದು ಆಯ್ಕೆ ಮಾಡುತ್ತಿದ್ದಾರೆ. ಮತದಾರರು ಉತ್ತಮ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮಿನಿ ಜನರಲ್ ಎಲೆಕ್ಷನ್ ಎಂದೇ ವರ್ಣಿತವಾಗಿರುವ ಈ ಚುನಾವಣೆಯಲ್ಲಿ 10 ಮುನಿಸಿಪಲ್ ಕಾರ್ಪೊರೇಶನ್‌ಗಳು, 11 ಜಿಲ್ಲಾ ಪರಿಷತ್ ಗಳು ಮತ್ತು 118 ಪಂಚಾಯತ್ ಸಮಿತಿಗಳು ದ್ವಿತೀಯ ಹಂತದ ಚುನವಾಣೆಗೆ ಒಳಪಡುತ್ತಿವೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿಂದು ನಾಗ್ಪುರ ಟೌನ್‌ಹಾಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಇದೇ ರೀತಿ ಮಹಾರಾಷ್ಟ್ರದ ಶಿಕ್ಷಣ ಸಚಿವ ವಿನೋದ್ ತಾವಡೆ ಅವರು ತಮ್ಮ ಮತ ಚಲಾಯಿಸಿ, ಮುಂಬಯಿಕಾರರೆಲ್ಲ ತಪ್ಪದೇ ಮತ ಚಲಾಯಿಸುವಂತೆ ಕೋರಿದರು.